ಸಮವಸ್ತ್ರ ಕದ್ದದ್ದು ದೋಬಿ ವಿಭಾಗದಿಂದ!

7

ಸಮವಸ್ತ್ರ ಕದ್ದದ್ದು ದೋಬಿ ವಿಭಾಗದಿಂದ!

Published:
Updated:

ಬೆಂಗಳೂರು: ಸೈಕೊ ಶಂಕರ, ಜೈಲಿನ ದೋಬಿ ವಿಭಾಗದಲ್ಲಿ ಪೊಲೀಸ್ ಸಮವಸ್ತ್ರ ಕದ್ದು ಕೃತ್ಯಕ್ಕೆ ಬಳಸಿಕೊಂಡಿರುವ ಸಂಗತಿ ಹಿರಿಯ ಅಧಿಕಾರಿಗಳ ತನಿಖೆಯಿಂದ ಗೊತ್ತಾಗಿದೆ.`ಜೈಲಿನ ಸಿಬ್ಬಂದಿ, ತಮ್ಮ ಸಮವಸ್ತ್ರಗಳನ್ನು ದೋಬಿ ವಿಭಾಗದಲ್ಲಿ ಇಸ್ತ್ರಿಗೆ ಕೊಡುತ್ತಾರೆ. ಇಸ್ತ್ರಿ ಮಾಡಿಕೊಡುವ ಕೈದಿಗಳಿಗೆ ಸಿಬ್ಬಂದಿ ಹಣ ಕೊಡುತ್ತಾರೆ. ಹೀಗೆ ಇಸ್ತ್ರಿಗೆ ಕೊಟ್ಟ ಸಮವಸ್ತ್ರಗಳನ್ನು ಕೈದಿಗಳು ಕಳವು ಮಾಡುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಅದೇ ರೀತಿ ಸಿಬ್ಬಂದಿಯೊಬ್ಬರು ಇಸ್ತ್ರಿಗೆ ಕೊಟ್ಟಿದ್ದ ಸಮವಸ್ತ್ರವನ್ನು ಜೈಶಂಕರ ಕಳವು ಮಾಡಿ, ಕೃತ್ಯಕ್ಕೆ ಬಳಸಿಕೊಂಡಿದ್ದಾನೆ' ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಆತ ಸಿಬ್ಬಂದಿಗೆ ಗೊತ್ತಾಗದಂತೆ ಬ್ಯಾರಕ್‌ನ ಬೀಗದ ಕೀ ಕಳವು ಮಾಡಿ ಅದನ್ನು ಸಾಬೂನಿಗೆ (ಸೋಪು) ಅಚ್ಚು ಹಾಕಿಕೊಂಡಿದ್ದಾನೆ. ನಂತರ ಕೀಯನ್ನು ಮೊದಲಿದ್ದ ಸ್ಥಳದಲ್ಲೇ ಇಟ್ಟಿದ್ದಾನೆ. ತಮಿಳುನಾಡು ಪೊಲೀಸರು ವಿಚಾರಣೆಗಾಗಿ ಜೈಶಂಕರನನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದ ಸಂದರ್ಭದಲ್ಲಿ ಆತ, ಆ ಸಾಬೂನನ್ನು ಅವರಿಗೆ ಕೊಟ್ಟು ಹಣದ ಆಮಿಷವೊಡ್ಡಿ ನಕಲಿ ಕೀ ಮಾಡಿಸಿಕೊಂಡಿರುವ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆತನಿಗೆ ಕೃತ್ಯಕ್ಕೆ ನೆರವಾದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ತಮಿಳುನಾಡು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗುತ್ತದೆ' ಎಂದು ಅವರು ಹೇಳಿದ್ದಾರೆ.ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿಸಲಾಗಿರುವ ಅಬ್ದುಲ್ ನಾಸರ್ ಮದನಿ ಸೇರಿದಂತೆ ಸುಮಾರು 267 ಕೈದಿಗಳನ್ನು ಆಸ್ಪತ್ರೆ ವಿಭಾಗದಲ್ಲಿ ಇರಿಸಲಾಗಿದೆ. ಅದೇ ವಿಭಾಗದ ಕೆಳ ಅಂತಸ್ತಿನ ಬ್ಯಾರಕ್‌ನಲ್ಲಿ ಜೈಶಂಕರನನ್ನು ಇರಿಸಲಾಗಿತ್ತು. ಆ ವಿಭಾಗದ ಕಾವಲಿಗೆ ಇಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆ ವಿಭಾಗದಿಂದ 150 ಮೀಟರ್ ದೂರದಲ್ಲಿರುವ ಜೈಲಿನ ಗೋಡೆಯನ್ನು ಏರಿ ಆತ ತಪ್ಪಿಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯನಿರ್ವಹಿಸದ ಕ್ಯಾಮೆರಾಗಳು

`ಜೈಲಿನಲ್ಲಿ ಸುಮಾರು 37 ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ. 1996ರಲ್ಲಿ ಅಳವಡಿಸಿದ್ದ ಆ ಕ್ಯಾಮೆರಾಗಳಲ್ಲಿ ಎಂಟು ಕ್ಯಾಮೆರಾಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕ್ಯಾಮೆರಾಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ' ಎಂದು ಅಧಿಕಾರಿಗಳು ದೂರಿದ್ದಾರೆ.`ಜೈಲಿನ ಸುತ್ತ ಕಾಂಪೌಂಡ್‌ನ ಮೇಲೆ ಭದ್ರತೆ ದೃಷ್ಟಿಯಿಂದ ಅಳವಡಿಸಿರುವ 18 ಸುತ್ತಿನ ವಿದ್ಯುತ್ ತಂತಿಗಳಲ್ಲಿ 3ರಲ್ಲಿ ಮಾತ್ರ ವಿದ್ಯುತ್ ಪ್ರವಹಿಸುತ್ತಿದೆ. ಕೆಲ ಸಂದರ್ಭಗಳಲ್ಲಿ ಅವುಗಳಲ್ಲೂ ವಿದ್ಯುತ್ ಪ್ರವಹಿಸುತ್ತಿರುವುದಿಲ್ಲ. ಜೈಶಂಕರ, ಜೈಲಿನ ಆಸ್ಪತ್ರೆಯಲ್ಲಿ ಗ್ಲೌಸ್ ಕಳವು ಮಾಡಿ ಅವುಗಳನ್ನು ಕೈಗೆ ಹಾಕಿಕೊಂಡು ಕಾಂಪೌಂಡ್ ಮೇಲಿನ ವಿದ್ಯುತ್ ತಂತಿ ಮುಟ್ಟಿರುವುದರಿಂದ ಆತನಿಗೆ ವಿದ್ಯುತ್ ಪ್ರವಹಿಸಿಲ್ಲ. ಕೃತ್ಯಕ್ಕೆ ಬಳಸಿದ ಗ್ಲೌಸ್‌ಗಳನ್ನು ಕಾಂಪೌಂಡ್‌ನ ಬಳಿಯೇ ಎಸೆದು ಹೋಗಿದ್ದಾನೆ' ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry