ಸಮಸ್ಯೆಗಳಿಗೆ ಗ್ರಾಮೀಣ ಜೀವನದಲ್ಲಿ ಪರಿಹಾರ

7

ಸಮಸ್ಯೆಗಳಿಗೆ ಗ್ರಾಮೀಣ ಜೀವನದಲ್ಲಿ ಪರಿಹಾರ

Published:
Updated:

ಬೆಂಗಳೂರು: `ದೇಶದ ಯುವಕರ ಶಕ್ತಿ ದುಷ್ಕೃತ್ಯಗಳಿಗೆ ವ್ಯಯವಾಗುತ್ತಿರುವ ಇಂದಿನ ಸಂದರ್ಭದಲ್ಲಿ ದೇಶದ ಏಳಿಗೆಗಾಗಿ ಯುವಕರನ್ನು ಎಚ್ಚರಿಸಬೇಕಾಗಿದೆ~ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು.ನಗರದಲ್ಲಿ ಗುರುವಾರ ಸುರಕ್ಷಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಯುವ ಮನಸ್ಸುಗಳಿಗೆ ಅಪಾರವಾದ ಕನಸುಗಳಿರುತ್ತವೆ. ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಯುವಕರು ತಮ್ಮ ತಮ್ಮ ಮಿತಿಯಲ್ಲಿಯೇ ಸಮಾಜ ಸೇವೆಗೆ ಮುಂದಾಗಬೇಕು. ಸಮಾಜ ಸೇವೆಯಲ್ಲಿ ಸಿಗುವ ಸುಖ ಮತ್ತೆಲ್ಲಿಯೂ ಸಿಗಲಾರದು~ ಎಂದರು.`ಆಧುನಿಕ ಜೀವನ ಶೈಲಿಯಿಂದ ಎದುರಾಗಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನಮ್ಮ ಗ್ರಾಮೀಣ ಜೀವನ ವಿಧಾನದಲ್ಲಿದೆ. ಜನಪದ ಸಂಸ್ಕೃತಿ ನಮ್ಮ ಬೇರು ಎಂಬುದನ್ನು ನಾವು ಮರೆಯಬಾರದು. ಆದರೆ ಇಂದಿನ ದಿನಗಳಲ್ಲಿ ಜನಪದ ಕಲೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ~ ಎಂದು ಅವರು ವಿಷಾದಿಸಿದರು.`ಜನಪದ ಕಲೆಗಳಿಗೆ ವೇದಿಕೆ ಒದಗಿಸಿದರೆ ಸಾಕು, ಕಲೆಗಳು ಉಳಿಯುತ್ತವೆ. ಜನಪದ ಕಲೆ, ಸಂಸ್ಕೃತಿ ಉಳಿಸಲು ಪ್ರಯತ್ನಿಸುತ್ತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು~ ಎಂದು  ಆಶಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, `ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವ ಮನಸ್ಸು ಮಾಡಬೇಕು. ಅನಾಥ ಮಕ್ಕಳ ಬದುಕನ್ನು ರೂಪಿಸಲು ಶ್ರಮಿಸುತ್ತಿರುವ ಸುರಕ್ಷಾ ಚಾರಿಟಬಲ್ ಟ್ರಸ್ಟ್‌ನ ಕೆಲಸ ಉತ್ತಮವಾದುದು. ಇದು ಎಲ್ಲರಿಗೂ ಮಾದರಿಯಾಗಬೇಕು~ ಎಂದರು.ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮತ್ತು ಅವರ ತಂಡದ ಸದಸ್ಯರು ಜನಪದ ಗೀತೆಗಳನ್ನು ಹಾಡಿದರು. ಟ್ರಸ್ಟ್‌ನ ಮಕ್ಕಳು ಜಾನಪದ ನೃತ್ಯ ನಡೆಸಿಕೊಟ್ಟರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಟಿ.ಜಿ.ಗೋಪಿನಾಥ್  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry