ಸಮಸ್ಯೆಗಳ ಆಗರ, ಈ ಜಯಂತಿನಗರ

7

ಸಮಸ್ಯೆಗಳ ಆಗರ, ಈ ಜಯಂತಿನಗರ

Published:
Updated:

ಪಾಂಡವಪುರ: ತಾಲ್ಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಗತಿಕರಿಗೆ, ನಿವೇಶನ ರಹಿತರಿಗಾಗಿ 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಜಯಂತಿ ನಗರ ಎಂಬ ಪುಟ್ಟ ಗ್ರಾಮ, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ನೂರಾರು ಕುಟುಂಬಗಳಿಗೆ ಆಸರೆಯಾಗಲಿ ಎಂಬ ಸದುದ್ದೇಶದಿಂದ ತಾಲ್ಲೂಕು ಆಡಳಿತ ಬಡವರಿಗೆ ನಿವೇಶನಗಳನ್ನೇನು ಹಂಚಿತ್ತು. ಆದರೆ ಸೌಕರ್ಯ ಒದಗಿಸಲು ಮರೆತು ಬಿಟ್ಟಿತು.ಗ್ರಾಮದಲ್ಲಿನ ಶೇ 100ರಷ್ಟು ಮಂದಿ ಕೂಲಿ ಕಾರ್ಮಿಕರಾಗಿದ್ದು, ಬೆಳಗಾದರೆ ಕೆಲಸಕ್ಕೆ ಹೋಗುವ ಇವರು ಬರುವುದು ರಾತ್ರಿಯೇ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಮತ್ತು ನಿಗದಿತ ಸಮಯದಲ್ಲಿ ಬರುವುದಿಲ್ಲವಾದ್ದರಿಂದ ನೀರಿಗಾಗಿ ಕೂಲಿ ಬಿಟ್ಟು ಕಾಯಬೇಕಾದ ಸ್ಥಿತಿ ಇದೆ.

ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ರಸ್ತೆಗಳು ಡಾಂಬರೀಕರಣವಾಗಿಲ್ಲ. ರಸ್ತೆ ತುಂಬ ಕಲ್ಲು, ಮಣ್ಣು ತುಂಬಿಕೊಂಡಿದೆ. ಚರಂಡಿ ನಿರ್ಮಾಣದ ಕನಸಿನ ಮಾತಾಗಿದೆ.ಇಲ್ಲಿನ 15 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಬಲಾಢ್ಯರಿಂದ ಇದನ್ನು ಬಿಡಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಸರ್ಕಾರಿ ಜಮೀನಿಗೆ ಹೊಂದಿಕೊಂಡಂತೆ ಒಂದು ಎಕರೆ ಖರಾಬು ಜಮೀನಿದ್ದು, ಅದನ್ನು ನಿವೇಶನಗಳಾಗಿ ಪರಿವರ್ತಿಸಿ ಬಡವರಿಗೆ ಹಂಚಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಆಗ್ರಹ.ಗ್ರಾಮಕ್ಕೆ ಹೊಂದಿಕೊಂಡಂತೆ ಸ್ಮಶಾನವಿದ್ದು, ಅದಕ್ಕೊಂಡು ಕಂಪೌಂಡ್‌ ನಿರ್ಮಿಸಬೇಕು. ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿ, ಪ್ರತಿ ಮನೆಗಳಿಗೂ ನಲ್ಲಿಯಲ್ಲಿ ನೀರು ತಲುಪಿಸುವ ಕೆಲಸ ಆಗಬೇಕು ಎನ್ನುವುದು ದುಂಡಮ್ಮ, ಲಕ್ಷ್ಮಮ್ಮ, ನಾಗರತ್ನ, ಸಮೀರಾ ಮತ್ತಿತರರ ಒತ್ತಾಯ.ಕೆಲವರಿಗೆ ವಾಸಿಸಲು ಮನೆ ಇಲ್ಲ. ಅಂತಹವರಿಗೆ ಖಾಲಿ ಇರುವ ನಿವೇಶನಗಳನ್ನು ನೀಡಿ, ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎನ್ನುತ್ತಾರೆ ಅಲ್ಲಿನ ಜನತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry