ಮಂಗಳವಾರ, ಮೇ 11, 2021
23 °C

ಸಮಸ್ಯೆಗಳ ಆಗರ ಈ ಬಸಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಮೋರಿಯ ಕೊಳಚೆ ನೀರು, ಮಳೆ ಬಂತೆಂದರೆ ಮನೆಗೇ ನುಗ್ಗುವ ಕಲುಷಿತ ನೀರು, ವಿದ್ಯುತ್ ಕೈಕೊಟ್ಟರೆ ಕೈಪಂಪುಗಳ ಮುಂದೆ ನಿಲ್ಲುವ ಜನರು, ಮಂಡಿಯುದ್ದದ ಹಳ್ಳಗಳಿಂದ ಕೂಡಿದ ರಸ್ತೆಗಳು, ಕೇವಲ ನಾಮ ಮಾತ್ರಕ್ಕೆ ನಿಂತಿರುವ ನೀರಿನ ತೊಂಬೆ, ಕೆಟ್ಟಿನಿಂತಿರುವ ಕೈಪಂಪುಗಳು, ಉರಿಯದ ಬೀದಿ ದೀಪಗಳು...~ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಬೆಳೆಯುತ್ತಲೇ ಇರುತ್ತದೆ. ಹೌದು. ಇವು ತಾಲ್ಲೂಕಿನ ಬಸಾಪುರ ಗ್ರಾಮದ ಸಮಸ್ಯೆಗಳು. ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪುಟ್ಟ ಗ್ರಾಮದಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ಸುಮಾರು 200 ಮನೆಗಳಿವೆ. 900 ಕ್ಕೂ ಹೆಚ್ಚುಜನಸಂಖ್ಯೆ ಹೊಂದಿರುವ ಇಲ್ಲಿ ಸಮಸ್ಯೆಗಳದ್ದೇ ನಿತ್ಯ ನರ್ತನ.ಗ್ರಾಮದ ಯಾವುದೇ ಬೀದಿಗಳಲ್ಲೂ ರಸ್ತೆಯಾಗಿಲ್ಲ. ಕೇವಲ ಮಣ್ಣನ್ನು ಸುರಿದಿರುವ ರಸ್ತೆ ತುಂಬೆಲ್ಲಾ ಅಲ್ಲಲ್ಲಿ ಮಾರುದ್ದದ ಗುಂಡಿ ಬಿದ್ದಿವೆ. ಮಳೆಗಾಲದಲ್ಲಿ ಇಲ್ಲಿ ನಡೆದಾಡುವುದೇ ದುಸ್ತರವಾಗುತ್ತದೆ. ಕೆಲವು ಬೀದಿಗಳಲ್ಲಿ ಚರಂಡಿಯನ್ನೇ ನಿರ್ಮಿಸಿಲ್ಲವಾದ್ದರಿಂದ ರಸ್ತೆಯ ತುಂಬೆಲ್ಲಾ ಕೊಳಚೆ ನೀರು ಹರಿಯುತ್ತದೆ. ಮಳೆಗಾಲದಲ್ಲಿ ಮನೆಯ ಮುಂದೆಯೇ ಕಲುಷಿತ ನೀರು ಹರಿಯುವುದರಿಂದ ಮನೆ ಒಳಗೆ ನುಗ್ಗುತ್ತದೆ. ಹಾಗಾಗಿ ತಮಗೆ ತೊಂದರೆಯಾಗಿದೆ ಎಂದು ಗ್ರಾಮದ ಚಿಕ್ಕತಾಯಮ್ಮ ದೂರುತ್ತಾರೆ.ಇಲ್ಲಿಗೆ ನೀರು ಪೂರೈಸುವ ತೊಂಬೆ ವಿದ್ಯುತ್ ಕೈಕೊಟ್ಟರೆ ಅಥವಾ ರಿಪೇರಿಗೆ ಬಂದರೆ ಕೈಪಂಪುಗಳ ಮುಂದೆ ಜನರು ನೀರಿಗಾಗಿ ಕ್ಯೂ ನಿಲ್ಲುತ್ತಾರೆ. ಇಲ್ಲಿ 6 ಕೈಪಂಪುಗಳಿದ್ದರೂ 2 ಮಾತ್ರ ಕೆಲಸ ಮಾಡುತ್ತದೆ. ಉಳಿದವು ಕೆಟ್ಟು ವರ್ಷಗಳೇ ಉರುಳಿದರೂ ಇದರ ರಿಪೇರಿಯಾಗಿಲ್ಲ. ವಿದ್ಯುತ್ ಕಂಬಗಳಲ್ಲಿ ಬಲ್ಬ್‌ಗಳು ಇದ್ದರೂ ಇದು ರಾತ್ರಿ ಹೊತ್ತು ಉರಿಯುವುದಿಲ್ಲ ಎಂದು ಗ್ರಾಮದ ಮಲ್ಲಶೆಟ್ಟಿ, ಸಿದ್ಧಶೆಟ್ಟಿ ದೂರುತ್ತಾರೆ.ನಮ್ಮ ಗ್ರಾಮಕ್ಕೆ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಹಾಗೂ ಬೀದಿ ದೀಪಗಳ ದುರಸ್ತಿಯ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಈಗಲಾದರೂ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವತ್ತ ಗಮನಹರಿಸಲಿ ಎಂಬುದು ಇಲ್ಲಿನ ಮಾದೇಶ್, ಸಿದ್ಧರಾಜು ಅವರ ಅನಿಸಿಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.