ಬುಧವಾರ, ನವೆಂಬರ್ 13, 2019
22 °C

ಸಮಸ್ಯೆಗಳ ಕಬಂಧ ಬಾಹುವಿನಲ್ಲಿ ಕಂಬಿಬಾಣೆ

Published:
Updated:
ಸಮಸ್ಯೆಗಳ ಕಬಂಧ ಬಾಹುವಿನಲ್ಲಿ ಕಂಬಿಬಾಣೆ

ಕುಶಾಲನಗರ: ಸಮೀಪದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿರುವ ಕಂಬಿಬಾಣೆ ಗ್ರಾಮ ಸಮಸ್ಯೆಗಳ ತವರೂರು. ಇಲ್ಲಿ ಎಲ್ಲವೂ ಸಮಸ್ಯೆಯೆ.ಕುಡಿಯುವ ನೀರು, ರಸ್ತೆ, ಬೀದಿ ದೀಪ ಹೀಗೆ ಇಲ್ಲಿ ಏನು ಇಲ್ಲ ಎಂದು ಕೇಳುವುದಕ್ಕಿಂತ ಏನಿದೆ ಎಂದು ಪ್ರಶ್ನಿಸುವುದೇ ಉಚಿತ!ಏಳನೇ-ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಂಬಿಬಾಣೆ ತಲುಪುವುದಾರೆ ಪಂಚಾಯಿತಿ ಕೇಂದ್ರದಿಂದ ಬರೋಬ್ಬರಿ 9 ಕಿಲೋ ಮೀಟರ್ ಪ್ರಯಾಣಿಸಬೇಕು; ಅಲ್ಲಲ್ಲ 9 ಕಿ.ಮೀ. ನಡೆಯಲೇಬೇಕು! ಏಕೆಂದರೆ ಇಲ್ಲಿಗೆ ಸಾರಿಗೆ ವ್ಯವಸ್ಥೆಯೇ ಇಲ್ಲ. ಸಾರಿಗೆ ಇಲಾಖೆಯ ಒಂದೇ ಒಂದು ಬಸ್ ಮಾತ್ರ ಬರುತ್ತದೆ. ಅದು ದಿನಕ್ಕೆ ಒಂದೇ ಬಾರಿ ಮಾತ್ರ. ಅದನ್ನು ತಪ್ಪಿಸಿಕೊಂಡರೆ ಪಾದಯಾತ್ರೆಯೇ ಗತಿ.ಕಂಬಿಬಾಣೆಯಿಂದ ಸುಂಟಿಕೊಪ್ಪ ತಲುಪುವುದಾದರೆ ರಸ್ತೆ ಮಾರ್ಗ ಪರವಾಗಿಲ್ಲ. ಆದರೆ, ಪಂಚಾಯಿತಿ ಕೇಂದ್ರವಾದ ಏಳನೇ-ಹೊಸಕೋಟೆ ಆಗಿರುವುದರಿಂದ ಜನ ಎಲ್ಲ ಕೆಲಸ ಕಾರ್ಯಗಳಿಗೂ ಅಲ್ಲಿಗೆ ಹೋಗಬೇಕು. ಆದರೆ, ಏಳನೇ-ಹೊಸಕೋಟೆಯಿಂದ ಕಂಬಿಬಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬ ಕಿರಿದಾಗಿದೆ. ಎತ್ತಿನ ಗಾಡಿ ಮಾತ್ರ ಚಲಿಸಲು ಸಾಧ್ಯ. ಒಂದು ವೇಳೆ ಎದುರಿಗೆ ಮತ್ತಿಂದು ವಾಹನ ಬಂತೋ ದೇವರೇ ಗತಿ. ಎರಡು ವಾಹನಗಳು ಎದುಬದುರಾಗಿ ದಾಟಿ ಹೋಗಲು ಸಾಧ್ಯವಾಗದಷ್ಟು ಕಿರಿದಾಗಿದೆ ಈ ರಸ್ತೆ.ಊರೊಳಗಿನ ರಸ್ತೆಯಂತೂ ಸಂಪೂರ್ಣ ಕಿತ್ತು ಹೋಗಿದ್ದು, ಅಸ್ತಿಪಂಜರದಲ್ಲಿ ಮೂಳೆಗಳು ಎದ್ದು ಕಾಣುವ ರೀತಿಯಲ್ಲಿ ಕಲ್ಲುಗಳು ಬಾಯಿ ಬಿಟ್ಟುಕೊಂಡಿವೆ. ಕಾಲೂರಲೂ ಜಾಗವಿಲ್ಲ. ಅಷ್ಟೊಂದು ಕಲ್ಲುಗಳು ರಸ್ತೆಯಲ್ಲಿವೆ. ಸುಮಾರು 15 ವರ್ಷಗಳ ಹಿಂದೆ ಮಾಡಿರುವ ರಸ್ತೆಯಾದ್ದರಿಂದ ರಸ್ತೆ ಮಾಡುವ ಸಂದರ್ಭ ಹಾಕಿದ್ದ ಕಲ್ಲುಗಳು ಈಗ ಮೇಲೆದ್ದವೆ.ರಸ್ತೆ ಸಮಸ್ಯೆಯಿಂದಾಗಿ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ವ್ಯಾಪರಿಗಳು, ನೌಕರರು ತುಂಬ ತೊಂದರೆ ಅನುಭವಿಸಬೇಕಾಗಿದೆ. ಊರಿನಲ್ಲಿ ಯಾರಿಗಾದರೂ ತುರ್ತು ಚಿಕಿತ್ಸೆ ಬೇಕಾದರೆ ಎಲ್ಲಿಲ್ಲದ ಗೋಳು. ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು.ಕನಿಷ್ಠ ಮೂಲ ಸೌಲಭ್ಯಗಳಿಲ್ಲ

ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇದೆ. ಇದಕ್ಕೆ ಕಂಬಿಬಾಣೆ ಕೂಡ ಹೊರತ್ತಾಗಿಲ್ಲ. ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಅದರೂ ಮಧ್ಯರಾತ್ರಿಯಲ್ಲೊ ಅಥವಾ ಎಲ್ಲರೂ ಕೂಲಿ ಕೆಲಸಗಳಿಗೆ ಹೋಗಿರುವಾಗಲೊ ನೀರು ಬಿಡಿವುದರಿಂದ ಕುಡಿಯಲು ನೀರು ದೊರೆಯುತ್ತಿಲ್ಲ.ಇನ್ನು ಚರಂಡಿ ವ್ಯವಸ್ಥೆಯನ್ನು ಕೇಳುವಂತಿಲ್ಲ. ಯಾವುದೋ ಕಾಲದಲ್ಲಿ ಮಾಡಿದ ಚರಂಡಿಗಳು ಸಂಪೂರ್ಣ ಕಿತ್ತು ಹೋಗಿರುವುದರಿಂದ ಚರಂಡಿಗಳಲ್ಲಿ ಗಿಡಗಂಟಿ ಬೆಳೆದುಕೊಂಡಿವೆ. ಹೀಗಾಗಿ ಅತಿಯಾಗಿ ಮಳೆ ಸುರಿಯುವ ಈ ಪ್ರದೇಶದಲ್ಲಿ ಮಳೆ ಬಂದಾಗಲೆಲ್ಲ ರಸ್ತೆ ಮೇಲೆ ನೀರು ಹರಿಯುವ ಸ್ಥಿತಿ ನಿರ್ಮಾಣವಾಗಿದೆ.ಬೀದಿ ದೀಪಗಳು ಹೆಸರಿಗೆ ಮಾತ್ರ ಇವೆ. ಪ್ರತಿ ಕಂಬದಲ್ಲಿ ಬೀದಿ ದೀಪಗಳಿವೆ. ಆದರೂ ಅವುಗಳು ಬೆಳಗುವುದಿಲ್ಲ. ಕಾಫಿ ತೋಟ, ಕಾಡಿನ ನಡುವೇ ಇರುವ ಈ ಊರಿಗೆ ಮುಖ್ಯವಾಗಿ ಬೀದಿ ದೀಪದ ವ್ಯವಸ್ಥೆ ಇರಲೇಬೇಕು. ಇಲ್ಲದಿದ್ದರೆ ಯಾವ ಜಾಗದಲ್ಲಿ ಕಾಡಾನೆಗಳು ಬಂದು ನಿಂತಿವೆ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಜೆ ಆಯಿತೆಂದರೆ ಮನೆಯಿಂದ ಹೊರಗೆ ಜನರು ಬರಲಾರದಂತಹ ಸ್ಥಿತಿ ಉಂಟಾಗಿದೆ.ಆಧಾರ್ ಮಾಡಿಸಲು ಆಧಾರವಿಲ್ಲ

ಕೇಂದ್ರ ಸರ್ಕಾರ ಪ್ರತಿ ನಾಗರಿಕನಿಗೆ ಕೊಡುತ್ತಿರುವ ಆಧಾರ್ ಕಾರ್ಡು ಮಾಡಿಸಲು 9 ಕಿಲೋ ಮೀಟರ್ ದೂರದಲ್ಲಿರುವ 7ನೇ-ಹೊಸಕೋಟೆಗೆ ಹೋಗಬೇಕು. ಅಲ್ಲಗೆ ಹೋಗಬೇಕಾದರೆ ಸಾರಿಗೆ ವ್ಯವಸ್ಥೆ ಸರಿಯಿಲ್ಲ. ನಡೆದು ಹೋಗಲು ಕಾಡಾನೆಗಳ ದಾಳಿ ಇರುವುದರಿಂದ 200 ರೂಪಾಯಿ ಕೊಟ್ಟು ಆಟೊ ಮೂಲಕ ಹೋಗಬೇಕಾದ ಸ್ಥಿತಿ ಇದೆ. ಹೀಗೆ ಹೋದರೂ ಕಂಬಿಬಾಣೆಯಿಂದ ಹೋಗುವಷ್ಟರಲ್ಲಿ ಹತ್ತಿರದ ಊರುಗಳ ಜನರು ಬಂದು ಸಾಲಿನಲ್ಲಿ ಕಾದು ನಿಂತಿರುತ್ತಾರೆ. ಹೀಗಾಗಿ ಪುನಃ ಕಾದುಕಾದು ಪ್ರಯೋಜನವಾಗದೆ ವಾಪಾಸ್ಸಾಗಬೇಕಾದ ಸ್ಥಿತಿ ಇದೆ.ಕುಡಿಯುವ ನೀರಿಗೂ ಬರ

ಮೂರು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಅಲ್ಲದೇ ನೀರು ಬಿಟ್ಟರೂ ಮಧ್ಯ ರಾತ್ರಿಯಲ್ಲೋ ಅಥವಾ ತೋಟಗಳಿಗೆ ಕೆಲಸಕ್ಕೆ ಹೋದ ಸಮಯದಲ್ಲೋ ಬಿಡುವುದರಿಂದ ನೀರಿದ್ದೂ ಪ್ರಯೋಜನವಿಲ್ಲ. ಹೀಗಾಗಿ ಕುಡಿಯುವ ನೀರಿಗೂ ಬರ ಬಂದಿದೆ.

-ಸರಸ್ವತಿ ಲಾಂಪ್ ಸೊಸೈಟಿ ನಿರ್ದೇಶಕಿಚುನಾವಣೆ ವೇಳೆ ಮಾತ್ರ ವಿದ್ಯುತ್

ಕಂಬಿಬಾಣೆ ಎಂದರೆ ಕತ್ತಲೆ ಊರು ಎನ್ನುವಂತ ಸ್ಥಿತಿ ಇದೆ. ಪ್ರತಿ ವಿದ್ಯುತ್ ಕಂಬಗಳಲ್ಲಿ ಹಸರಿಗೆ ಮಾತ್ರ ಬೀದಿ ದೀಪ ಇವೆ. ಅವುಗಳು ಉರಿಯುವುದಿಲ್ಲ. ಆದರೆ, ಯಾವುದೇ ಚುನಾವಣೆಗಳು ಬಂತೆಂದರೆ ಹಗಲು, ರಾತ್ರಿಯಿಡೀ ಉರಿಯುತ್ತವೆ. ಅವರು ಮರಳಿ ಹೋದರೆ ವಿದ್ಯುತ್ ಕೂಡ ಹೋಗುತ್ತದೆ.

-ಶರತ್, ಗ್ರಾಮಸ್ಥ

 

ಪ್ರತಿಕ್ರಿಯಿಸಿ (+)