ಭಾನುವಾರ, ಮೇ 9, 2021
26 °C

ಸಮಸ್ಯೆಗಳ ಕೂಪ ಗೌರಿಕೊಪ್ಪಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆಗಳ ಕೂಪ ಗೌರಿಕೊಪ್ಪಲು

ಹಾಸನ: ಅನೇಕ ಸಂದರ್ಭಗಳಲ್ಲಿ ಸಮಸ್ಯೆಗಳು ಪರಿಹಾರವಾದವು ಎಂದು ನಾವಂದುಕೊಳ್ಳುವುದಿದೆ. ಕೆಲವೊಮ್ಮೆ ನಿಜವಾಗಿಯೂ ಸಮಸ್ಯೆ ಬಗೆಹರಿದಿದ್ದರೆ, ಹಲವು ಸಂದರ್ಭಗಳಲ್ಲಿ ಅವು ಒಂದು ಜಾಗದಿಂದ ಇನ್ನೊಂದು ಕಡೆಗೆ ಸ್ಥಳಾಂತರವಾಗಿರುತ್ತವೆ ಅಷ್ಟೇ, ಹಾಸನದ ಗೌರಿಕೊಪ್ಪಲಿನ ಕತೆ ಇದೇ.ನಗರದಲ್ಲಿ ಕಸದ ರಾಶಿ, ಶುಚಿತ್ವದ ಬಗ್ಗೆ ಮಾತನಾಡುವುದು ವ್ಯರ್ಥ ಎಂಬುದು ಜನರಿಗೆ ಯಾವತ್ತೋ ಮನವರಿಕೆಯಾಗಿದೆ. ಆದರೆ, ಸುಮ್ಮನಿರಲೂ ಆಗದ ಸ್ಥಿತಿಯಲ್ಲಿದ್ದಾರೆ.ಹಾಸನದ ರಿಂಗ್‌ರಸ್ತೆಯ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಮತ್ತು ಇಕ್ಕೆಲಗಳಲ್ಲಿ ಕಸದರಾಶಿ ಬಿದ್ದು, ದುರ್ನಾತ ಬೀರುತ್ತಿದೆ. ಈ ಬಗ್ಗೆ ಪತ್ರಿಕೆಗಳು ಬೆಳಕು ಚೆಲ್ಲಿದ ಪರಿಣಾಮ ಈ ಸಮಸ್ಯೆ ಈಗ ಒಳಗಿನ ರಸ್ತೆಗಳಿಗೆ ಸ್ಥಳಾಂತರವಾಗಿದೆ. ಗೌರಿಕೊಪ್ಪಲು ಮೂಲಕ ರಿಂಗ್ ರಸ್ತೆಯನ್ನು ಸೇರುವ ಮಾರ್ಗವು ಈಗ ಕಸದ ರಾಶಿಯಿಂದ ನರಳಾಡುತ್ತಿದೆ. ನಿವಾಸಿಗಳು 24 ಗಂಟೆಯೂ ದುರ್ನಾತ ಸೇವಿಸುವ ಸ್ಥಿತಿ ಬಂದೊದಗಿದೆ.ಇದರ ಸಮೀಪದಲ್ಲೇ ಒಂದು ಶಾಲೆಯೂ ಇದೆ. ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಈ ದುರ್ನಾತದಿಂದ ಪರಿತಪಿಸುವಂತಾಗಿದೆ. ಜನರು ತಂದು ಎಸೆಯುವ ಕಸ, ಪ್ರಾಣಿಗಳ ಶವಗಳು ಕೊಳೆತು ನಾರುತ್ತವೆ. ಮಾಂಸದ ಅಂಗಡಿಗಳಿಂದ ತಂದು ಸುರಿದ ತ್ಯಾಜ್ಯ ತಿನ್ನಲು ಬರುವ ನಾಯಿಗಳ ಸಂಖ್ಯೆ ಮಿತಿ ಮೀರಿದೆ.ಗೌರಿಕೊಪ್ಪಲಿನಿಂದ ವಿದ್ಯಾನಗರದವರೆಗೂ ಇಂಥ ಬೀದಿನಾಯಿಗಳು ಈಗ ಮಕ್ಕಳು ಮಾತ್ರವಲ್ಲ ಮುಂಜಾನೆ ವಾಕಿಂಗ್ ಹೋಗುವವರ ಮೇಲೂ ಗುರ್ ಎನ್ನುತ್ತವೆ. ಮಕ್ಕಳನ್ನು ಮನೆಯಿಂದಾಚೆ ಕಳಿಸುವ ಧೈರ್ಯ ಪಾಲಕರಿಗೆ ಇಲ್ಲ. ಅದೆಷ್ಟೋ ಮಂದಿ ಈಗಾಗಲೇ ಮುಂಜಾನೆ ವಾಕಿಂಗ್‌ನ ದಾರಿ ಬದಲಿಸಿದ್ದಾರೆ.ಇಷ್ಟು ಸಮಸ್ಯೆಗಳು ಸಾಲದೆಂಬಂತೆ ಕಳೆದ ಸುಮಾರು 15 ದಿನಗಳಿಂದ ಮುಂಜಾನೆ ಇಲ್ಲಿನ ಒಳಚರಂಡಿಯೊಂದು ಉಕ್ಕಿ ಹರಿಯುತ್ತಿದೆ. ರಸ್ತೆಯಲ್ಲೆಲ್ಲ ಈ ಕೊಳಚೆ ಹರಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತೆರಳಬೇಕಾಗಿದೆ.`ಚರಂಡಿ ಉಕ್ಕಿ ಹರಿದು ಗಬ್ಬು ವಾಸನೆ ಬೀರುತ್ತಿರುವ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಏನುಮಾಡಬೇಕು ಎಂಬುದೇ ತಿಳಿಯದಾಗಿದೆ' ಎಂದು ಇಲ್ಲಿನ ನಿವಾಸಿಗಳು ಅವಲತ್ತು ಕೊಂಡಿದ್ದಾರೆ.ಅತ್ತಿತ್ತ ನೋಡಿದರೆ ಕಸದ ರಾಶಿ, ಮನೆಯೊಳಗಿದ್ದರೆ ಚರಂಡಿ ನೀರು ಮತ್ತು ಕಸದ ದುರ್ನಾತ, ಹೊರಗಿಳಿದರೆ ಬೀದಿ ನಾಯಿಗಳ ಕಾಟ. ಕನಿಷ್ಠ ಕಸದ ಸಮಸ್ಯೆ ಹಾಗೂ ಚರಂಡಿಯನ್ನು ದುರಸ್ತಿ ಮಾಡುವ ಕೆಲಸವನ್ನಾದರೂ ಮಾಡಬೇಕಿದೆ. ಸಂಬಂಧಪಟ್ಟವರು ಜನರ ಸಮಸ್ಯೆ ಅರ್ಥಮಾಡಿಕೊಂಡು ಶುಚಿತ್ವ ಕಾಪಾಡುವರೇ ಎಂದು ಕಾದು ನೋಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.