ಸಮಸ್ಯೆಗಳ ತಾಣ; ಎಪಿಎಂಸಿ ಪ್ರಾಂಗಣ

7

ಸಮಸ್ಯೆಗಳ ತಾಣ; ಎಪಿಎಂಸಿ ಪ್ರಾಂಗಣ

Published:
Updated:

ಹಾಸನ: ಬಿತ್ತನೆ ಬೀಜ, ಗೊಬ್ಬರ ವಿತರಣೆಯಿಂದ ಹಿಡಿದು ತಾವು ಉತ್ಪಾದಿಸಿದ ಸರಕನ್ನು ತಂದು ಮಾರಾಟ ಮಾಡುವವರೆಗೆ... ರೈತರಿಗೆ ಸಂಬಂಧಿಸಿದ ವಿಚಾರಗಳು ಬಂದಾಗಲೆಲ್ಲ ಸಮಸ್ಯೆಗಳೇ ಕಾಣಿಸುತ್ತವೆ. ಕೆಲವನ್ನು ರೈತರೇ ಮಾಡಿಕೊಂಡಿದ್ದರೆ ಇನ್ನೂ ಹಲವು ಸಮಸ್ಯೆಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿವೆ. ಸಬ್ಸಿಡಿ/ ಸಾಲ ಮನ್ನಾಗಳಿಗಾಗಿ ಹೋರಾಟ ನಡೆಸುವ ರೈತರು ಎಂದಿಗೂ ತಮಗೆ ವ್ಯವಸ್ಥೆ ಕಲ್ಪಿಸಿ ಕೊಡಿ ಎಂದು ಹೋರಾಟ ಮಾಡದಿರುವುದು ಇನ್ನೊಂದು ದುರಂತವಾಗಿದೆ.ರಾಜ್ಯದ ಯಾವುದೇ ಎಪಿಎಂಸಿ ಪ್ರಾಂಗಣಕ್ಕೆ ಹೋಗಿ ನೋಡಿದರೂ ಸಮಸ್ಯೆಗಳು ಕಣ್ಣಿಗೆ ರಾಚುತ್ತವೆ. ಹಾಸನ ಎಪಿಎಂಸಿಯೂ ಇದಕ್ಕೆ ಹೊರತಾಗಿಲ್ಲ. ಕಳೆದ ಸುಮಾರು ಹತ್ತು ಹದಿನೈದು ದಿನಗಳಿಂದ ಹಾಸನದ ಎಪಿಎಂಸಿ ರೈತರಿಂದ ಗಿಜಿಗುಡುತ್ತಿದೆ. ಪ್ರತಿ ವರ್ಷವೂ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಆರಂಭವಾಯಿತೆಂದರೆ ಸಾವಿರಾರು ರೈತರು ಮಾರುಕಟ್ಟೆಗೆ ಬರುತ್ತಾರೆ, ನೂರಾರು ಲಾರಿಗಳು, ಅಷ್ಟೇ ಸಂಖ್ಯೆಯ ಇತರ ವಾಹನಗಳು ಬಿಡುವಿಲ್ಲದೆ ಓಡಾಡುತ್ತವೆ. ಆಲೂಗೆಡ್ಡೆ ಮಾರಾಟ ಮುಗಿಯುವಷ್ಟರಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿರುತ್ತದೆ. ಹಲವು ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ಎಪಿಎಂಸಿಗೆ ಸಂದಾಯವಾಗಿರುತ್ತದೆ.ಆಲೂಗೆಡ್ಡೆ ಮಾತ್ರವಲ್ಲ, ಇತರ ದಿನಗಳಲ್ಲೂ ರೈತರು ಇಲ್ಲಿಗೆ ಬರುವುದು- ಹೋಗುವುದು ನಡೆದೇ ಇರುತ್ತದೆ. ಆದರೆ ಒಂದೇ ಒಂದು ಬಾರಿ ಎಪಿಎಂಸಿ ಆವರಣಕ್ಕೆ ಬಂದು ನೋಡಿದರೆ, ಅಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದರೆ ಕೃಷಿ ಕ್ಷೇತ್ರ ಎಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೆ ಎಂಬುದು ಅರ್ಥವಾಗುತ್ತದೆ. ಪ್ರಾಂಗಣದ ಒಳಗಿನ ಒಂದೇ ಒಂದು ರಸ್ತೆ ಸರಿ ಇಲ್ಲ. (ಆದರೆ ವರ್ತಕರು ಆಲೂಗೆಡ್ಡೆ ಶೇಖರಣೆ ಮಾಡುವ ಶೈತ್ಯಾಗಾರದ ರಸ್ತೆಗಳು ಸುಂದರವಾಗಿವೆ. ಎಪಿಎಂಸಿಯಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣ ಹಂತದಲ್ಲಿವೆ). ವರ್ತಕರು ಕುಳಿತು ಆಲೂಗೆಡ್ಡೆ ಮಾರಾಟ ನಡೆಸಲು ಹಾಕಿರುವ ಶೆಡ್ಡುಗಳ ತಗಡುಗಳು ಕೆಲವೆಡೆ ಹಾರಿ ಹೋಗಿದ್ದರೆ ಉಳಿದಿರುವ ತಗಡುಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಎಲ್ಲೆಂದರಲ್ಲಿ ಕಸ ತುಂಬಿದೆ. ಚರಂಡಿ ಮೇಲೆ ನಿರ್ಮಿಸಿರುವ ಸ್ಲ್ಯಾಬುಗಳು ರಸ್ತೆ ಕಾಮಗಾರಿ ಮುಗಿಯುವ ಮೊದಲೇ ಮುರಿದಿವೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಇರುವ ಟ್ಯಾಂಕ್ ಒಂದರಿಂದ ಸದಾಕಾಲ ನೀರು ಜಿನುಗುತ್ತಿರುತ್ತದೆ... ಹೀಗೆ ಸಮಸ್ಯೆಗಳ ಸರಮಾಲೆಯೇ ಇದೆ.ಆಲೂಗೆಡ್ಡೆ ಬಿತ್ತನೆ ಬೀಜಕ್ಕಾಗಿ ಎರಡೆರಡು ದಿನ ಮುಂಜಾನೆಯಿಂದ ಸಂಜೆಯವರೆಗೆ ಎಪಿಎಂಸಿ ಪ್ರಾಂಗಣದಲ್ಲಿ ಕಾಯುವ ಸ್ಥಿತಿ ಈಬಾರಿ ನಿರ್ಮಾಣವಾಗಿತ್ತು. ರೈತರು ಇಲ್ಲಿ ಇಡೀ ದಿನವನ್ನು ಹೇಗೆ ಕಳೆದಿರಬಹುದು ಎಂದು ಊಹಿಸುವುದೂ ಕಷ್ಟವಾಗುತ್ತದೆ. ಊಟ-ತಿಂಡಿ ಬೇಕೆಂದರೆ ಒಳ್ಳೆಯ ಹೋಟೆಲ್ ಸಹ ಆಸುಪಾಸಿನಲ್ಲಿಲ್ಲ.ಬಿತ್ತನೆ ಬೀಜ ಖರೀದಿಸಿದ ಬಳಿಕ ಔಷಧ ಖರೀದಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ನೆರಳಿನ ವ್ಯವಸ್ಥೆಯೂ ಇಲ್ಲದೆ ಮಟಮಟ ಬಿಸಿಲಿನಲ್ಲಿಯೇ ರೈತರು ಸಾಲುಗಟ್ಟಿ ನಿಂತಿದ್ದರು. ಒಂದಿಷ್ಟು ನೆರಳು ನೀಡಲೂ ಯಾರಿಗೂ ಸಾಧ್ಯವಾಗಲಿಲ್ಲ. ಯಾಕೆ ಎಂದು ರೈತರು ಪ್ರಶ್ನಿಸಲೂ ಇಲ್ಲ. ಅಷ್ಟು ವ್ಯವಧಾನ ರೈತರಿಗಿಲ್ಲ. ಬಿತ್ತನೆ ಬೀಜ ಖರೀದಿಗೆ ಬಂದು ಕಾಯುವುದು ಅಥವಾ ಬೆಳೆದ ಉತ್ಪನ್ನಗಳನ್ನು ತಂದು ಇಲ್ಲಿ ಸಿಕ್ಕಿದ ಬೆಲೆಗೆ ಮಾರಾಟ ಮಾಡುವುದು. ಬೆಲೆ ಸಿಗದಿದ್ದರೆ ರಸ್ತೆಗೆ ಚೆಲ್ಲಿ ಮನೆಗೆ ಮರಳುವುದು ಮಾತ್ರ ರೈತರ ಕಾಯಕವಾಗುತ್ತಿದೆ. ಎಪಿಎಂಸಿಯ ಒಳಗೆ ಮಾತ್ರವಲ್ಲ ಹೊರಗೆಯೂ ಸಮಸ್ಯೆ ಇದೆ. ಈ ಭಾಗದಲ್ಲಿ ಬಿ.ಎಂ.ರಸ್ತೆ ಹದಗೆಟ್ಟು ವರ್ಷಗಳೇ ಸಂದಿವೆ. ಕೇಳಿದರೆ  `ಪ್ರಕರಣ ನ್ಯಾಯಾಲಯದಲ್ಲಿದೆ~ ಎಂಬ ಒಂದು ವಾಕ್ಯದ ಉತ್ತರ ಸಿದ್ಧವಾಗಿರುತ್ತದೆ.ಚತುಷ್ಪಥ ಮಾಡುವ ಮಾತಿರಲಿ, ಇರುವ ರಸ್ತೆಯ ಮೇಲೇ ಒಂದಿಷ್ಟು ಡಾಂಬರು ಹಾಕಬಹುದಲ್ಲ ?

 ಪ್ರತಿ ಮಂಗಳವಾರ ಬೆಳಿಗ್ಗೆ ಈ ರಸ್ತೆಯಲ್ಲಿ ಬಂದವರು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಶಪಿಸದೆ ಹೋಗಲು ಸಾಧ್ಯವೇ ಇಲ್ಲ. ನಗರಸಭೆ ಮುಂದಿನಿಂದ ಆರಂಭಿಸಿ ತಣ್ಣೀರುಹಳ್ಳದವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಸಾಕಷ್ಟು ಜಾಗವಿದೆ. ಹೀಗಿದ್ದರೂ ಪ್ರತಿ ಮಂಗಳವಾರ ಗಳಿಗೆಗೊಮ್ಮೆ ಟ್ರಾಫಿಕ್ ಜಾಮ್. ಬೇಕಾಬಿಟ್ಟಿ ನಿಲ್ಲುವ ಲಾರಿಗಳು, ಬೇಕೆಂದರಲ್ಲಿ ತಿರುಗುವ ಇತರ ವಾಹನಗಳು, ಎಲ್ಲೆಲ್ಲೋ ನಿಲುಗಡೆ ನೀಡುವ ಬಸ್ಸುಗಳು... ಇವೆಲ್ಲವನ್ನು ನಿಯಂತ್ರಿಸಲು ಇರುವ ಒಬ್ಬ ಅಥವಾ ಇಬ್ಬರು ಪೊಲೀಸ್ ಸಿಬ್ಬಂದಿ... ರೈತರಿಗೆ ಯಾವುದಾದರೂ ರೀತಿಯಲ್ಲಿ ನೆರವಾಗಬೇಕು ಎಂದಾದರೆ ಈ ವ್ಯವಸ್ಥೆಯನ್ನು ಬದಲಿಸಲೇಬೇಕಾಗಿದೆ. ಬೆಂಬಲಕ್ಕೆ ನಿಲ್ಲಬೇಕಾದವರೇ ನಿರ್ಲಕ್ಷ್ಯ ತೋರಿದ ಪರಿಣಾಮ ರೈತ ಸಂತೆ ಮುಂತಾದ ಅನೇಕ ಯೋಜನೆಗಳು ಸದ್ದಿಲ್ಲದೆ ಕೊನೆಯುಸಿರೆಳೆದಿವೆ. ಆದರೆ ಎಪಿಎಂಸಿ ರೈತರಿಗೆ ಅನಿವಾರ್ಯವಾಗಿರುವ ವ್ಯವಸ್ಥೆ. ಸಿಬ್ಬಂದಿ, ಜನಪ್ರತಿನಿಧಿಗಳು ಇತ್ತ ಗಮನಹರಿಸಲೇಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry