ಶನಿವಾರ, ಮೇ 8, 2021
19 °C

ಸಮಸ್ಯೆಗಳ ಬೀಡು: ಈ ಭೋವಿ ಕಾಲೋನಿ

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

ಹಳೇಬೀಡು: ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ದಿಗಾಗಿ ನೂರಾರು ಯೋಜನೆಗಳು ಜಾರಿಗೆ ಬಂದರೂ ಕನಿಷ್ಟ ಸೌಲಭ್ಯ ಇಲ್ಲದಿರುವ ಕುಗ್ರಾಮಗಳು ಇಂದಿಗೂ ಇವೆ ಎಂಬುದಕ್ಕೆ ರಾಜನಶಿರಿಯೂರು ಗ್ರಾಮ ಪಂಚಾಯತಿಗೆ ಸೇರಿದ ನರಸೀಪುರ ಭೋವಿ ಕಾಲೋನಿ ನೈಜ ನಿದರ್ಶನ.ವಿಶಿಷ್ಟ ತೆಲುಗು ಭಾಷೆ ಮಾತನಾಡುವ ಇಲ್ಲಿಯ ಜನರು ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಬಂದು ನೆಲೆಸಿದವರು. ಪೂರ್ವಿಕರು ಯಾರು ಎಲ್ಲಿಂದ ಬಂದರೂ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ.ನರಸೀಪುರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಭೋವಿ ಕಾಲೋನಿ ಯಲ್ಲಿ ಸುಮಾರು 150 ಮನೆಗಳಿವೆ. ಸಾಕಷ್ಟು ಮಂದಿ ಹಳೆಯ ಕಾಲದ ಶಿಥಿಲ ಮನೆಯಲ್ಲಿ ವಾಸವಾಗಿದ್ದಾರೆ. ಮೂರು ಕುಟುಂಬಗಳು ಗುಡಿಸಿಲಿನಲ್ಲಿ ವಾಸವಾ ಗಿವೆ. ಕುಟುಂಬಗಳ ಗಾತ್ರ ದೊಡ್ಡದಾಗಿ ವಿಭಜನೆಗೊಂಡಾಗ ಒಬ್ಬರು ಮಲಗಿದರೆ ಮತ್ತೊಬ್ಬರು ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.   ಬಹುತೇಕ ಮನೆಗಳಲ್ಲಿ ಶೌಚಾಲಯ ಗಳಿಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾ ಗಿಲ್ಲದೆ ಬಚ್ಚಲು ನೀರು ಮನೆಗಳ ಪಕ್ಕದ ಗಲ್ಲಿ ಮುಖಾಂತರ ರಸ್ತೆಗಳಲ್ಲಿ ಹರಿಯು ತ್ತಿದ್ದು ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಗ್ರಾಮದ ಬೀದಿಗಳು ಅಂಕು ಡೊಂಕಾದ ಮಣ್ಣಿನ ರಸ್ತೆಗಳಾಗಿವೆ.ನರಸೀಪುರ ಹಾಗೂ ಭೋವಿ ಕಾಲೋನಿಯಿಂದ ಒಂದು ಕಿರು ನೀರು ಸರಬರಾಜು ಪಂಪ್‌ಸೆಟ್ ಇದೆ. ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ವಿದ್ಯುತ್ ಕೈಕೊಟ್ಟಾಗ ನೀರಿಗಾಗಿ ಪರದಾಡಬೇಕು. ಕಾಲೋನಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.ಗ್ರಾಮದ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದಾರೆ. ಮನೆ ಮಂದಿಯೆಲ್ಲ ದೂರದ ಕಾಫಿ ತೋಟಗಳಿಗೆ ಹೋಗಿ ದುಡಿಯುತ್ತಾರೆ. ಕೈಲಾಗದ ವೃದ್ದರು ಹಾಗೂ ಪುಟ್ಟ ಮಕ್ಕಳು ಮಾತ್ರ ಮನೆಯಲ್ಲಿ ಇರುತ್ತಾರೆ.ಸಾಕಷ್ಟು ಮಹಿಳೆಯರು ಹಸುಗೂಸುಗಳನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಹೊಟ್ಟೆ ಪಾಡಿನ ಕಾಯಕ ನಡೆಸುತ್ತಾರೆ. ಕೆಲವು ಕುಟುಂಬದಲ್ಲಿ 14 ವರ್ಷ ತುಂಬಿಲ್ಲದ ಮಕ್ಕಳು ಸಹ ಶಾಲೆ ಬಿಟ್ಟು ತಂದೆ ತಾಯಿ ಜೊತೆ ಕೂಲಿಗೆ ಹೋಗುತ್ತಾರೆ.ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ 1ರಿಂದ 5 ನೇ ತರಗತಿವರೆಗಿನ ವಸತಿ ಶಾಲೆ. ಅಂಗನವಾಡಿ ಕೆಂದ್ರ ಇದೆ. ಕೆಲವರು ಮಕ್ಕಳನ್ನು ವಸತಿ ಶಾಲೆಗೆ ಬಿಟ್ಟು ಕೂಲಿಗೆ ಹೋಗುತ್ತಾರೆ. ಕನಿಷ್ಠ 10ಗುಂಟೆಯಿಂದ ಮೂರ‌್ನಾಲ್ಕು ಎಕರೆವರೆಗೂ ಜಮೀನು ಹೊಂದಿದವರು ಗ್ರಾಮದಲ್ಲಿದ್ದಾರೆ. ಬೆರೆಳೆಣಿಕೆ ಮಂದಿ ಮಾತ್ರ ನೀರಾವರಿ ಪಂಪ್ ಸೆಟ್ ಹೊಂದಿದ್ದಾರೆ. ವ್ಯವಹಾರ ಜ್ಞಾನ ಅರಿತವರು ನೀರಾವರಿ ಜಮೀನುಗಳನ್ನು ಗುತ್ತಿಗೆ ಪಡೆದು ಶುಂಠಿ ಬೆಳೆಯುತ್ತಾರೆ. ಬುದ್ದಿವಂತರು ಎಸ್ಟೇಟ್ ಹಾಗೂ ರಸ್ತೆ ಕೆಲಸಕ್ಕೆ ಕೂಲಿ ಆಳುಗಳನ್ನು ಹೊಂದಿಸುವ ಏಜೆಂಟರಾಗಿ ಸುಲಭ ಮಾರ್ಗದ ದುಡಿಮೆ ಕಂಡು ಕೊಂಡಿದ್ದಾರೆ.ಇಷ್ಟೆಲ್ಲ ಸರ್ಕಾರಿ ಯೋಜನೆಗಳಿದ್ದರೂ ಈ ಭೋವಿ ಜನಾಂಗಕ್ಕೆ ಅವುಗಳ ಲಾಭ ಸಿತ್ತಿಲ್ಲ. ಜನಸಂಖ್ಯೆ ಕಡಿಮೆ ಇರುವುದರಿಂದ ರಾಜಕೀಯವಾಗಿಯೂ ಇವರು ವಂಚಿತರಾಗುತ್ತಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಇವರತ್ತ ಗಮನ ಹರಸಬೇಕಾದ ಅಗತ್ಯವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.