ಬುಧವಾರ, ನವೆಂಬರ್ 20, 2019
21 °C

ಸಮಸ್ಯೆಗಿಂತ `ಸಮರ್ಥರೇ' ಮುಖ್ಯ

Published:
Updated:

ಯಾದಗಿರಿ: ರಾಜ್ಯದ 30ನೇ ಜಿಲ್ಲೆಯಾಗಿ ರಚನೆಗೊಂಡ ಯಾದಗಿರಿಗೆ ಇದೀಗ ನಾಲ್ಕನೇ ವರ್ಷ. ಅಷ್ಟರಲ್ಲಿಯೇ ವಿಧಾನಸಭೆ ಚುನಾವಣೆ ಎದುರಾಗಿದೆ. ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಸಹಜವಾಗಿ ಜಿದ್ದಾಜಿದ್ದಿ ನಡೆದಿದ್ದರೂ, ಚುನಾವಣಾ ಆಯೋಗದ ಹದ್ದಿನ ಕಣ್ಣು ಎಲ್ಲರನ್ನೂ ತಣ್ಣಗಾಗಿಸಿದೆ.ಬಿಜೆಪಿಯ ಅಲೆಯಲ್ಲೂ ಕಾಂಗ್ರೆಸ್ ಕೈಬಿಡದ ಮತದಾರರನ್ನು ಒಲಿಸಿಕೊಳ್ಳುವ ಯತ್ನದಲ್ಲಿ ಉಳಿದೆಲ್ಲ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಪ್ರಾದೇಶಿಕ ಪಕ್ಷಗಳ ಅಲೆಯೂ ಜೋರಾಗಿದೆ. 371ನೇ ಕಲಂ ತಿದ್ದುಪಡಿ, ಯಾದಗಿರಿ ಜಿಲ್ಲೆಯಾಗಿ ಘೋಷಣೆ ಹಾಗೂ ಹೊಸ ತಾಲ್ಲೂಕುಗಳ ರಚನೆಯಂತಹ ವಿಷಯಗಳು ಇಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಸಮಸ್ಯೆಗಳಿಗಿಂತ `ಸಮರ್ಥರು' ಯಾರು ಎಂಬ ಲೆಕ್ಕಾಚಾರ ಮಾತ್ರ ಮತದಾರರಲ್ಲಿ ನಡೆಯುತ್ತಿದೆ.ಒಂದೆಡೆ ಹೊರಗಿನವರು, ಸ್ಥಳೀಯರೆಂಬ ವ್ಯತ್ಯಾಸಗಳು, ಇನ್ನೊಂದೆಡೆ ಗುರು-ಶಿಷ್ಯರ ನಡುವೆಯೇ ರಾಜಕೀಯ ಚದುರಂಗದಾಟ, ಮತ್ತೊಂದೆಡೆ ಕುಟುಂಬಗಳ ರಾಜಕೀಯದಿಂದ ಹೊರ ಬರದ ಕ್ಷೇತ್ರ, ಇದೆಲ್ಲದರ ಮಧ್ಯೆ ಹಾಲಿ-ಮಾಜಿಗಳ ನಡುವೆ ಜಟ್ಟಿ ಕಾಳಗ. ಒಟ್ಟಾರೆ ಜಿಲ್ಲೆಯ 4 ಕ್ಷೇತ್ರಗಳಲ್ಲೂ ಚಿತ್ರಣ ಭಿನ್ನವಾಗಿದೆ.ಸುರಪುರ: ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನರಸಿಂಹ ನಾಯಕ (ರಾಜುಗೌಡ) ಸ್ಪರ್ಧಿಸುತ್ತಿರುವ ಸುರಪುರ ಕ್ಷೇತ್ರದತ್ತಲೇ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಸದಾ ನೇರ ಸ್ಪರ್ಧೆಯೇ ನಡೆಯುತ್ತದೆ. ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜುಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಾ ವೆಂಕಟಪ್ಪ ನಾಯಕರ ಮಧ್ಯೆಯೇ ಈ ಬಾರಿಯೂ ನೇರ ಸ್ಪರ್ಧೆ ಇದೆ. ಕಳೆದ ಎರಡು ಚುನಾವಣೆಯಲ್ಲೂ ಇವರಿಬ್ಬರ ಮಧ್ಯೆಯೇ ಸೆಣಸಾಟ ನಡೆದಿತ್ತು.ಇಲ್ಲಿ ಕುರುಬ ಸಮುದಾಯದ ಮತಗಳೇ ನಿರ್ಣಾಯಕ. ಕೆಲ ವಿಷಯಗಳಿಂದಾಗಿ ಈ ಹಿಂದೆ ರಾಜುಗೌಡರಿಂದ ದೂರ ಸರಿದ ಕುರುಬ ಸಮಾಜದ ಮತಗಳನ್ನೇ ಇಲ್ಲಿ ಕಾಂಗ್ರೆಸ್ ನಂಬಿಕೊಂಡಿದೆ. ಆದರೆ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೊಂಡ ಕುರುಬ ಸಮಾಜದ ಶಿವರಾಜ ಮಲ್ಲೇಶಿ, ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.ಸತತ ಎರಡು ಬಾರಿ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ ರಾಜುಗೌಡರಿಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ರಾಜುಗೌಡರಿಂದ ಎರಡು ಬಾರಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕರಿಗೆ ಸೇಡು ತೀರಿಸಿಕೊಳ್ಳುವ ತವಕ. ಇನ್ನು ಕಣದಲ್ಲಿರುವ ಬಿಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇಬ್ಬರೂ ತಲೆ ಕೆಡಿಸಿಕೊಂಡಿಲ್ಲ.ಗುರುಮಠಕಲ್: ಪ್ರತಿಷ್ಠಿತ ಇನ್ನೊಂದು ಕ್ಷೇತ್ರ ಗುರುಮಠಕಲ್. ಪ್ರಥಮ ಬಾರಿಗೆ 1957ರಲ್ಲಿ ನಡೆದ ಚುನಾವಣೆಯನ್ನು ಹೊರತುಪಡಿಸಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸೇತರ ಅಭ್ಯರ್ಥಿ ಜಯ ಗಳಿಸಿಲ್ಲ. ಸದ್ಯಕ್ಕೆ ಕೇಂದ್ರ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ 8 ಬಾರಿ ಗೆಲ್ಲಿಸುವ ಮೂಲಕ ರಾಜ್ಯದ ಗಮನ ಸೆಳೆದ ಕ್ಷೇತ್ರವಿದು. ಇದರ ಜೊತೆಗೆ ಗುಳೆ ಹೋಗುವ ಜನರ ಸಂಖ್ಯೆಯಲ್ಲೂ ಈ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಸತತವಾಗಿ ಹೊರಗಿನ ಅಭ್ಯರ್ಥಿಗಳಿಗೇ ಮಣೆ ಹಾಕಿರುವುದು ಕ್ಷೇತ್ರದ ಇನ್ನೊಂದು ವಿಶೇಷ.ಕಾಂಗ್ರೆಸ್‌ನಿಂದ ಬಾಬುರಾವ ಚಿಂಚನಸೂರ, ಬಿಜೆಪಿಯಿಂದ ಗಿರೀಶ ಮಟ್ಟೆಣ್ಣವರ ಕಣಕ್ಕಿಳಿದಿರುವುದು ಕ್ಷೇತ್ರದ ರಂಗೇರಿಸಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ನಾಗನಗೌಡ ಕಂದಕೂರ, ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ, ಸ್ಥಳೀಯರೆಂಬ ಟ್ರಂಪ್ ಕಾರ್ಡ್ ಬಳಕೆಗೆ ಮುಂದಾಗಿದ್ದಾರೆ. ನಿರ್ಣಾಯಕ ಎನಿಸಿರುವ ಬಂಜಾರಾ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಎಸ್ಸಾರ್ ಕಾಂಗ್ರೆಸ್ ಅದೇ ಸಮುದಾಯದ ಬಾಬು ಚವ್ಹಾಣರನ್ನು ಕಣಕ್ಕಿಳಿಸಿದೆ.  ಶಹಾಪುರ: ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆಯಾಗಿರುವುದು ಶಹಾಪುರ ಮತಕ್ಷೇತ್ರ.  ಅಭ್ಯರ್ಥಿಗಳು ಒಬ್ಬರೇ ಆದರೂ, ಪಕ್ಷಗಳು ಮಾತ್ರ ಬದಲಾಗಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಲಾಷೆ ಇದ್ದಂತಿದೆ. ಈ ಕ್ಷೇತ್ರದಲ್ಲಿ ಒಂದೇ ಪಕ್ಷದ ಅಭ್ಯರ್ಥಿ ಸತತ ಎರಡು ಬಾರಿ ಗೆಲುವು ಸಾಧಿಸಿರುವುದು ಅತಿ ವಿರಳ.ದರ್ಶನಾಪುರ ಹಾಗೂ ಶಿರವಾಳ ಕುಟುಂಬಗಳ ಮಧ್ಯೆಯೇ ಇಲ್ಲಿ ಸದಾ ಪೈಪೋಟಿ. ಮಾಜಿ ಶಾಸಕ ದಿ. ಬಾಪುಗೌಡ ದರ್ಶನಾಪುರರ ಪುತ್ರ, ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಮಾಜಿ ಶಾಸಕ ದಿ. ಶಿವಶಂಕರಪ್ಪಗೌಡ ಶಿರವಾಳರ ಪುತ್ರ ಗುರು ಪಾಟೀಲ ಶಿರವಾಳ ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಾಪುಗೌಡರು ಹಾಗೂ ಶಿವಶಂಕರಪ್ಪಗೌಡರ ಮಧ್ಯೆ ನಡೆಯುತ್ತಿದ್ದ ರಾಜಕೀಯ ಸೆಣಸಾಟ ಈ ಬಾರಿ ಇವರಿಬ್ಬರ ಪುತ್ರರ ನಡುವಿದೆ.ತಮ್ಮ ತಂದೆಯವರು ಮಾಡಿದ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಅನುಕಂಪವನ್ನೇ ಮತಗಳನ್ನಾಗಿ ಪರಿವರ್ತಿಸುವ ಯತ್ನದಲ್ಲಿ ಗುರು ಪಾಟೀಲರಿದ್ದಾರೆ. ಶಾಸಕರಾಗಿ ಮಾಡಿದ ಕಾರ್ಯಕ್ರಮಗಳೇ ಶ್ರೀರಕ್ಷೆ ಎನ್ನುವ ಹುಮ್ಮಸ್ಸು ಶರಣಬಸಪ್ಪ ದರ್ಶನಾಪುರ ಅವರದ್ದು. ಈ ಎರಡು ಕುಟುಂಬಗಳ ರಾಜಕೀಯದಿಂದ ಕ್ಷೇತ್ರವನ್ನು ಮುಕ್ತ ಮಾಡಬೇಕು ಎನ್ನುವುದು ಜೆಡಿಎಸ್ ಅಭ್ಯರ್ಥಿ ಶರಣಪ್ಪ ಸಲಾದಪೂರರ ಘೋಷ ವಾಕ್ಯ. ಬಾಪುಗೌಡ ದರ್ಶನಾಪುರರ ಒಡನಾಟದಲ್ಲಿ ಬೆಳೆದಿರುವ ಶಂಕ್ರಣ್ಣ ವಣಿಕ್ಯಾಳ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಮಲ್ಲಾಬಾದಿ, ಸರ್ಕಾರದ ಸಾಧನೆಗಳನ್ನೇ ಮತಗಳಾಗಿ ಪರಿವರ್ತಿಸುವ ಪ್ರಯತ್ನ ನಡೆಸುತ್ತಿದ್ದಾರೆ.ಯಾದಗಿರಿ: ವೈದ್ಯರ ನಡುವೆಯೇ ಹಣಾಹಣಿ ನಡೆಯುವ ಕ್ಷೇತ್ರವೆಂದರೆ ಯಾದಗಿರಿ. ಕಳೆದ ಮೂರು ಚುನಾವಣೆಗಳಲ್ಲಿ ಗುರು ಶಿಷ್ಯರ ನಡುವೆ ಚದುರಂಗದಾಟ ನಡೆಯುತ್ತ ಬಂದಿದೆ.  ಹಾಲಿ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಅವರ ಶಿಷ್ಯ ಡಾ. ವೀರಬಸವಂತರಡ್ಡಿ ಮುದ್ನಾಳ, ಸದ್ಯ ಕೆಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. 2004 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗುರುವಿಗೇ ತಿರುಮಂತ್ರ ಹಾಕಿದ ಡಾ. ವೀರಬಸಂತರಡ್ಡಿ , 2013ರ ಫಲಿತಾಂಶವನ್ನು ಮರುಕಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಮಾಲಕರಡ್ಡಿ, ಶಿಷ್ಯನ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.ಸುರಪುರ ತಾಲ್ಲೂಕಿನವರಾದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಾಗನೂರ ಹೊರಗಿನಿಂದ ಬಂದಿರುವ ಅಭ್ಯರ್ಥಿ ಎಂಬ ಕೂಗು ಸ್ಥಳೀಯ ಬಿಜೆಪಿ ಮುಖಂಡರಲ್ಲಿದೆ. ಅಲ್ಲದೇ ಚುನಾವಣಾ ಪ್ರಚಾರದಲ್ಲೂ ಸ್ಥಳೀಯರು ಕಾಣಿಸಿಕೊಳ್ಳದೇ ಇರುವುದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.ಆದರೂ ಮಾಗನೂರರ ಹುಮ್ಮಸ್ಸು ಮಾತ್ರ ಕಡಿಮೆ ಆಗಿಲ್ಲ. ಗುರು-ಶಿಷ್ಯರ ಮಧ್ಯೆ ಬಿಜೆಪಿಗೆ ಜಯ ತಂದು ಕೊಡುವ ತವಕ ಅವರದ್ದು. ಇನ್ನು ಜೆಡಿಎಸ್ ಅಭ್ಯರ್ಥಿ ಎ.ಸಿ. ಕಾಡ್ಲೂರ, ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ನಿದ್ದೆಗೆ ಹಾಳು ಮಾಡಿರುವುದಂತೂ ಸತ್ಯ. ಅಲ್ಪಸಂಖ್ಯಾತ ಸಮುದಾಯದ ಕಾಡ್ಲೂರ, ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಎಲ್ಲ ಪಕ್ಷಗಳ ಅಲ್ಪಸಂಖ್ಯಾತರ ಮತಗಳನ್ನು  ಸೆಳೆಯುವ ಭರವಸೆಯಲ್ಲಿದ್ದಾರೆ.ಕಾಂಗ್ರೆಸ್‌ನಿಂದ ಹೊರಬಂದಿರುವ ಮೌಲಾಲಿ ಅನಪೂರ ಇಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ. ಕಾಂಗ್ರೆಸ್ ವೋಟುಗಳ ಜೊತೆಗೆ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಅವರು ಕಾಂಗ್ರೆಸ್ ಲೆಕ್ಕಾಚಾರ ತಲೆ ಕೆಳಗೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)