ಸಮಸ್ಯೆಯ ಸುಳಿಯಲ್ಲಿ ಅಕ್ಷರ ಹುಡುಕಾಟ

7

ಸಮಸ್ಯೆಯ ಸುಳಿಯಲ್ಲಿ ಅಕ್ಷರ ಹುಡುಕಾಟ

Published:
Updated:

ಲಿಂಗಸುಗೂರ: ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯ ನೀಲ ನಕ್ಷೆಯತ್ತ ಒಂದೊಮ್ಮೆ ಕಣ್ಣು ಹಾಯಿಸಿದರೆ ರಾಯಚೂರು ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ಕಾಣಸಿಗುತ್ತದೆ. ಅಂತೆಯೆ ಕಳೆದ ಕೆಲ ವರ್ಷಗಳಿಂದ ಸರ್ಕಾರ ಹೈದರಬಾದ ಕರ್ನಾಟಕ ಅದರಲ್ಲೂ ರಾಯಚೂರು ಜಿಲ್ಲೆಗೆ ವಿಶಿಷ್ಟ ಯೋಜನೆಗಳನ್ನು ರೂಪಿಸಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಿದೆ.

ಆದರೆ, ಲಿಂಗಸುಗೂರ ತಾಲ್ಲೂಕಿಗೆ ಅಂತಹ     ಯಾವೊಂದು ಯೋಜನೆಗಳು ಗ್ರಾಮೀಣ ಪ್ರದೇಶಕ್ಕೆ ಸಮರ್ಪಕವಾಗಿ ತಲುಪಿಲ್ಲ ಎಂಬುದಕ್ಕೆ ಯರಡೋಣ ಸರ್ಕಾರಿ ಪ್ರೌಢಶಾಲೆ ನಿದರ್ಶನವಾಗಿದೆ.ಬೀದರ ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಯರಡೋಣ ಗ್ರಾಮಕ್ಕೆ 2007-08ರ ಅವಧಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರ ಮಾಡಲಾಗಿದೆ. ಮಂಜೂರಾದ ಶಾಲೆಗೆ ಇಂಗ್ಲೀಷ ಶಿಕ್ಷಕರ ಹುದ್ದೆ ಮಂಜೂರ ಮಾಡದಿರುವುದು ವಿಪರ್ಯಾಸ.

ತಾಲ್ಲೂಕಿನ ಒಟ್ಟು 16 ಪ್ರೌಢಶಾಲೆಗಳಿಗೆ ಇಂಗ್ಲೀಷ ಶಿಕ್ಷಕರ ಹುದ್ದೆ ಮಂಜೂರ ಮಾಡಿಲ್ಲ ಎಂಬುದು ಶಿಕ್ಷಣ ಇಲಾಖೆ ದಾಖಲೆಗಳು ದೃಢಪಡಿಸುತ್ತಿರುವುದು ಶೈಕ್ಷಣಿಕ ಅಭಿವೃದ್ಧಿಯನ್ನು ಅಣುಕಿಸುವಂತಾಗಿದೆ ಎಂಬುದು ಶಿಕ್ಷಣ ಪ್ರೇಮಿಗಳ ಅಂಬೋಣ.ಶಾಲೆ ಆರಂಭಗೊಂಡು 5 ವರ್ಷಗಳ ನಂತರ ಎರಡು ಕೊಠಡಿಗಳು ಪೂರ್ಣಗೊಂಡು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸ್ಥಳಾಂತರಗೊಂಡಿದೆ. ಎರಡು ಕೊಠಡಿಗಳಲ್ಲಿ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವಿಶ್ರಾಂತಿ, ಗ್ರಂಥಾಲಯ, ಪ್ರಯೋಗಾಲಯ, 8 ರಿಂದ 10ನೇ ತರಗತಿ 165 ಮಕ್ಕಳು, ಶಾಲೆಯ ಇತರೆ ಸಾಮಗ್ರಿಗಳ ಸಂಗ್ರಹಣೆ ಎಲ್ಲದಕ್ಕೂ ಈ ಎರಡು ಕೊಠಡಿಗಳೆ ಶ್ರೀರಕ್ಷೆಯಾಗಿವೆ. ಇಷ್ಟೊಂದು ಸಮಸ್ಯೆಗಳ ಸುಳಿಯಲ್ಲಿ ಶಿಕ್ಷಕ ಸಮೂಹ ಅಕ್ಷರಗಳನ್ನು ಹುಡುಕಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿರುವುದಕ್ಕೆ ಗ್ರಾಮಸ್ಥರು ಪ್ರಶಂಸಿಸುತ್ತಿದ್ದಾರೆ.ತಾಲ್ಲೂಕಿನ ನಾಗರಹಾಳ, ಹಟ್ಟಿ, ನಾಗಲಾಪುರ, ಮಸ್ಕಿ ಸೇರಿದಂತೆ ರಾಜಕೀಯ ಒತ್ತಡಗಳಿಗೆ ಮಣಿದ ಶಿಕ್ಷಣ ಇಲಾಖೆ ಅನಗತ್ಯವಾಗಿ ಕೊಠಡಿಗಳನ್ನು ಮಂಜೂರ ಮಾಡಿದ್ದು ಬಳಕೆಯಾಗದೆ ಅನಾಥವಾಗಿ ತಲೆ ಎತ್ತಿ ನಿಂತಿರುವ ನಿದರ್ಶನಗಳಿವೆ.

ಯಾವುದೇ ಕಟ್ಟಡದ ಉದ್ಘಾಟನೆಗೆ ಹೆಸರು ಬರಲಿಲ್ಲ ಎಂದು ರೇಗಾಡುವ, ಶಿಕ್ಷಕರನ್ನು ವರ್ಗಾವಣೆ ಮಾಡಿಸುವ ಚುನಾಯಿತ ಪ್ರತಿನಿಧಿಗಳಿಗೆ ತಟ್ಟಿ, ತಟ್ಟು ಕಟ್ಟಿ ಪಾಠ ಮಾಡುವ ಶಾಲೆಗಳತ್ತ ಕಿಂಚಿತ್ತು ಕಾಳಜಿ ವಹಿಸದಿರುವುದು ನೋವಿನ ಸಂಗತಿ. ಗಾಳಿ, ಮಳೆ, ಬಿಸಿಲಿನಲ್ಲಿ ಪಾಠ ಹೇಳುವ, ಕೇಳುವ ಮಕ್ಕಳತ್ತ ಇಲಾಖೆ ಕಣ್ತೆರೆದು ನೋಡಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಗ್ರಹಿಸಿದ್ದಾರೆ.ಗುಲಾಮ್‌ಹುಸೇನ ವರ್ಗಾವಣೆಗೆ ಆಗ್ರಹ

ಸಿಂಧನೂರು:
ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ಗುಲಾಮ್‌ಹುಸೇನ್ ಅವರು ಶಿಕ್ಷಕರಿಗೆ ಕಾರ್ಯಾಲಯದ ಯಾವುದೇ ಮಾಹಿತಿ ನೀಡದೆ ಅಗೌರವ ತೋರುತ್ತಿದ್ದು ಕೂಡಲೇ ಅವರನ್ನು ಬೇರೆಡೆ ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಶನಿವಾರ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು.ಶಾಲೆಗಳಿಗೆ ಸಂಬಂಧಿಸಿದ ಮಾಹಿತಿ ಕೇಳಲು ಬರುವ ಶಿಕ್ಷಕರನ್ನು ಅವಹೇಳನ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಎಸ್.ಆರ್.ಬುಕ್ ಕೇಳಿದರೆ ಕೊಡುವುದಿಲ್ಲ. ಆಮೇಲೆ ಬಾ ಎಂದು ದರ್ಪದಿಂದ ವರ್ತಿಸುತ್ತಿದ್ದಾರೆ. ಆದರೆ ತಮ್ಮ ಜೊತೆ ಆತ್ಮೀಯವಾಗಿರುವ ಶಿಕ್ಷಕರಿಗೆ ಕೇಳಿದ ಮಾಹಿತಿ ಒದಗಿಸುವ ಮೂಲಕ ಶಿಕ್ಷಕರ ನಡುವೆ ತಾರತಮ್ಯ ಮಾಡುತ್ತಿದ್ದು ಕೂಡಲೇ ಅವರನ್ನು ಬೇರೆಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಪ್ರಭಾರಿ ಶಿಕ್ಷಣಾಧಿಕಾರಿ ರವಿಯಪ್ಪರಿಗೆ ಮನವಿ ಸಲ್ಲಿಸಿದರು.

ಶಿಕ್ಷಕರಾದ ಹೊಳಿಯಪ್ಪ, ಸಿದ್ಧಲಿಂಗಪ್ಪ, ಗಣೇಶ, ವಿನೋದ, ರೇವಣ್ಣ, ವಿಠ್ಠಲ ಎಂ.ಎಸ್., ಮಹಾಂತೇಶ, ಮಂಜು, ಶಿವಕುಮಾರ, ಲೋಕೇಶ, ನಾಗೇಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry