ಸಮಸ್ಯೆಯ ಸುಳಿಯಲ್ಲಿ ವಿಶ್ವವಿದ್ಯಾಲಯಗಳು

7

ಸಮಸ್ಯೆಯ ಸುಳಿಯಲ್ಲಿ ವಿಶ್ವವಿದ್ಯಾಲಯಗಳು

Published:
Updated:

ರಾಜ್ಯ ವಿಶ್ವವಿದ್ಯಾಲಯಗಳು ಎಂದರೆ ಆಯಾಯ ರಾಜ್ಯ ಸರ್ಕಾರಗಳು ಆರಂಭಿಸಿರುವ ಮತ್ತು ಹಣಕಾಸು ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿರುವ ವಿಶ್ವವಿದ್ಯಾಲಯಗಳು ಎಂದರ್ಥ. ಉನ್ನತ ಶಿಕ್ಷಣವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಗಳು (ವಿ.ವಿ.ಗಳು) ಮಾತ್ರ ನೀಡುತ್ತಿರುವುದರಿಂದ ಗುಣಾತ್ಮಕ ಉನ್ನತ ಶಿಕ್ಷಣಕ್ಕೆ ಅಥವಾ ಕಳಪೆ ಸಾಧನೆಗೆ ವಿಶ್ವವಿದ್ಯಾಲಯಗಳು ಸಹ ಕಾರಣವಾಗುತ್ತವೆ.ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಉನ್ನತ ಶಿಕ್ಷಣದ ಬೇಡಿಕೆಯನ್ನು ಪೂರೈಸುವ ಜವಾಬ್ದಾರಿ ಸ್ಥಳೀಯ ವಿಶ್ವವಿದ್ಯಾಲಯಗಳ ಕರ್ತವ್ಯ ಮತ್ತು ಹೊಣೆಗಾರಿಕೆ ಆಗಿರುತ್ತದೆ. ಉನ್ನತ ಶಿಕ್ಷಣಕ್ಕೆ ಎಣಿಯಿಲ್ಲದ ಪೈಪೋಟಿ ಸೃಷ್ಟಿಯಾಗಿರುವುದರಿಂದ, ಇಂದು ವಿಶ್ವವಿದ್ಯಾಲಯಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಕನಿಷ್ಠ ಶೈಕ್ಷಣಿಕ ಹಿನ್ನೆಲೆಯೂ ಇಲ್ಲದವರು, ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಅನೇಕ ವಿಶ್ವವಿದ್ಯಾಲಯಗಳಿಗೆ ಒಡೆಯರಾಗಿದ್ದಾರೆ.ಡೀಮ್ಡ ವಿ.ವಿ ಪರಿಕಲ್ಪನೆ ಬಂದ ನಂತರವಂತೂ ವಿಶ್ವವಿದ್ಯಾಲಯ ಎಂಬ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಶೈಕ್ಷಣಿಕ ಉದ್ದೇಶಗಳಿಗಿಂತ ರಾಜಕೀಯ ಕಾರಣಗಳಿಗಾಗಿಯೇ ಹೊಸ ರಾಜ್ಯ ವಿ.ವಿ.ಗಳು/ ಕೇಂದ್ರೀಯ ವಿ.ವಿ.ಗಳು ರಾತ್ರೋರಾತ್ರಿ ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗೆ ಅಮೆರಿಕದ ಸಂಸ್ಥೆಯೊಂದು ಬಿಡುಗಡೆ ಮಾಡಿದ ಅತ್ಯುನ್ನತ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿ.ವಿ ಅಥವಾ ಐಐಟಿ ಸ್ಥಾನ ಪಡೆದಿಲ್ಲ ಎಂದರೆ ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿಗತಿ, ಅವುಗಳಲ್ಲಿ ನಡೆಯುತ್ತಿರುವ ಕೆಟ್ಟ ರಾಜಕೀಯವನ್ನು ನಾವು ಊಹಿಸಿಕೊಳ್ಳಬಹುದು.ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯ ಪರ್ವವನ್ನೇ ಆರಂಭಿಸಿದೆ. ಇದರಿಂದ ರಾಜ್ಯ ಸರ್ಕಾರವನ್ನೇ ನಂಬಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವಿಶ್ವವಿದ್ಯಾಲಯಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಉನ್ನತ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರ ಸಾರಾಸಗಟಾಗಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ತಾಂತ್ರಿಕ ಸಮಸ್ಯೆಯಿಂದ ಇಂದು ದೇಶದಾದ್ಯಂತ ರಾಜ್ಯ ವಿಶ್ವವಿದ್ಯಾಲಯಗಳು ಸಂಕಷ್ಟದ ಸ್ಥಿತಿಯಲ್ಲಿವೆ.ಕೇಂದ್ರ ಸರ್ಕಾರ ಒಟ್ಟು 15 ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳು ಹಾಗೂ ಅಂತರ ರಾಷ್ಟ್ರೀಯ ಗುಣಮಟ್ಟ,   ಸ್ಥಾನಮಾನಕ್ಕೆ ಸರಿಸಮಾನವಾದ ರಾಷ್ಟ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವ ಮುಂದಿಟ್ಟಿದ್ದು, ಇದಕ್ಕೆ ಬಹುಪಾಲು ಅಂಗೀಕಾರ ದೊರಕಿದೆ. ಕೋಟ್ಯಂತರ ರೂಪಾಯಿ ಸಹ ಬಿಡುಗಡೆಯಾಗುವ ಹಂತದಲ್ಲಿದೆ. ಹಣಕಾಸು ವ್ಯವಸ್ಥೆಯನ್ನು ಕೇಂದ್ರವೇ ಸಂಪೂರ್ಣವಾಗಿ ಭರಿಸಲಿದೆ.ಸದ್ಯ ಸುಮಾರು 8 ಹೊಸ ಕೇಂದ್ರಿಯ ವಿ.ವಿ.ಗಳು ದೇಶದಾದ್ಯಂತ ಆರಂಭವಾಗಿದ್ದು, ಅವುಗಳಲ್ಲಿ ಕೆಲವು ಈಗಾಗಲೇ ನೇಮಕಾತಿಯನ್ನು ಆರಂಭಿಸಿವೆ. ಇದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸ್ಥಳೀಯ ರಾಜ್ಯ ವಿ.ವಿ.ಗಳಿಗೆ ಹಲವಾರು ಬಗೆಯ ಪರಿಣಾಮ ಉಂಟಾಗತೊಡಗಿದೆ. ಅಲ್ಲದೆ ಸರ್ಕಾರ ಮತ್ತು ಅಧಿಕಾರಶಾಹಿಯ ನಿರಂತರ ಹಸ್ತಕ್ಷೇಪ ರಾಜ್ಯ ವಿ.ವಿ.ಗಳನ್ನು ಇನ್ನಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿಸಿದೆ. ಅತ್ಯುನ್ನತ ಮಟ್ಟದ ಅಧ್ಯಾಪಕರನ್ನು ವಿ.ವಿಗಳಿಗೆ ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಕಳಪೆ ಗುಣಮಟ್ಟ, ಅವೈಜ್ಞಾನಿಕ ಹಣಕಾಸು ನಿರ್ವಹಣೆ, ಮೌಲ್ಯಮಾಪನದಲ್ಲಿ ಆಗದಿರುವ ಸುಧಾರಣೆ, ಸಂಶೋಧನೆಗೆ ಕಡಿಮೆಯಾಗುತ್ತಿರುವ ಹಣಕಾಸು ಸೌಲಭ್ಯದಂತಹ ಕಾರಣಗಳಿಂದ ಉತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಸಹ ರಾಜ್ಯ ವಿ.ವಿಗಳಿಗೆ ಅಸಾಧ್ಯವಾಗುತ್ತಿದೆ. ಇಂದು ಹಲವಾರು ವಿ.ವಿ.ಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಕೆಲವು ವಿಭಾಗಗಳನ್ನು ಮುಚ್ಚಲು ನಿರ್ಧರಿಸುವ ಸಂಗತಿ ಸಹ ಬೆಳಕಿಗೆ ಬಂದಿದೆ.ಅರೆಬರೆ ವೇತನ ಶ್ರೇಣಿ

ಯು.ಜಿ.ಸಿ.ಯ 6ನೇ ವೇತನ ಶ್ರೇಣಿ ಜಾರಿಯಾಗುತ್ತಿದ್ದಂತೆ ರಾಜ್ಯ ಸರ್ಕಾರಗಳು ಇನ್ನಷ್ಟು ಒತ್ತಡಕ್ಕೆ ಸಿಲುಕಲಾರಂಭಿಸಿದವು. ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆದಾಯ ಇಲ್ಲದಿರುವುದರಿಂದ ಹಲವು ರಾಜ್ಯಗಳಲ್ಲಿ ವಿ.ವಿ.ಗಳಿಗೆ 6ನೇ ವೇತನ ಶ್ರೇಣಿ ಅರೆಬರೆಯಾಗಿ ಜಾರಿಯಾಗಿದೆ. ಕರ್ನಾಟಕದಲ್ಲಿ ಸುಮಾರು 15 ವಿಶ್ವವಿದ್ಯಾಲಯಗಳಿದ್ದು, ಎಲ್ಲ ವಿ.ವಿಗಳಲ್ಲೂ ಬ್ಯಾಕ್‌ಲಾಗ್ ಸೇರಿದಂತೆ ನೂರಾರು ಹುದ್ದೆಗಳು ಖಾಲಿ ಬಿದ್ದಿವೆ. ದೇಶದ ಹಳೆಯ ವಿ.ವಿ.ಗಳಲ್ಲಿ ಒಂದಾದ ಮೈಸೂರು ವಿ.ವಿ.ಯಲ್ಲಿ ಪ್ರತಿ ವಿಭಾಗಕ್ಕೆ ಸರಾಸರಿ ಕೇವಲ ಐವರು ಅಧ್ಯಾಪಕರಿದ್ದಾರೆ.ಇದು ಮೈಸೂರು ವಿ.ವಿ.ಯ ಕಥೆ ಮಾತ್ರ ಅಲ್ಲ, ರಾಜ್ಯದ ಇತರ ವಿ.ವಿಗಳಲ್ಲೂ ಇದೇ ಕಥೆ-ವ್ಯಥೆ. ಇಂತಹ ವಿ.ವಿ.ಗಳಲ್ಲಿ ಕೇವಲ ಸಾಂಪ್ರದಾಯಿಕ ಸ್ನಾತಕೋತ್ತರ ಮತ್ತು ಪಿಎಚ್.ಡಿ ಕೋರ್ಸ್‌ನ್ನು ನಡೆಸಲು ಮಾತ್ರ ಸಾಧ್ಯ. ಇಂತಹ ಸಮಸ್ಯೆಗಳ ಮಧ್ಯೆ ಸೆಮಿಸ್ಟರ್ ಪದ್ಧತಿ, ನಿರಂತರ ಮೌಲ್ಯಮಾಪನ, ಬೋಧನೆಯಲ್ಲಿ ನವೀನತೆ, ಸಿ.ಬಿ.ಎಸ್.ಸಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಾದರೂ ಹೇಗೆ? ದೇಶದ ಕೆಲವು ಪ್ರಖ್ಯಾತ ವಿ.ವಿ.ಗಳಾದ ಕಲ್ಕತ್ತಾ, ಮುಂಬೈ, ಮದ್ರಾಸ್‌ನಂತಹ ಪ್ರತಿಷ್ಠಿತ ವಿ.ವಿ.ಗಳದ್ದೂ ಇದೇ ಸಮಸ್ಯೆ. ಇಂತಹ ವಿ.ವಿ.ಗಳೇ ಸಮಸ್ಯೆಗೆ ಸಿಲುಕಿದರೆ ಇನ್ನು ಹೊಸ ವಿ.ವಿ.ಗಳ ಪಾಡೇನು?  ರಾಜ್ಯ ಸರ್ಕಾರ ತರಾತುರಿಯಲ್ಲಿ ಆರಂಭಿಸಿರುವ ರಾಣಿ ಚೆನ್ನಮ್ಮ ವಿ.ವಿ, ಶ್ರೀ ಕೃಷ್ಣದೇವರಾಯ ವಿ.ವಿ, ದಾವಣಗೆರೆ ವಿ.ವಿ ಮತ್ತು ತುಮಕೂರು ವಿ.ವಿಗಳ ಪಾಡು ಹೇಳತೀರದು. ರಾಜ್ಯ ಸರ್ಕಾರಗಳಿಗೆ ಹೊಸ ವಿ.ವಿಗಳನ್ನು ತೆರೆಯುವಾಗ ಇರುವ ಆಸಕ್ತಿ ನಂತರ ಇರುವುದೇ ಇಲ್ಲ. ಇನ್ನು ಇತರ ಮೂಲ ಸೌಲಭ್ಯಗಳ ಬಗ್ಗೆ ಹೇಳದಿರುವುದೇ ಲೇಸು. ಕೆಲವು ವಿ.ವಿ.ಗಳು ಅಕ್ರಮ ನೇಮಕಾತಿ, ಸ್ವಜನ ಪಕ್ಷಪಾತ, ಜಾತಿ ರಾಜಕೀಯದಂತಹ ಗೊಂದಲಗಳಿಂದ ತುಂಬಿ ಹೋಗಿವೆ.ಇಂತಹ ಸಮಸ್ಯೆಗಳಿಂದ, ವಿದೇಶಗಳಲ್ಲಿ ತರಬೇತಿ ಹೊಂದಿದ ಮತ್ತು ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ ಇರುವ ಅಧ್ಯಾಪಕರು ರಾಜ್ಯ ವಿ.ವಿ.ಗಳಿಗೆ ಬರಲು ಹಿಂದೇಟು ಹಾಕುತ್ತಾರೆ. ಇಂದು ವಿ.ವಿ ಅಧ್ಯಾಪಕರ ವೇತನವನ್ನು ಲಕ್ಷಗಟ್ಟಲೆ ಹೆಚ್ಚಿಸಿರುವುದು ಅತ್ಯುತ್ತಮ ವಿದ್ವಾಂಸರನ್ನು ಸೆಳೆಯುವ ಉದ್ದೇಶದಿಂದ. ಆದರೆ  ಕೆಲವು ವಿ.ವಿ.ಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಲು ವರ್ಷಾನುಗಟ್ಟಲೆ ಅನುಮತಿ ನೀಡುವುದಿಲ್ಲ.ಒಂದೊಮ್ಮೆ ಅನುಮತಿ ನೀಡಿದರೂ ಮಿತಿಮೀರಿದ ರಾಜಕೀಯ ಹಸ್ತಕ್ಷೇಪದಿಂದ ನೇಮಕಾತಿಗಳು ದೊಡ್ಡ ಹಗರಣಗಳಾಗಿ ಮಾರ್ಪಡುತ್ತವೆ. ಇತ್ತೀಚೆಗೆ ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ವಿ.ವಿ.ಗಳು ಪಠ್ಯಪುಸ್ತಕ, ಪರೀಕ್ಷಾ ರಚನೆ ಮತ್ತು ಮೌಲ್ಯಮಾಪನ, ನೇಮಕಾತಿಯ ಕಾರ್ಯವಿಧಾನಗಳನ್ನೇ ಬದಲಾಯಿಸುವ ಒತ್ತಡಕ್ಕೆ ಸಿಲುಕಿವೆ. ಈ ಸಮಸ್ಯೆ ಒಂದೆಡೆಯಾದರೆ, ಅಳಿದುಳಿದ ಅತ್ಯುನ್ನತ ಪ್ರಾಧ್ಯಾಪಕರು ರಾಜ್ಯ ವಿ.ವಿ.ಗಳನ್ನು ಬಿಟ್ಟು ಕೇಂದ್ರೀಯ ವಿ.ವಿಗಳನ್ನು ಮತ್ತು ಇತ್ತೀಚಿನ ಹೊಸ ರಾಷ್ಟ್ರೀಯ ನವೀನ ವಿ.ವಿ.ಗಳನ್ನು ಸೇರುತ್ತಿದ್ದಾರೆ.ಇದಕ್ಕಿಂತ ಹೆಚ್ಚಾಗಿ, ಇನ್ನು ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ಜಾರಿಗೆ ಬರುವ ಮೂರು ಹಂತದ ಉನ್ನತ ಶಿಕ್ಷಣ ವ್ಯವಸ್ಥೆ, ಇದರಿಂದ ಉಂಟಾಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚಿಂತಿಸಬೇಕಾಗಿದೆ. ಮೊದಲ ಹಂತದಲ್ಲಿ ಅಂತರ ರಾಷ್ಟ್ರೀಯ ಗುಣಮಟ್ಟದ ರಾಷ್ಟ್ರೀಯ ವಿಶ್ವ ವಿದ್ಯಾಲಯಗಳು ರೂಪುಗೊಳ್ಳಲಿವೆ. ಇಂತಹ ವಿ.ವಿಗಳ ಆರಂಭಕ್ಕೆ ವಿದೇಶಿ ತಜ್ಞರ ಸಹಾಯದಿಂದ ಈಗಾಗಲೇ ನೀಲಿನಕ್ಷೆ ಸಿದ್ಧವಾಗಿದ್ದು ಅದಕ್ಕೆ ತಗಲುವ ವೆಚ್ಚವನ್ನು ಯೋಜನಾ ಆಯೋಗ ಸಿದ್ಧಪಡಿಸಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹೊಸ ಕೇಂದ್ರೀಯ ವಿ.ವಿ.ಗಳು ದೇಶದಾದ್ಯಂತ ಆರಂಭವಾಗಲಿವೆ. ಕೊನೆಯ ಹಂತದಲ್ಲಿ ಮಾತ್ರ ರಾಜ್ಯ ವಿ.ವಿ.ಗಳು ಕಾಣಿಸಿಕೊಳ್ಳುತ್ತವೆ. ರಾಷ್ಟ್ರೀಯ ವಿ.ವಿಗಳು ಮತ್ತು ಕೇಂದ್ರೀಯ ವಿ.ವಿಗಳನ್ನು ರಾಜ್ಯ ವಿ.ವಿ.ಗಳ ಸಮಾಧಿಯ ಮೇಲೆ ಕಟ್ಟಲಾಗುತ್ತಿದೆ ಎಂದೇ ಕೆಲವು ತಜ್ಞರು ವಿಶ್ಲೇಷಿಸುತ್ತಾರೆ. ಏಕೆಂದರೆ ನೂರಾರು ಸಮಸ್ಯೆಗಳಿಂದ ಬಳಲುತ್ತಿರುವ ರಾಜ್ಯ ವಿ.ವಿಗಳು ಇಂತಹ ಹೊಸ ವ್ಯವಸ್ಥೆಯಿಂದ ಇನ್ನಷ್ಟು ಅಧೋಗತಿಗೆ ಇಳಿಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು, ಅಧ್ಯಾಪಕರು ಉತ್ತಮ ಅವಕಾಶ ಇರುವ ರಾಷ್ಟ್ರೀಯ ವಿ.ವಿ./ಕೇಂದ್ರೀಯ  ವಿ.ವಿ.ಯತ್ತ ವಲಸೆ  ಹೋಗುವುದು ಶತಃಸಿದ್ಧ.ಅಭಿವೃದ್ಧಿ ಹೇಗಿರಬೇಕು?

ರಾಜ್ಯ ವಿ.ವಿಗಳನ್ನು ಸಹ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಅವುಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡಬೇಕಾಗುತ್ತದೆ. ರಾಜ್ಯ ವಿ.ವಿಗಳಲ್ಲಿ ನಡೆಯುವ ನೇಮಕಾತಿ, ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ನಿಗಾ ವಹಿಸಲು ಪ್ರತ್ಯೇಕ ಮಂಡಳಿಯನ್ನು ರಚಿಸುವುದು ಸೂಕ್ತ. ಉದ್ದೇಶಿತ ರಾಷ್ಟ್ರೀಯ ವಿ.ವಿಗಳು ಮತ್ತು ಕೇಂದ್ರ ವಿ.ವಿ.ಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ರಾಜ್ಯ ವಿ.ವಿ.ಗಳ ಮೇಲೆ ಉಂಟಾಗುವ ದುಷ್ಪರಿಣಾಮ ಹಾಗೂ ನಷ್ಟವನ್ನು ಕೇಂದ್ರ ಸರ್ಕಾರ ಬೇರೆ ರೀತಿಯಲ್ಲಿ ತುಂಬಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ವಿ.ವಿ.ಗಳ ನಿರ್ವಹಣೆಗೆ ಬೇಕಾಗುವ ಹಣಕಾಸು ವೆಚ್ಚವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು.ರಾಜ್ಯ ವಿ.ವಿ.ಗಳ ಸಂಶೋಧನಾ ಕಾರ್ಯಕ್ರಮಕ್ಕೆಂದೇ ಪ್ರತ್ಯೇಕ ಹಣ ಮೀಸಲಿಡಬೇಕು. ದೇಶದಾದ್ಯಂತ ಇರುವ ಎಲ್ಲ ರಾಜ್ಯ ವಿ.ವಿ. ಗಳು ಮತ್ತು ಕೇಂದ್ರ ವಿ.ವಿ.ಗಳಲ್ಲೂ ವೇತನ, ಇನ್ನಿತರ ಸೌಲಭ್ಯಗಳಲ್ಲಿ ಅಸಮಾನತೆ ಇರಬಾರದು. ಯಾವ ವಿ.ವಿಯಲ್ಲಿ ಪಿಎಚ್.ಡಿ ಪದವಿ ಪಡೆಯುವರೋ ಅವರಿಗೆ ಆ ವಿ.ವಿಯಲ್ಲೇ ಅಧ್ಯಾಪಕ ಹುದ್ದೆ ನೀಡಬಾರದು. ಇಂತಹ ಮಾದರಿ ಅವೆುರಿಕದ ವಿ.ವಿಗಳಲ್ಲಿ ಚಾಲ್ತಿಯಲ್ಲಿದ್ದು, ಇದರಿಂದ ಒಂದು ವಿ.ವಿ.ಗೆ ಬೇರೆ ಬೇರೆ ವಿ.ವಿಗಳಿಂದ ಅಧ್ಯಾಪಕರು ಬರಲು ಅವಕಾಶ ಆಗುತ್ತದೆ.ಆಗ ವೈವಿಧ್ಯ, ಹೊಸ ಆಲೋಚನೆ, ನವೀನತೆ, ಅನುಭವ, ಜ್ಞಾನದ ವರ್ಗಾವಣೆ ಸಾಧ್ಯವಾಗುತ್ತದೆ. ಇದರಿಂದ ಅಷ್ಟರ ಮಟ್ಟಿಗೆ ಜಾತಿ ರಾಜಕೀಯ, ಸ್ವಜನ ಪಕ್ಷಪಾತ ಕಡಿಮೆಯಾಗುತ್ತದೆ. ರಾಜ್ಯ ವಿ.ವಿ.ಗಳಿಗೆಂದೇ ಪ್ರತ್ಯೇಕ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕಿದೆ. ಇವುಗಳ ಮೂಲಕ, ಈಗಾಗಲೇ ಅವನತಿಯ ಹಾದಿಯಲ್ಲಿರುವ ರಾಜ್ಯ ವಿ.ವಿ.ಗಳಿಗೆ ತ್ವರಿತವಾಗಿ   `ಆಮ್ಲಜನಕ' ನೀಡ ಬೇಕಾದ ಅಗತ್ಯ ಇದೆ. 

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry