ಸಮಸ್ಯೆ ನಡುವೆಯೂ ಸಾಧನೆ

ಭಾನುವಾರ, ಜೂಲೈ 21, 2019
26 °C

ಸಮಸ್ಯೆ ನಡುವೆಯೂ ಸಾಧನೆ

Published:
Updated:

ಅರಸೀಕೆರೆ: ತಾಲ್ಲೂಕಿನ ಗಂಡಸಿ ಹೋಬಳಿ ಹೆಗ್ಗಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಸ್ಯೆಗಳ ನಡುವೆಯೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.ಈ ಶಾಲೆ 2012- 2013ನೇ ಸಾಲಿನಲ್ಲಿ `ಹೋಬಳಿ ಮಟ್ಟದ ಉತ್ತಮ ಶಾಲೆ' ಎಂಬ  ಪ್ರಶಸ್ತಿಗೆ ಭಾಜನವಾಗಿದೆ.

ಇಲ್ಲಿ 1ರಿಂದ 7ನೇ ತರಗತಿವರೆಗೆ ಶಿಕ್ಷಣಕ್ಕೆ ಅವಕಾಶವಿದ್ದು, ಒಟ್ಟು 53 ಮಕ್ಕಳು ಕಲಿಯುತ್ತಿದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಮತ್ತು ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕರು ಶಾಲೆಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಶಿಕ್ಷಕರ ಶ್ರದ್ಧೆ ಮತ್ತು ಪರಿಶ್ರಮದ ಫಲವಾಗಿ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಿಸ್ತು ಮತ್ತು ಶುಚಿತ್ವಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ.`ಇಲ್ಲಿನ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಆಯೋಜಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಕೋಲಾಟದಲ್ಲಿ ಸತತ ಐದು ಬಾರಿ ಜಿಲ್ಲಾ ಮಟ್ಟದಲ್ಲಿ ತಾಲ್ಲೂಕನ್ನು ಪ್ರತಿನಿಧಿಸಿದ್ದಾರೆ. ಶಾಲೆಯ ಪಾಲಿಗೆ ಇದು ಹೆಮ್ಮೆಯ ಸಂಗತಿ' ಎಂದು ಮುಖ್ಯ ಶಿಕ್ಷಕಿ ವಿಜಯ್‌ಕುಮಾರಿ ಹರ್ಷ ವ್ಯಕ್ತಪಡಿಸುತ್ತಾರೆ.ಗೋಡೆ ಮಾತನಾಡುತ್ತವೆ: ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಚಿತ್ರಸಹಿತ ಮಾಹಿತಿಯನ್ನು ಗೋಡೆಗಳ ಮೇಲೆ ಬರೆಯಲಾಗಿದೆ. ಇದನ್ನು ಕುತೂಹಲದಿಂದ ವೀಕ್ಷಿಸುವ ಮಕ್ಕಳಿಗೆ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಜಿಲ್ಲೆ, ರಾಜ್ಯಗಳ ಹೆಸರು, ನದಿಗಳ ಪರಿಚಯ, ಸಚಿವರ, ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ಸೇರಿದಂತೆ ಕೆಲವು ಗಾದೆ ಮಾತುಗಳ ಜತೆಗೆ ಉಪಯುಕ್ತ ಅಂಕಿ- ಅಂಶಗಳನ್ನು ಬರೆಯಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ.ಈ ಶಾಲೆಯಲ್ಲಿ ಕೆಲವು ಸಮಸ್ಯೆಗಳಿವೆ. ಹಳೆಯ ಕಟ್ಟಡವಾಗಿರುವುದರಿಂದ ಹೆಂಚುಗಳು ಒಡೆದು ಮಳೆ ಬಂದಾಗ ಮೇಲ್ಛಾವಣಿ ಸೋರುತ್ತದೆ. ಪೀಠೋಪಕರಣಗಳ ಕೊರತೆ ಇದ್ದು ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ.ಕುಡಿಯುವ ನೀರಿಗಾಗಿ ಶಾಲೆ ಆವರಣದಲ್ಲಿ ಕೊಳವೆ ಬಾವಿ ಕೊರೆಯಿಸಲು ಶಾಲೆಯ ಕಾಂಪೌಂಡ್‌ನ ಒಂದು ಭಾಗ ಒಡೆಯಲಾಗಿತ್ತು. ಅದಿನ್ನೂ ದುರಸ್ತಿ ಆಗಿಲ್ಲ. ಇದರಿಂದಾಗಿ ದನ- ಕರುಗಳು ಕೈತೋಟದಲ್ಲಿರುವ ಗಿಡಗಳನ್ನು ಹಾಳು ಮಾಡುತ್ತಿವೆ.ಆಟದ ಮೈದಾನ ಇಲ್ಲದೆ ಇರುವುದರಿಂದ ಮಕ್ಕಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಾಲೆ ಪ್ರಗತಿ ಪಥದಲ್ಲಿ ಸಾಗಲು ನೆರವಾಗಬೇಕು  ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry