ಶುಕ್ರವಾರ, ಮೇ 14, 2021
23 °C

ಸಮಸ್ಯೆ ನಿವಾರಣೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಬರ ಅಧ್ಯಯನಕ್ಕೆ ಆಗಮಿಸಿದ ತಂಡದೊಂದಿಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಇಲ್ಲಿನ ವಿವಿಧ ಗ್ರಾಮಗಳಿಗೆ ತೆರಳಿ ಕುಡಿಯುವ ನೀರು, ಜಾನುವಾರುಗಳ ಮೇವು ಸಂಗ್ರಹ, ರೈತರ ಸಮಸ್ಯೆ ಆಲಿಸಿದರು.ಬೆಂಗಳೂರಿನಿಂದ ಬುಧವಾರ ಬೆಳಿಗ್ಗೆ ಪಟ್ಟಣಕ್ಕೆ ಆಗಮಿಸಿದ ಸಚಿವರು, ಜಿಲ್ಲಾಧಿಕಾರಿ ತಂಡ ಶಾಸಕ ಡಾ.ವೈ.ಸಿ.ವಿಶ್ವನಾಥ್ ಜತೆ ಬಿಳವಾಲ, ಮಾದಾಪುರ, ಗರ್ಜೆ, ಯಗಟಿಪುರ, ದೊಣ್ಣೆಕೋರನಹಳ್ಳಿ, ಯಗಟಿ, ನಾಗರಾಳು, ಸಖರಾಯಪಟ್ಟಣಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು. ರಾಜ್ಯದ 123 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಮೂರು ಹಂತದಲ್ಲಿ ಬರಗಾಲ ಅಧ್ಯಯನಕ್ಕೆ ವಿಶೇಷ ತಂಡ ರಚಿಸಿ ಬರಪೀಡಿತ ಪ್ರದೇಶಗಳನ್ನು ಗುರುತಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ.

 

ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಎರಡು ಹೋಬಳಿಗಳಿಗೆ ಭೇಟಿ ನೀಡಬೇಕು. ಗ್ರಾಮೀಣ ಜನರೊಂದಿಗೆ ಮಾತನಾಡಿ ಕುಡಿಯುವ ನೀರು, ವಿದ್ಯುತ್ ಕೊರತೆ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ದೂರ ಬರುತ್ತಿವೆ.

 

ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು, ಅಂತರ್ಜಲ ಕೊರತೆಯಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದಂತಹ ಸಂದರ್ಭದಲ್ಲಿ ಹೊಸದಾಗಿ ಕೊಳವೆ ಬಾವಿಯನ್ನು ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿಗೆ ಅವರಿಗೆ ಆದೇಶಿಸಿದರು.  ಬರಗಾಲಕ್ಕೆ ತುತ್ತಾಗಿರುವ ಹಳ್ಳಿಗಳಿಗೆ ಕುಡಿಯುವ ನೀರು, ದನಕರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಜಿಲ್ಲಾ ಆಡಳಿತಕ್ಕೆ ಆದೇಶ ಮಾಡಲಾಗಿದೆ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಧೈರ್ಯ ತುಂಬಿದರು.ಕುಡಿಯುವ ನೀರು ಸರಬರಾಜು ಮಾಡುವ ಕಿರು ನೀರು ಯೋಜನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಎಂಜಿನಿಯರ್ ಕರಿಸಿದ್ದಯ್ಯ ಅವರಿಗೆ ಸಲಹೆ ನೀಡಿದರು. ಕೊಳವೆ ಬಾವಿ ದುರಸ್ತಿ ತುರ್ತು ಸೇವೆಗೆ ಜೀಪ್ ನೀಡಲಾಗುವುದು. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕೊಳವೆ ಬಾವಿಯಿಂದ ಕುಡಿಯುವ ನೀರಿನ ಸಮಸ್ಯೆಯಾಗಿದ್ದರೆ ಈ ಸೌಲಭ್ಯ ಪಡೆಯಬಹುದು ಎಂದರು.ತಾಲ್ಲೂಕಿನಲ್ಲಿ ಇನ್ನೂ 16 ವಾರಗಳಿಗೆ ಮೇವಿನ ದಾಸ್ತನು ಇದ್ದು, ಸಮಸ್ಯೆ ತಲೆದೋರುವುದಿಲ್ಲ ಎಂಬ ಅಂಶವನ್ನು ಪಶು ಇಲಾಖೆ ವರದಿ ನೀಡಿದೆ ಎಂದರು.  ಪ್ರತಿ ಶನಿವಾರ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬರಗಾಲ ಸಮಸ್ಯೆಆಲಿಸಿ ಪರಿಹರಿಸುವ ಸಭೆ ಕರೆಯಲು ಆದೇಶ ನೀಡಲಾಗಿದೆ. ಯಗಟಿಪುರದ ಬಸವತೀರ್ಥದಲ್ಲಿ ವೇದಾನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವುದನ್ನು ತಿಳಿಸಿದ ಗ್ರಾಮಸ್ಥರಾದ ಪುರಪ್ರಸನ್ನ, ಕೋಡಿಹಳ್ಳಿ ಮಹೇಶ್ ಸಚಿವರನ್ನು ಸ್ಥಳಕ್ಕೆ ಕರೆದೊಯ್ದು ಬ್ಯಾರೇಜ್ ಪೂರ್ಣಗೊಂಡರೆ ಹಿರೆಗರ್ಜೆ, ಗರ್ಜೆ, ಯಗಟಿ, ಯಗಟಿಪುರ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಲಿದೆ ಎಂದು ಸಚಿವರಿಗೆ ಮತ್ತು ಶಾಸಕರಿಗೆ ಮನವರಿಕೆ ಮಾಡಿದರು. ಸಂಬಂಧಪಟ್ಟ ಇಲಾಖೆ ಎಂಜಿನಿಯರ್‌ಗೆ ಬ್ಯಾರೇಜ್ ಪೂರ್ಣಗೊಳಿಸಲು ಆದೇಶಿಸುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ.4 ಲಕ್ಷ ವೆಚ್ಚದಲ್ಲಿ ಮೋಟಾರ್ ಖರೀದಿಸಲಾಗಿದೆ. ಕೊಳವೆ ಬಾವಿಗಳಿಗೆ ಅಗತ್ಯ ಇದ್ದಕಡೆ ಅವುಗಳನ್ನು ನೀಡಲಾಗುವುದಾಗಿ ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.    ಶಾಸಕ ಡಾ.ವೈ.ಸಿ.ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಚೇತಾ ನರೇಂದ್ರ, ಮಾಜಿ ಅಧ್ಯಕ್ಷೆ ಪ್ರಫುಲ್ಲ ಮಂಜುನಾಥ್, ಸದಸ್ಯೆ ಮಾಲಿನಿ ಬಾಯಿ ರಾಜನಾಯ್ಕ, ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಂಗೇಗೌಡ, ತಹಶೀಲ್ದಾರ್ ಬಿ.ಆರ್.ರೂಪಾ, ಕಂದಾಯ, ಕೃಷಿ, ತೋಟಗಾರಿಗೆ, ಪಶುಪಾಲನೆ ಇಲಾಖೆ ಅಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.