ಸಮಸ್ಯೆ ನಿವಾರಣೆಗೆ ಗ್ರಾಮಕ್ಕೆ ಭೇಟಿ

7
ಶಾಸಕ ಕೆ. ವೆಂಕಟೇಶ್ ಭರವಸೆ

ಸಮಸ್ಯೆ ನಿವಾರಣೆಗೆ ಗ್ರಾಮಕ್ಕೆ ಭೇಟಿ

Published:
Updated:

ಪಿರಿಯಾಪಟ್ಟಣ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಗ್ರಾಮಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದರು.ತಾಲ್ಲೂಕಿನ  ಮಾಲಂಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಬಾರಿ ಶಾಸಕನಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಬೇರೆ ಸರ್ಕಾರ ಅಧಿಕಾರದಲ್ಲಿತ್ತು. ಆದರೆ, ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.ಚುನಾವಣೆಯ ನಂತರ ಮಳೆಯ ಕಾರಣದಿಂದ ತಾಲ್ಲೂಕಿನ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇನ್ನು ತಾಲ್ಲೂಕಿನಲ್ಲಿರುವ 26 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಲಾಗುವುದು. ಸಾರ್ವಜನಿಕರು ಸಮಸ್ಯೆಗಳನ್ನು ತಿಳಿಸುವಾಗ ತಾಲ್ಲೂಕಿನ ಅಧಿಕಾರಿಗಳಿಗೆ ಗೊತ್ತಿರಲಿ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಸಹ ಪ್ರತಿ ಹಳ್ಳಿಗೆ ಕರೆದುಕೊಂಡು ಹೋಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.ಈ ಸಂದರ್ಭ ಗ್ರಾಮಸ್ಥರು ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ, ವಸತಿ, ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಬಹುದು. ಬಾಕಿ ಉಳಿದಿರುವ ಸಣ್ಣ ಪುಟ್ಟ ರಸ್ತೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸೇರಿಸಿ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಪಿಡಿಒಗೆ ಸೂಚಿಸುವುದಾಗಿ ತಿಳಿಸಿದರು. ಬಸವ ವಸತಿ ಯೋಜನೆಯಡಿಯಲ್ಲಿ ಬಡವರಿಗೆ ವಸತಿ ದೊರೆಯದಿರುವ ಬಗ್ಗೆ ಫಲಾನುಭವಿಗಳಿಂದ ದೂರು ಕೇಳಿಬಂತು. ಈ ಬಗ್ಗೆ ಪಿಡಿಒ ಶೋಭಾರಾಣಿ ಅವರನ್ನು ಶಾಸಕರು ವಿಚಾರಿಸಿ, ತಕ್ಷಣ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ  ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ತಾಲ್ಲೂಕು ಎಸ್ಸಿ ಘಟಕದ ಅಧ್ಯಕ್ಷ  ಪಿ. ಮಹದೇವ್, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ್, ಬಿಇಒ ಸಿ.ಎಸ್. ರಾಮಲಿಂಗು, ಸಿಡಿಪಿಒ ದೇವಕುಮಾರ್, ಎಎಸ್‌ಐ ಸಿದ್ದಯ್ಯ,  ಮುಖಂಡರುಗಳಾದ  ನಜೀರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry