ಮಂಗಳವಾರ, ಏಪ್ರಿಲ್ 20, 2021
32 °C

ಸಮಸ್ಯೆ ಪರಿಹರಿಸುವ ಜನಪ್ರತಿನಿಧಿಗಳಿಗೂ ಬರಗಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆಯ್ಕೆಯಾಗಿ ಹತ್ತು ತಿಂಗಳಾಗುತ್ತ ಬಂದರೂ ಒಂದು ಸಭೆ ಸರಿಯಾಗಿ ನಡೆದಿಲ್ಲ. ಜನರ ಸಮಸ್ಯೆ, ರೈತರ ಸಂಕಷ್ಟ ಪರಿಹರಿಸುವ ಕಾಳಜಿ ಇಲ್ಲವೇ ಇಲ್ಲ. ಬರೀ ವಿವಾದಗಳಿಂದ ಸುದ್ದಿಯಾಗಿದ್ದೇ ಗುಲ್ಬರ್ಗ ಜಿಲ್ಲಾ ಪಂಚಾಯಿತಿ `ಸಾಧನೆ~!ವರ್ಷದ ಆರಂಭದಲ್ಲಿ ಆಯ್ಕೆಯಾದ ಜಿಲ್ಲಾ ಪಂಚಾಸಿ ಸದಸ್ಯರ ಸಾಧನೆ ಏನು ಎಂಬುದು ಕ್ಷೇತ್ರದ ಜನತೆಗೆ ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ, ಆಯಾ ಕ್ಷೇತ್ರಗಳ ಜನರು ಎದುರಿಸುವ ಕುಂದುಕೊರತೆ ಚರ್ಚಿಸಲು ಕರೆಯುವ ಸಾಮಾನ್ಯ ಸಭೆಯು ಒಂದಿಲ್ಲೊಂದು ಕಾರಣದಿಂದ ವಿವಾದ ಸೃಷ್ಟಿಸುತ್ತಿದೆ. ಹೀಗಾಗಿ 22ರ ಸಭೆಯಾದರೂ ನಡೆದೀತೆ? ಎಂಬ ನಿರೀಕ್ಷೆ ಜನರದ್ದಿತ್ತು. ಆದರೆ ಅದನ್ನು ಸಹ ಮುಂದೂಡಲಾಗಿದೆ.`ಸಭೆಯಲ್ಲಿ ಪಾಲ್ಗೊಳ್ಳಲು ಪತಿಯಂದಿರಿಗೂ ಅವಕಾಶ ನೀಡಿ~ ಎಂದು ಜಿಲ್ಲಾ ಪಂಚಾಯಿತಿ ಕೆಲವು ಸದಸ್ಯೆಯರು ಒತ್ತಾಯಿಸಿ, ಸಾಮಾನ್ಯ ಸಭೆ ಬಹಿಷ್ಕರಿಸಿದ್ದು (ಜೂನ್ 27ರಂದು) ಹೊಸ ವಿವಾದ ಸೃಷ್ಟಿಸಿತ್ತು. ಇದು ತಣ್ಣಗಾಗುವಷ್ಟರಲ್ಲಿ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿತು. ಅಧ್ಯಕ್ಷ  ಶಿವಪ್ರಭು ಪಾಟೀಲ ಹಾಗೂ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ವಿರುದ್ಧ ಬಂಡೆದ್ದ ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ ಜತೆ ಕೈ ಜೋಡಿಸಲು ಮುಂದಾದರು. ಅತೃಪ್ತರನ್ನು ಸಮಾಧಾನಪಡಿಸಲು ಪಕ್ಷದ ವರಿಷ್ಠರು ಹರಸಾಹಸ ಮಾಡಬೇಕಾಯಿತು.ಅ. 12ರಂದು ಮೂರನೇ ಸಾಮಾನ್ಯ ಸಭೆ ನಡೆಯಬೇಕಿತ್ತಾದರೂ, ಕಾಂಗ್ರೆಸ್ ಸದಸ್ಯರು ಬಹಿಷ್ಕಾರ ಹಾಕಿದ್ದರಿಂದ ಕೋರಂ ಅಭಾವ ಉಂಟಾಗಿ ಸಭೆಯನ್ನು ಮುಂದೂಡಲಾಯಿತು. ಅಂದಿನ ಸಭೆಗೆ ಬಿಜೆಪಿ ಸದಸ್ಯರೂ ಗೈರುಹಾಜರಾಗಿದ್ದು ವಿಶೇಷ. ಸಭೆ ಮುಂದೂಡಿದ ಕೆಲ ಸಮಯದಲ್ಲೇ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಬಿಜೆಪಿಗೆ ಜೆಡಿಎಸ್ ನೀಡಿದ್ದ ಬೆಂಬಲವನ್ನು ವಾಪಸು ಪಡೆದರು; ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ಈ ಮಧ್ಯೆ, ಬಿಜೆಪಿ ಭಿನ್ನಮತೀಯರ ಜತೆ ಸೇರಿಕೊಂಡ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಪತ್ರ ಸಲ್ಲಿಸಿದ್ದರು. ಇದಕ್ಕೆ ಐವರು ಬಿಜೆಪಿ ಸದಸ್ಯರೂ ಸಹಿ ಮಾಡಿದ್ದರು. ಈ ಪತ್ರ ಅಧ್ಯಕ್ಷರನ್ನು ತಲುಪುವ ಮುನ್ನವೇ ಬಿಜೆಪಿಯ ಇಬ್ಬರು ಸದಸ್ಯರು ಶಿವಪ್ರಭು ಮೇಲೆ ವಿಶ್ವಾಸ ವ್ಯಕ್ತಪಡಿಸಿದರು! ಕಾಂಗ್ರೆಸ್ ಸಲ್ಲಿಸಿದ ಪತ್ರಕ್ಕೆ ತಮ್ಮಿಂದ ಒತ್ತಾಯಪೂರ್ವಕ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಅಲ್ಲಿಗೆ, ಆ ಅವಿಶ್ವಾಸ ಗೊತ್ತುವಳಿ ಪತ್ರಕ್ಕೆ ಮಾನ್ಯತೆ ಇಲ್ಲದಂತಾಯಿತು!ಮತ್ತೆ ಅಪರೇಷನ್ ಕಮಲ?: 43 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಮೂವರು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಈಗ ಮತ್ತೆ ಸಂಕಟದ ಕಾಲ. ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿಗೆ (ಈಗ 20 ಸದಸ್ಯರು) ಇನ್ನೂ ಇಬ್ಬರು ಸದಸ್ಯರು ಬೇಕು. ಅತ್ತ 19 ಸದಸ್ಯ ಬಲದ ಕಾಂಗ್ರೆಸ್, ಬಿಜೆಪಿ `ಭಿನ್ನ~ರನ್ನೇ ನಂಬಿ ಅಧಿಕಾರ ಹಿಡಿಯಲು ತಂತ್ರ ರೂಸಿತ್ತು. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಈಗ ಬಿಜೆಪಿ ಮತ್ತೆ ಅತಂತ್ರವಾಗಿದೆ. `ಕೆಲವು ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಲು ಕಾತರರಾಗಿದ್ದಾರೆ~ ಎಂದು ಅಧ್ಯಕ್ಷ ಶಿವಪ್ರಭು ಪಾಟೀಲ ಹೇಳಿರುವುದು ಹಲವು ಬಗೆಯ ಅರ್ಥ ಹೊಮ್ಮಿಸಿದೆ.ಸದಸ್ಯರ ಅಳಲು: “ಬರೀ ಕುರ್ಚಿ, ಅಧಿಕಾರಕ್ಕಾಗಿ ಸದಸ್ಯರು ಕಿತ್ತಾಟ ನಡೆಸಿದ್ದಾರೆಯೇ ವಿನಾ, ಜನರ ಬಗ್ಗೆ ಕಾಳಜಿಯೇ ಇಲ್ಲ” ಎಂದು ಕೆಲವು ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ. ಭಿನ್ನಮತೀಯರ ಬಗ್ಗೆಯೂ ಬಿಜೆಪಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಆಯ್ಕೆ ಮಾಡಿ ಕಳಿಸಿದ ಜನರಿಗೆ ನಮ್ಮ ಕಾರ್ಯವೈಖರಿಯಿಂದ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹತ್ತು ತಿಂಗಳಾದರೂ ಜಿಲ್ಲಾ ಪಂಚಾಯಿತಿಯಲ್ಲಿ ಯಾರೂ ಯಾರನ್ನೂ ಕೇಳುವಂತಿಲ್ಲ ಎಂಬ ದುಸ್ಥಿತಿ ಇದೆ. ಪಕ್ಷದ ವರಿಷ್ಠರು ಸಹ ಮೌನವಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಹಲವು ಕನಸು ಹೊತ್ತು ಮೊದಲ ಸಲ ಆಯ್ಕೆಯಾಗಿ ಬಂದಿರುವ ನಮಗಂತೂ ತೀರಾ ನಿರಾಶೆಯಾಗಿದೆ” ಎಂದು ಬಿಜೆಪಿ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.ಜಿಲ್ಲೆಯ ಏಳು ತಾಲ್ಲೂಕುಗಳನ್ನು `ಬರಗಾಲ ಪೀಡಿತ~ ಎಂದು ಘೋಷಿಸಲಾಗಿದೆ. ಮುಂದಿನ ಕ್ರಮಗಳ ಬಗ್ಗೆ ಚರ್ಚೆ, ಕ್ರಿಯಾಯೋಜನೆ ತಯಾರಿ, ಕಾಮಗಾರಿ ಕುರಿತು ಚರ್ಚೆ ನಡೆಯಬೇಕಾದ ಜಿಲ್ಲಾ ಪಂಚಾಯಿತಿ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಜಿಲ್ಲಾ ಪಂಚಾಯಿತಿಯಲ್ಲಿ ರಾಜಕೀಯ ಇಚ್ಛಾಶಕ್ತಿಯುಳ್ಳ ಜನಪ್ರತಿನಿಧಿಗಳಿಗೆ `ಬರ~ ಬಂದಿದೆ ಎಂಬ ಭಾವನೆ ಜನರಲ್ಲಿ ದಟ್ಟವಾಗಿ ಮೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.