ಗುರುವಾರ , ಮೇ 13, 2021
35 °C

ಸಮಸ್ಯೆ ಪರಿಹಾರಕ್ಕೆ ಮುತ್ಸದ್ದಿಗಳು ಬೇಕು: ನ್ಯಾಯಮೂರ್ತಿ ಸಂತೋಷ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಪರಿಹಾರಕ್ಕೆ ಮುತ್ಸದ್ದಿಗಳು ಬೇಕು: ನ್ಯಾಯಮೂರ್ತಿ ಸಂತೋಷ ಹೆಗ್ಡೆ

ಬೆಂಗಳೂರು: `ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಮುಖಂಡರ ಅಗತ್ಯವಿಲ್ಲ. ಬದಲಾಗಿ ರಾಜಕೀಯ ಮುತ್ಸದ್ದಿಗಳ ಅವಶ್ಯಕತೆ ಇದೆ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.ಕರ್ನಾಟಕ ಮಾರ್‌ವಾರಿ ಸಮಾಜ ಹಾಗೂ ಭಗವಾನ್ ಮಹಾವೀರ ಅಂಗವಿಕಲ ಸಹಾಯತ ಸಮಿತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಅಂಗವಿಕಲರಿಗೆ ಕೃತಕ ಅಂಗಾಂಗಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಇಂದಿನ ರಾಜಕೀಯ ಮುಖಂಡರು ಪ್ರಜೆಗಳ ಸಮಸ್ಯೆಗಳನ್ನು ಆಲಿಸುವಲ್ಲಿ ತಾತ್ಸಾರ ಮನೋಭಾವ ಹೊಂದಿದ್ದಾರೆ. ಹಿಂದಿನ ರಾಜಕೀಯ ಮುತ್ಸದ್ದಿಗಳಿಗೆ ಹೋಲಿಸಿದರೆ ಪ್ರಸ್ತುತ ರಾಜಕೀಯ ಮುಖಂಡರು ಸಮಾಜದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ~ ಎಂದು ವಿಷಾದಿಸಿದ ಅವರು, `ರಾಜಕೀಯ ಮುಖಂಡರ ಬದಲಿಗೆ ರಾಜಕೀಯ ಮುತ್ಸದ್ದಿಗಳ ಅವಶ್ಯಕತೆ ಸಮಾಜಕ್ಕಿದೆ~ ಎಂದು ಹೇಳಿದರು.ಮಹಾಪಾಪ: `ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡುವ ಹಣ ಅರ್ಹ ಪಲಾನುಭವಿಗಳಿಗೆ ದಕ್ಕುತ್ತಿಲ್ಲ. ಆದರೆ ಸರಿಯಾದ ಅಂಕಿ ಅಂಶ ಮಾತ್ರ ಕಡತಗಳಲ್ಲಿ ದಾಖಲಾಗಿರುತ್ತದೆ. ಫಲಾನುಭವಿಗಳ ಹಣ ದೋಚುವುದು ಮಹಾಪಾಪ. ಈ ವ್ಯವಸ್ಥೆ ಇದೇ ರೀತಿ ಮುಂದುವರಿದರೆ ಸಮಾಜವನ್ನು ದೇವರೇ ಕಾಪಾಡಬೇಕು~ ಎಂದರು.ಶೋಚನೀಯ ಸ್ಥಿತಿ: `ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಕೇಂದ್ರಗಳ ಕೊರತೆ, ನೀರಿನ ಸಮಸ್ಯೆ, ವಿದ್ಯುತ್ ಅಭಾವ... ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಣಾಮವಾಗಿ ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವಲ್ಲಿ ಕಾಳಜಿ ವಹಿಸಬೇಕು~ ಎಂದು ಹೇಳಿದರು.ಬುದ್ಧಿ ಕಲಿಸಿ: `ಪ್ರಜಾಪ್ರತಿನಿಧಿಗಳು ಪ್ರಜೆಗಳ ಏಳಿಗೆಗೆ ಶ್ರಮಿಸುತ್ತಿಲ್ಲ. ಆಯ್ಕೆ ಮಾಡಿದ ಪ್ರಜೆಗಳನ್ನೇ ಪ್ರಶ್ನೆ ಮಾಡುವ ಸನ್ನಿವೇಶ ಎದುರಾಗಿದೆ. ಇಂತಹ ಪ್ರತಿನಿಧಿಗಳಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಇವರಿಗೆ ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸಬೇಕು~ ಎಂದು ಮನವಿ ಮಾಡಿದರು.`ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಂದು ಸಂಘ ಸಂಸ್ಥೆಗಳು, ವಿವಿಧ ಸಮುದಾಯಗಳು ಮಾಡುತ್ತಿವೆ. ಮಾರ್‌ವಾರಿ ಸಮುದಾಯ ಕೈಗೊಂಡಿರುವ ಈ ಕಾರ್ಯ ಇತರೆ ಸಮುದಾಯಗಳಿಗೆ ಮಾದರಿಯಾಗಬೇಕು~ ಎಂದರು.ವಿಕ್ಟೋರಿಯಾದಲ್ಲಿ ಘಟಕ: ಕರ್ನಾಟಕ ಮಾರ್‌ವಾರಿ ಸಮುದಾಯವು ವಿಕ್ಟೋರಿಯಾ ಆಸ್ಪತ್ರೆಯ ಮೂಳೆ ಚಿಕಿತ್ಸಾ (ಆರ್ಥೋಪೆಡಿಕ್ಸ್) ಘಟಕದಲ್ಲಿ ಕೃತಕ ಅಂಗಾಂಗಗಳ ವಿತರಣಾ ಘಟಕವನ್ನು ತೆರೆದಿದೆ. ಬಡ ಅಂಗವಿಕಲರು ತಮ್ಮ ಅಂಗಾಂಗಗಳ ನ್ಯೂನತೆಗೆ ತಕ್ಕಂತೆ ಕೃತಕ ಅಂಗಾಂಗಗಳ ಸೌಲಭ್ಯವನ್ನು ಇಲ್ಲಿ ಪಡೆಯಬಹುದು.ಮೂರು ವರ್ಷಗಳಿಂದ ಸೇವೆ: ಮಾರ್‌ವಾರಿ ಸಮಾಜವು ಮೂರು ವರ್ಷಗಳಿಂದ ಕೃತಕ ಅಂಗಾಂಗಗಳ ವಿತರಣಾ ಯೋಜನೆಯನ್ನು ಹಮ್ಮಿಕೊಂಡು ಬಂದಿದೆ. 2009ರಲ್ಲಿ ಮೊದಲ ಬಾರಿಗೆ 60 ಮಂದಿಗೆ ಅಂಗಾಂಗಳನ್ನು ವಿತರಣೆ ಮಾಡಿತ್ತು. 2010ರಲ್ಲಿ 90, 2011ನೇ ಸಾಲಿನಲ್ಲಿ 183 ಮಂದಿಗೆ ಕೃತಕ ಅಂಗಾಂಗಗಳನ್ನು ನೀಡುತ್ತಿದ್ದು, ವರ್ಷವಿಡೀ ಕೃತಕ ಅಂಗಾಂಗಗಳನ್ನು ವಿತರಿಸಲಿದೆ.ಪ್ರತಿ ವರ್ಷ ಶಿಬಿರ: `ಅಂಗವಿಕಲರಿಗೆ ಕೃತಕ ಅಂಗಾಂಗಗಳನ್ನು ವಿತರಿಸಲು ಪ್ರತಿ ವರ್ಷ ಜುಲೈ- ಆಗಸ್ಟ್‌ನಲ್ಲಿ ಶಿಬಿರ ನಡೆಸಲಾಗುವುದು. ವ್ಯಕ್ತಿಗಳ ನ್ಯೂನತೆಯನ್ನು ಗಮನಿಸಿ ಅವರಿಗೆ ಅಗತ್ಯವಾದ (ಜೈಪುರದ ವಸ್ತುಗಳಿಂದ ಮಾಡಿದ ಅಂಗಾಂಗಗಳು) ಕೃತಕ ಅಂಗಾಂಗಗಳನ್ನು ಮೊದಲು ಸಿದ್ಧಪಡಿಸಲಾಗುತ್ತದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಶಿಬಿರವನ್ನು ಆಯೋಜಿಸಿ ಅಂಗಾಂಗಗಳನ್ನು ನೀಡಲಾಗುವುದು~ ಎಂದು ಮಾರ್‌ವಾರಿ ಸಂಘದ ಕಾರ್ಯದರ್ಶಿ ಆಶಿಶ್ ಅಗರವಾಲ್ ತಿಳಿಸಿದರು.ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಒ.ಎಸ್.ಸಿದ್ದಪ್ಪ, ಅಂಗವಿಕಲ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ ನಿರ್ದೇಶಕಿ ಎಂ.ವಿ.ಸಾವಿತ್ರಿ, ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಮೇಲ್ವಿಚಾರಕ ಡಾ.ಬಿ.ಜಿ.ತಿಲಕ್, ಕರ್ನಾಟಕ ಮಾರ್‌ವಾರಿ ಸಮಾಜದ ಅಧ್ಯಕ್ಷ ರಂಜನ್ ಕುಮಾರ್ ಬಾವ್‌ಸಿಂಕಾ, ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ ಅಧ್ಯಕ್ಷ ಗೌತಮ್ ಮೆಹ್ತಾ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.