ಸೋಮವಾರ, ಜೂನ್ 21, 2021
28 °C

ಸಮಸ್ಯೆ ಪರಿಹಾರಕ್ಕೆ ಯತ್ನ: ಬಗಾಡಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಪರಿಹಾರಕ್ಕೆ ಯತ್ನ: ಬಗಾಡಿ ಭರವಸೆ

ಮುಂಡಗೋಡ: ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ವಿಮೆ ನೀಡುವುದು ಸೇರಿದಂತೆ ಸಾಗುವಳಿ ಭೂಮಿಗೆ ಪಹಣಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಇಲ್ಲಿಯ ತಹಶೀಲ್ದಾರ ಕಚೇರಿ ಎದುರುಗಡೆ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಶಿರಸಿ ಉಪ ವಿಭಾಗಾಧಿಕಾರಿ ಗೌತಮ ಬಗಾಡಿ ಗುರುವಾರ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು.1968ರಿಂದ 76ರ ಪೂರ್ವ ಹಂಗಾಮಿ ಹಾಗೂ ಅತಿಕ್ರಮಣದಾರರ ಜಮೀನನ್ನು ಮಂಜೂರು ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದ ರೈತ ಮುಖಂಡರ ಮನವಿ ಆಲಿಸಿದರು.ಕಳೆದ ಎರಡು ವರ್ಷಗಳಿಂದ ಬೆಳೆ ಬರದೆ ರೈತರು ತೀವ್ರ ಸಂಕಷ್ಟದಲ್ಲಿದ್ದು, ರೈತರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹಲವು ವರ್ಷಗಳಿಂದ ಅತಿಕ್ರಮಣ ಜಮೀನಿನಲ್ಲಿ ಸಾಗುವಳಿ ಮಾಡುತ್ತ ಬಂದಿರುವ ರೈತರಿಗೆ ಪಹಣಿ ಪತ್ರ ನೀಡಿಲ್ಲ. ದೇಶದ ಬೆನ್ನೆಲುಬಾಗಿರುವ ಅನ್ನದಾತನೇ ಕಷ್ಟದ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಧರಣಿ ನಿರತರು ಅಳಲನ್ನು ತೋಡಿಕೊಂಡರು.ಶಿರಸಿ ಎ.ಸಿ.ಗೌತಮ ಬಗಾಡಿ ಮಾತನಾಡಿ, ತಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಮನವೊಲಿಸಿದರು.ಕ.ದ.ರ.ವೇ.ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ರೈತ ಸಂಘದ ಶಂಭಣ್ಣ ಕೋಳೂರ, ಮುಕ್ತುಂಸಾಬ ತರ್ಲಘಟ್ಟ, ಭೀಮಣ್ಣ ಪಾಟೀಲ, ಅಂದಾನಪ್ಪ ಕುರುಬರ, ರಾಮಚಂದ್ರ ಬೆಳವತ್ತಿ ರುಕ್ಮೀಣಿ ಹುಲಮನಿ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.