ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳ ಮನವಿ

7

ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳ ಮನವಿ

Published:
Updated:

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಮೌಲ್ಯಮಾಪನ ಹಾಗೂ ಫಲಿತಾಂಶ ಕುರಿತ ಸಮಸ್ಯೆ ಎದುರಿಸುತ್ತಿದ್ದು, ಸಂಬಂಧಿಸಿದವರು ಇದನ್ನು ಪರಿಹರಿಸಬೇಕು ಎಂದು ಕೋರಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ವಿವಿ ಕುಲಸಚಿವರಿಗೆ ಮನವಿ ಸಲ್ಲಿಸಿದರು.ಕಳೆದ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶದಲ್ಲಿ ಏರುಪೇರಾಗಿದ್ದು, ಅನೇಕ ವಿದ್ಯಾರ್ಥಿಗಳಿಗೆ ನ್ಯಾಯಯುತ ಅಂಕಗಳು ದೊರೆತಿಲ್ಲ. ಉತ್ತರ ಪತ್ರಿಕೆಯ ಹಸ್ತಪ್ರತಿಯಿಂದ ಈ ಅಂಶವು ಸಾಬೀತಾಗಿದ್ದು, ಈ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಲ್ಲೂ ಹಲವಾರು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮಾಡಿಸಿದಾಗ, ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಉದಾಹರಣೆಗಳಿವೆ ಎಂದು ತಿಳಿಸಲಾಯಿತು.ಅಂಕಗಳ ಎಣಿಕೆಯಲ್ಲೂ ತಪ್ಪುಗಳಾಗಿದ್ದು, ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯಲ್ಲಿ ಒಂದು ರೀತಿಯ ಅಂಕ, ಅಂಕಪಟ್ಟಿಯಲ್ಲಿ ಬೇರೆ ರೀತಿಯಲ್ಲಿ ಅಂಕ ನಮೂದಿಸಿರುವ ನಿದರ್ಶನವಿದೆ. ಮರು ಮೌಲ್ಯಮಾಪನದ ಶುಲ್ಕವೂ ದುಬಾರಿಯಾಗಿದ್ದು, ರೂ 700, ಉತ್ತರ ಪತ್ರಿಕೆಯ ಹಸ್ತಪ್ರತಿಗೆ ರೂ 300 ಇರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಅನೇಕ ವಿದ್ಯಾರ್ಥಿಗಳು ಅಧಿಕ ಅಂಕಗಳಿಸುವ ಭರವಸೆಯಿದ್ದರೂ, ದುಬಾರಿ ಶುಲ್ಕದ ಕಾರಣ ಮರು ಮೌಲ್ಯಮಾಪನಕ್ಕೆ ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶುಲ್ಕವನ್ನೂ ಕಡಿಮೆ ಮಾಡಬೇಕು ಎಂದು ಕೋರಲಾಯಿತು.ಕಳೆದ ಸೆಮಿಸ್ಟರ್‌ನಲ್ಲಿ ಪರೀಕ್ಷಾ ದಿನಾಂಕವನ್ನು ಮುಂಚಿತವಾಗಿ ಪ್ರಕಟಿಸದ್ದರಿಂದ   ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿ ನಡೆಸಲೂ ಸಾಧ್ಯವಾಗದಂತಾಗಿದೆ. ಎರಡು ಪರೀಕ್ಷೆಗಳ ನಡುವೆ ಕನಿಷ್ಠ ಒಂದು ದಿನದ ಅಂತರ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಮೌಲ್ಯಮಾಪನ ಕುಲಸಚಿವ ಡಾ. ರಂಗರಾಜ್ ವನದುರ್ಗ ಅವರಿಗೆ ಮನವಿ ಸಲ್ಲಿಸಲಾಯಿತು.ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಬೆಂಬಲಿಸಿ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಉಮೇಶ್, ಗೋವಿಂದ್, ಎರ‌್ರಿಸ್ವಾಮಿ, ಡಾ.ಪ್ರಮೋದ್, ವಿದ್ಯಾರ್ಥಿಗಳಾದ ಅರುಣ್, ಸಿದ್ಧಾರ್ಥ, ವಿನಯ್, ದೀಪಕ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry