ಸಮಸ್ಯೆ ಪರಿಹಾರಕ್ಕೆ 24 ಗಂಟೆ ಗಡುವು

7

ಸಮಸ್ಯೆ ಪರಿಹಾರಕ್ಕೆ 24 ಗಂಟೆ ಗಡುವು

Published:
Updated:

ಹುಬ್ಬಳ್ಳಿ: ವೇತನ ನೀಡಿಕೆ ಸೇರಿದಂತೆ ತಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮಹಾನಗರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಗೆ ಪೌರಕಾರ್ಮಿಕರು 24 ಗಂಟೆಗಳ ಗಡುವು ನೀಡಿದರು.ಪಾಲಿಕೆ ಆವರಣದಲ್ಲಿ ಬುಧವಾರ ಸಂಜೆ ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರೊಂದಿಗೆ ಪಾಲಿಕೆ ಲೆಕ್ಕಾಧಿಕಾರಿ ರಾಮದಾಸ್ ಹಾಗೂ ಕಾರ್ಮಿಕ ಇಲಾಖೆ ಉಪ ಆಯುಕ್ತ ಎಂ.ಎಸ್.ತಿಮ್ಮೊಳಿ ನಡೆಸಿದ ಸಂಧಾನ ಸಭೆಯಲ್ಲಿ ಗುರುವಾರ ಸಂಜೆಯ ಒಳಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಗಡುವು ನೀಡಿದರು.ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಶುಕ್ರವಾರ ಮತ್ತೆ ಹೋರಾಟಕ್ಕಿಳಿಯುವುದು ಅನಿವಾರ್ಯ. ಅವಳಿ ನಗರದ ಸ್ವಚ್ಛತಾ ಕಾರ್ಯ ಕೈಬಿಟ್ಟು ಆಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿಯೂ ಪೌರಕಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದರು.ಇಲಾಖೆ ಮುಖ್ಯಸ್ಥರ ವಾಗ್ವಾದ!: ಪೊಲೀಸರ ಮನವಿ ಮೇರೆಗೆ ಪೌರಕಾರ್ಮಿಕರೊಂದಿಗೆ ಮಾತನಾಡಲು ಆಗಮಿಸಿದ  ಪಾಲಿಕೆ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾತುಕತೆಗೆ ಮೊದಲು ಪರಸ್ಪರರ ವೈಫಲ್ಯ ಎತ್ತಿ ಹೇಳುತ್ತಾ ವಾಗ್ವಾದ ನಡೆಸಿದ್ದು ನೆರೆದಿದ್ದವರಿಗೆ ಮನರಂಜನೆ ಒದಗಿಸಿತು.ಕಾರ್ಮಿಕರಿಗೆ ವೇತನ ಪಾವತಿಗಾಗಿ ಪಾಲಿಕೆಯು ಈಗಾಗಲೇ ಗುತ್ತಿಗೆದಾರರ ಖಾತೆಗೆ 1.74 ಕೋಟಿ ರೂಪಾಯಿ ಜಮಾ ಮಾಡಿದೆ. ಇದರಲ್ಲಿ ಪಾಲಿಕೆಯ ಪಾತ್ರವೇನೂ ಇಲ್ಲ. ಪ್ರತಿಭಟನಾ ನಿರತರು ನಮ್ಮ ಸಿಬ್ಬಂದಿಯೂ ಅಲ್ಲ ಎಂದು ಹೇಳಿದ ಲೆಕ್ಕಾಧಿಕಾರಿ ರಾಮದಾಸ್, ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಮಿಕ ಇಲಾಖೆಗೆ ಸೇರಿದೆ. ಇದು ಅವರ ವೈಫಲ್ಯ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಉಪ ಆಯುಕ್ತ ತಿಮ್ಮೊಳಿ, `ವೇತನ ಕೊಡಿಸುವುದು ಇಬ್ಬರ ಜವಾಬ್ದಾರಿ. ಇದನ್ನು ನಾವು ಮಾತ್ರ ನಿಭಾಯಿಸಲು ಸಾಧ್ಯವಿಲ್ಲ~ ಎಂದು ಪ್ರತಿಕ್ರಿಯಿಸಿದರು.ಇದು ಕೆಲ ಹೊತ್ತು ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ ಮಧ್ಯ ಪ್ರವೇಶಿಸಿದ ಎಸಿಪಿ ಎ.ಆರ್.ಬಡಿಗೇರ ಮೊದಲು  ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಹೇಳಿ ಮಾತುಕತೆಗೆ ಒಪ್ಪಿಸಿದರು.ಎಸಿಪಿ ಆಕ್ರೋಶ: ಕಾರ್ಮಿಕರೊಂದಿಗೆ ಮಾತ ನಾಡಲು ಬಂದ ಅಧಿಕಾರಿಗಳನ್ನು ಕಾರ್ಮಿಕರ ಗುಂಪಿನಲ್ಲಿದ್ದ ಕೆಲವರು ಅಶ್ಲೀಲವಾಗಿ ನಿಂದಿಸಿದ್ದರಿಂದ ಬಡಿಗೇರ ಅವರನ್ನು ಕೆರಳಿಸಿತು. ಅಶ್ಲೀಲವಾಗಿ ಮಾತ ನಾಡುವವರನ್ನು ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ಎರಡು ಗಂಟೆ ಕಾಲ ಸಂಚಾರ ಬಂದ್ ಮಾಡಲು ಅವಕಾಶ ನೀಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿ ಸುತ್ತಲೂ ಪೊಲೀಸ್ ವ್ಯಾನ್ ನಿಲ್ಲಿಸಿ ಮಾತುಕತೆ ಮುಂದುವರೆಸುವಂತೆ ಸೂಚಿಸಿದರು.ಗುತ್ತಿಗೆದಾರರು ವೇತನ ನೀಡುತ್ತಿಲ್ಲ: ಪಾಲಿಕೆ ಗುತ್ತಿಗೆದಾರರಿಗೆ ಹಣ ಪಾವತಿಸಿದರೂ ಕಾರ್ಮಿಕರಿಗೆ ಕೊಡುತ್ತಿಲ್ಲ ಎಂದು ಕಾರ್ಮಿಕರ ಮುಖಂಡ ವಿಜಯ ಗುಂಟ್ರಾಳ ಆರೋಪಿಸಿದರು. `ಕಳೆದ 15 ವರ್ಷಗಳಿಂದಲೂ ಗುತ್ತಿಗೆ ಕಾರ್ಮಿಕರ ಶೋಷಣೆ ನಡೆಯುತ್ತಿದೆ. ಕಾರ್ಮಿಕರ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಲಾಗುತ್ತಿದೆ. ಅ.2ರೊಳಗೆ ನೀಡ ಬೇಕಿದ್ದ ಬಾಕಿ ಹಣ ಇನ್ನೂ ಕೊಟ್ಟಿಲ್ಲ.  ಇದಕ್ಕೆ ಇಲಾಖೆಯ ನಿಷ್ಕ್ರಿಯತೆಯೇ ಕಾರಣ~ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಿಮ್ಮೊಳಿ, ಸರಿಯಾಗಿ ಹಣ ಪಾವತಿಸದ 44 ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಣೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry