ಮಂಗಳವಾರ, ನವೆಂಬರ್ 19, 2019
23 °C

ಸಮಸ್ಯೆ ಬಗೆಹರಿಸಿದರೆ ಮತದಾನ: ಗ್ರಾಮಸ್ಥರ ನಿರ್ಧಾರ

Published:
Updated:

ಕೊಳ್ಳೇಗಾಲ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಂದು ಸೂಕ್ತ ಭರವಸೆ ನೀಡದ ಹೊರತು ಚುನಾವಣೆ ಬಹಿಷ್ಕಾರ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಯಡಕುರಿಯ ಗೌಡರಾದ ಕೆಂಪಪ್ಪ ತಿಳಿಸಿದರು.ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಿಕುರಿಯ ಗ್ರಾಮದಲ್ಲಿ ಮತದಾನ ಬಹಿಷ್ಕರ ಹಿಂಪಡೆಯುವಂತೆ ಹನೂರು ವಿಧಾನ ಸಭಾ ಚುನಾವಣಾಧಿಕಾರಿ ರಮೇಶ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದರು.`ಹಲವಾರು ದಶಕಗಳಿಂದ ಈ ಗ್ರಾಮದ ಜನತೆಗೆ ಪ್ರತಿಚುನಾವಣೆ ಸಂದರ್ಭದಲ್ಲೂ ಸಿಹಿಸಿಹಿ ಮಾತುಗಳಾಡಿ ನಮ್ಮಿಂದ ಮತ ಪಡೆದು ನಮಗೆ ನೀಡಿದ ವಾಗ್ದಾನ ಈಡೇರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ಭಾರಿ ಚುನಾವಣೆಯಿಂದ ದೂರು ಉಳಿಯುವುದೇ ನಮ್ಮ ಗುರಿ' ಎಂದು ಮುಖಂಡರು ತಿಳಿಸಿದರು.ಚುನಾವಣಾಧಿಕಾರಿ ರಮೇಶ್ ಮಾತನಾಡಿ, ಮತದಾನ ನಿಮ್ಮ ಹಕ್ಕು, ಮತದಾನ ಬಹಿಷ್ಕಾರವು ಸಮಸ್ಯೆ ಬಗೆಹರಿಸಲು ಪರಿಹಾರವಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನ ಸೆಳೆದು ಸೇತುವೆ ನಿರ್ಮಾಣದ ಬಗ್ಗೆ ಕ್ರಮವಹಿಸುವುದಾಗಿ ಮತದಾನ ಬಹಿಷ್ಕಾರ ನಿಲುವಿನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.ತಹಶೀಲ್ದಾರ್ ಮಾಳಿಗಯ್ಯ ಅವರೂ ಸಹ ಚುನಾವಣಾಧಿಕಾರಿಗಳ ಮಾತಿಗೆ ಧ್ವನಿಗೂಡಿಸಿ ಗ್ರಾಮದ ಜನತೆ ಅಮೂಲ್ಯ ಮತದಾನದಿಂದ ವಂಚಿತರಾಗದೆ ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗಬೇಕು ಎಂದು ತಿಳಿಸಿದರು.ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡದ ಹೊರತು ಮತದಾನ ಬಹಿಷ್ಕಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮದ ಮುಖಂಡರು ಪಟ್ಟುಹಿಡಿದು ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ    ಹಿಂದಿರುಗಿದರು.ಸಭೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಶಿವಣ್ಣ, ಪ್ರಕಾಶ್, ರಾಜಸ್ವ ನಿರೀಕ್ಷಕ ಪರಮೇಶ, ಗ್ರಾಮ ಲೆಕ್ಕಿಗ ಪ್ರದೀಪ್, ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಗುರುಮಲ್ಲಪ್ಪ, ಉಮೇಶ, ಬಸವರಾಜು, ನಾಗಪ್ಪ, ಕುಮಾರಸ್ವಾಮಿ, ಮರಿಸ್ವಾಮಿ, ಮಂಗಳ ಹುಚ್ಚೇಗೌಡ, ನಿಂಗರಾಜು, ಕುಳ್ಳಹುಚ್ಚೇಗೌಡ, ನಿಂಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಇದ್ದರು.

ಪ್ರತಿಕ್ರಿಯಿಸಿ (+)