ಸಮಸ್ಯೆ ಸವಾಲಾಗಿ ಸ್ವೀಕರಿಸಲು ಸಲಹೆ

7

ಸಮಸ್ಯೆ ಸವಾಲಾಗಿ ಸ್ವೀಕರಿಸಲು ಸಲಹೆ

Published:
Updated:

ಸಾಗರ: ಜೀವನ ಕೌಶಲ ರೂಪಿಸಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅವುಗಳಿಗೆ ಸಮರ್ಥ ಪರಿಹಾರ ಕಂಡುಕೊಳ್ಳಬೇಕು ಎಂದು ಕುವೆಂಪು ವಿವಿ ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಗನ್ನಾಥ ಡಾಂಗೆ ಕಿವಿಮಾತು ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ಗುರುವಾರ ಹಮ್ಮಿಕೊಂಡಿದ್ದ ಅರಿವು ವಿಸ್ತರಣಾ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ‘ಜೀವನ ಕೌಶಲಗಳು’ ವಿಷಯದ ಕುರಿತು ಅವರು ಮಾತನಾಡಿದರು.

ಅರಿವು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ, ವಿಮರ್ಶಾತ್ಮಕ ಆಲೋಚನೆ, ಸೃಜನಾತ್ಮಕ ದೃಷ್ಟಿಕೋನ, ಪರಸ್ಪರ ಸಂಬಂಧ, ಸಂವಹನ ಕಲೆ, ಸಹಾನುಭೂತಿ, ಒತ್ತಡ, ಭಾವನೆಗಳ ನಿಭಾಯಿಸುವಿಕೆ ಈ ಎಲ್ಲಾ ಗುಣ ಮೈಗೂಡಿಸಿಕೊಂಡಲ್ಲಿ ಯಶಸ್ಸಿನ ಜತೆಗೆ ನೆಮ್ಮದಿ ಹಾಗೂ ಸಂತೃಪ್ತಿ ಕಾಣಲು ಸಾಧ್ಯ ಎಂದು ಹೇಳಿದರು.ಜಾಗತೀಕರಣದಿಂದಾಗಿ ಮೌಲ್ಯಗಳು ಮಾಸಿ ಹೋಗುತ್ತಿವೆ. ಮೌಲ್ಯಗಳ ಪುನರ್ ಸ್ಥಾಪನೆಗೆ ಯುವಜನರು ಕೌಶಲ ರೂಢಿಸಿಕೊಳ್ಳಬೇಕಾದದ್ದು ಅತ್ಯಗತ್ಯ. ಪ್ರತಿ ವಿಷಯವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುವ, ವೈಚಾರಿಕ ನಿಲುವಿನ ಆಧಾರದ ಮೇಲೆ ವಿಮರ್ಶಿಸುವ, ವ್ಯಕ್ತಿತ್ವದ ಪ್ರಾಬಲ್ಯ ಮತ್ತು ದೌರ್ಬಲ್ಯಗಳ ಕುರಿತ ಅರಿವು ಇದ್ದಾಗ ಸಮಸ್ಯೆಗಳು ಸಹಜವಾಗಿ ದೂರಾಗುತ್ತವೆ ಎಂದರು.‘ವ್ಯಕ್ತಿತ್ವ ವಿಕಸನ’ ಕುರಿತು ಕುವೆಂಪು ವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಮಾತನಾಡಿ, ಇಂದಿನ ಆಧುನಿಕೋತ್ತರ ಕಾಲದಲ್ಲಿ ವಾಸ್ತವವೇ ಬೇರೆ, ಅದನ್ನು ಪ್ರತಿನಿಧಿಸುವ ವ್ಯವಸ್ಥೆಯೇ ಬೇರೆ ಎನ್ನುವ ನಿಜ ಅಂಶವನ್ನು ಯುವಜನರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದಲ್ಲಿ ಆಧುನಿಕತೆ ಒಡ್ಡುವ ಆಮಿಷಗಳಿಗೆ ಬಲಿಯಾಗುವ ಅಪಾಯವಿದೆ ಎಂದು ಹೇಳಿದರು.

ಕುವೆಂಪು ವಿವಿ ಪ್ರಸಾರಾಂಗ ಉಪ ನಿರ್ದೇಶಕ ಡಾ.ಶಿವಾನಂದ ಕೆಳಗಿನಮನಿ, ಸಹ ನಿರ್ದೇಶಕ ಡಾ.ಕುಮಾರ ಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಪ್ರಸನ್ನ ಹಾಜರಿದ್ದರು.ಶಿಲ್ಪಾ ಪ್ರಾರ್ಥಿಸಿದರು. ದಿವ್ಯಾ ಪೈ ಸ್ವಾಗತಿಸಿದರು. ನಳಿನಾಕ್ಷಿ ವಂದಿಸಿದರು. ಜೆ.ವಿನುತಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry