ಸೋಮವಾರ, ಮೇ 10, 2021
25 °C

ಸಮಸ್ಯೆ ಸುಳಿಯಲ್ಲಿ ಕಿರು ವಿಮಾನ ನಿಲ್ದಾಣಗಳ ಕಾಮಗಾರಿ

ಪಿ.ಎಂ. ರಘುನಂದನ್ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜಾಪುರ, ಬಳ್ಳಾರಿ, ಗುಲ್ಬರ್ಗ ಮತ್ತು ಶಿವಮೊಗ್ಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಉದ್ದೇಶಿಸಿರುವ ಕಿರು ವಿಮಾನ ನಿಲ್ದಾಣಗಳ ಕಾಮಗಾರಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದೆ.ವಿಜಾಪುರ ಮತ್ತು ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿಗಳ ಪ್ರವರ್ತಕ ಸಂಸ್ಥೆ ಎಂಎಆರ್‌ಜಿ, ಯೋಜನೆಯಿಂದ ಹಿಂದೆ ಸರಿದಿದೆ. ಗುಲ್ಬರ್ಗ ಮತ್ತು ಶಿವಮೊಗ್ಗ ನಿಲ್ದಾಣ ಕಾಮಗಾರಿಗಳ ಪ್ರವರ್ತಕ ಸಂಸ್ಥೆಗಳಲ್ಲಿ ಆಂತರಿಕ ಸಮಸ್ಯೆ ಎದುರಾಗಿರುವ ಕಾರಣ, ಅಲ್ಲೂ ಕಾಮಗಾರಿ ಸ್ಥಗಿತಗೊಂಡಿದೆ. `ವಿಜಾಪುರ ಮತ್ತು ಬಳ್ಳಾರಿ ನಿಲ್ದಾಣ ಕಾಮಗಾರಿ ಆಗುವಂಥದ್ದಲ್ಲ. ಹಾಗಾಗಿ ಅವುಗಳಿಂದ ನಾವು ಹಿಂದೆ ಸರಿಯಲು ಉದ್ದೇಶಿಸಿದ್ದೇವೆ' ಎಂದು ಎಂಎಆರ್‌ಜಿ ಸಂಸ್ಥೆ. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಇತ್ತೀಚೆಗೆ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ವಿಜಾಪುರದಿಂದ 11 ಕಿ.ಮೀ ದೂರದಲ್ಲಿ ಗುರುತಿಸಲಾದ ಸ್ಥಳ, ತೀರಾ ಉಬ್ಬು-ತಗ್ಗುಗಳಿಂದ ಕೂಡಿದೆ. ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸ್ಫೋಟಕಗಳನ್ನು ಭಾರಿ ಪ್ರಮಾಣದಲ್ಲಿ ಬಳಸಬೇಕಿದೆ. ಇದು ದುಬಾರಿ ವೆಚ್ಚದ ಕೆಲಸ ಎಂದು ಸಂಸ್ಥೆ ಹೇಳುತ್ತಿದೆ. ಎಂಎಆರ್‌ಜಿ ಸಂಸ್ಥೆ ವಿಜಾಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ 727 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು, ಅಲ್ಲಿ ಒಂದು ಕಚೇರಿಯನ್ನೂ ಆರಂಭಿಸಿತ್ತು. ಇದು ಅಂದಾಜು 200 ಕೋಟಿ ರೂಪಾಯಿ ಮೊತ್ತದ ಯೋಜನೆ.ಈ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ, ಎಂಎಆರ್‌ಜಿ ಸಂಸ್ಥೆ ಸರ್ಕಾರದ ಜೊತೆ ಯೋಜನಾ ಅಭಿವೃದ್ಧಿ ಒಪ್ಪಂದಕ್ಕೆ 2010ರಲ್ಲಿ ಸಹಿ ಹಾಕಿತ್ತು. ಜಮೀನು ಗುತ್ತಿಗೆ ಒಪ್ಪಂದಕ್ಕೆ ಸಹಿ ಆದ ತಕ್ಷಣ, ಸಂಸ್ಥೆ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಪದೇ ಪದೇ ಮನವಿ ಮಾಡಿಕೊಂಡರೂ, ಸಂಸ್ಥೆ ಕಾಮಗಾರಿ ಆರಂಭಿಸಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ವಿಜಾಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಮಿನಿ ವಿಮಾನ ಯೋಜನೆಗಳ ಕುರಿತ ಕೇಂದ್ರ ಸರ್ಕಾರದ ಚಾಲನಾ ಸಮಿತಿ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಕೋರಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ಇದು.

ಅಂದಾಜು 250 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದ ನಂತರ, ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಂದ ಆಗಿತ್ತು. ರನ್‌ವೇ ನಿರ್ಮಿಸಲೂ ಸಾಧ್ಯವಾಗದಂತೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಇದು ಒಟ್ಟು 110 ಕೋಟಿ ರೂಪಾಯಿ ಮೊತ್ತದ ಯೋಜನೆ. ಇದನ್ನು ಸಹ ಎಂಎಆರ್‌ಜಿ ಸಂಸ್ಥೆ ವಹಿಸಿಕೊಂಡಿದೆ.ಗುಲ್ಬರ್ಗ ವಿಮಾನ ನಿಲ್ದಾಣ ಅಭಿವೃದ್ಧಿ ನಿಗಮದ (ಜಿಎಡಿಎಲ್) ಹೂಡಿಕೆದಾರರ ನಡುವೆ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ತಲೆದೋರಿದೆ ಎಂದು ಗೊತ್ತಾಗಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ.ಈ ವಿಮಾನ ನಿಲ್ದಾಣ ಕಾಮಗಾರಿ ವಿಳಂಬ ಆಗುತ್ತಿರುವುದು ಏಕೆ ಎಂಬ ಬಗ್ಗೆ ಚರ್ಚಿಸಲು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಅವರು ಇತ್ತೀಚೆಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಹೂಡಿಕೆದಾರರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದರು. ಭರವಸೆ ನೀಡಿದಷ್ಟು ಹಣವನ್ನು ಯೋಜನೆಯಲ್ಲಿ ಹೂಡಿಕೆ ಮಾಡಿಲ್ಲ ಎಂದು ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಹೊರಿಸಿದರು ಎಂದು ಗೊತ್ತಾಗಿದೆ.ಗುಲ್ಬರ್ಗ ವಿಮಾನ ನಿಲ್ದಾಣದ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಮಾಣಕ್ಕೆ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿಲ್ಲ. ರನ್‌ವೇ ನಿರ್ಮಿಸಲು ಉದ್ದೇಶಿಸಿರುವ ಸ್ಥಳದ ಸಮೀಪ ಕಾರ್ಖಾನೆಗಳ ಚಿಮಣಿಗಳು ದೊಡ್ಡ ಸಂಖ್ಯೆಯಲ್ಲಿ ಇವೆ ಎಂಬುದು ಅನುಮತಿ ನಿರಾಕರಣೆಗೆ ಕಾರಣ ಎಂದು ಗೊತ್ತಾಗಿದೆ. ಕೈಗಾರಿಕಾ ಪ್ರದೇಶದ ಪಕ್ಕದಲ್ಲಿ ದಿಬ್ಬ ಇದೆ. ಹೀಗಾಗಿ ರನ್‌ವೇ ದಿಕ್ಕನ್ನು ಬದಲಾಯಿಸಲೂ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.ರನ್‌ವೇ ದಿಕ್ಕು ಬದಲಾಯಿಸದೆ, ಚಿಮಣಿಗಳಿಂದ ಹೊರಬರುವ ಹೊಗೆ ವಿಮಾನಗಳಿಗೆ ತೊಂದರೆ ನೀಡದಂತೆ ಯೋಜನೆ ಮಾರ್ಪಾಡು ಮಾಡಲಾಗಿದೆ. ಆದರೆ ಇದಕ್ಕೆ ಸರ್ಕಾರ ಅಂತಿಮ ಒಪ್ಪಿಗೆ ನೀಡಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಲು ಖತ್ರಿ ನಿರಾಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.