ಸಮಸ್ಯೆ ಹಿಮ್ಮೇಳದಲ್ಲಿ ಚುನಾವಣೆಯ ಹಾಡು

7

ಸಮಸ್ಯೆ ಹಿಮ್ಮೇಳದಲ್ಲಿ ಚುನಾವಣೆಯ ಹಾಡು

Published:
Updated:
ಸಮಸ್ಯೆ ಹಿಮ್ಮೇಳದಲ್ಲಿ ಚುನಾವಣೆಯ ಹಾಡು

ಯಾದಗಿರಿ: ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಎರಡನೇ ಚುನಾವಣೆಗೆ ನಗರ ಸಜ್ಜಾಗಿದೆ. ಜಿಲ್ಲಾ ಕೇಂದ್ರವಾದ ನಂತರ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಪ್ರಥಮ ಚುನಾವಣೆಯೂ ಇದಾಗಿದೆ. ಪುರಸಭೆಯು ನಗರಸಭೆಯಾಯ್ತು. ತಾಲ್ಲೂಕು ಜಿಲ್ಲಾ ಕೇಂದ್ರವಾಯ್ತು. ಎಲ್ಲದರಲ್ಲೂ ಬಡ್ತಿಯಾದರೂ, ಸಮಸ್ಯೆಗಳ ವಿಷಯದಲ್ಲಿ ಮಾತ್ರ ಹಿಂಬಡ್ತಿಯೇ ಸಿಕ್ಕಿದೆ.ಇದು ಜಿಲ್ಲಾ ಕೇಂದ್ರವಾದ ನಗರದ ಸ್ಥಿತಿ. ಮೂರು ವರ್ಷ ಕಳೆದು ನಾಲ್ಕನೇ ವರ್ಷದಲ್ಲಿ ಪದಾರ್ಪಣೆ ಮಾಡಿರುವ ಜಿಲ್ಲಾ ಕೇಂದ್ರ, ಈಗಲೂ ಸುಧಾರಣೆಯ ವಿಷಯದಲ್ಲಿ ಮಾತ್ರ ಇನ್ನೂ ಸಾಕಷ್ಟು ಹಿಂದೆಯೇ ಉಳಿಯುವಂತಾಗಿದೆ. ಪ್ರಮುಖ ನಾಲ್ಕು ರಸ್ತೆಗಳ ಡಾಂಬರೀಕರಣ ಬಿಟ್ಟರೆ ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ.

ನಗರದ ಯಾವ ಬಡಾವಣೆಯ ರಸ್ತೆಯೂ ತೆಗ್ಗುಗಳಿಂದ ಮುಕ್ತವಾಗಿಲ್ಲ.ಅದರಲ್ಲೂ ನಗರದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿಯೂ ಸುಧಾರಿಸಿಲ್ಲ. ನಗರದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆ, ಕನಕ ವೃತ್ತದಿಂದ ಪದವಿ ಕಾಲೇಜಿನವರೆಗಿನ ರಸ್ತೆ, ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಜಿಲ್ಲಾ ಆಸ್ಪತ್ರೆ ಮೂಲಕ ಹೈದರಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಹೀಗೆ ಹತ್ತು ಹಲವು ರಸ್ತೆಗಳಲ್ಲಿ ಓಡಾಡುವುದು ಪಾದಚಾರಿಗಳಿಗೂ ಕಷ್ಟಕರವೇ.ಯಾದಗಿರಿ ನಗರವನ್ನು ಪ್ರತಿನಿಧಿಸುವ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಅವರು, ರಸ್ತೆಗಳ ಸ್ಥಿತಿ ಅರಿಯಲು ಅಟೋ ರಿಕ್ಷಾದಲ್ಲಿ ತಿರುಗಾಡಿ ಎರಡು ವರ್ಷಗಳು ಕಳೆದರೂ, ರಸ್ತೆಗಳ ಸ್ಥಿತಿಯಲ್ಲಿ ಮಾತ್ರ ಬದಲಾವಣೆ ಆಗಿಲ್ಲ. ವಿಧಾನಸಭೆ ಅಧಿವೇಶನಗಳಲ್ಲಿ ಶಾಸಕರು ಪ್ರಸ್ತಾಪಿಸಿದ ರಸ್ತೆಯ ವಿಷಯಗಳಿಗೆ ಭರವಸೆಗಳ ಉತ್ತರ ಸಿಕ್ಕಿದೆಯೇ ಹೊರತು, ರಸ್ತೆಯ ಹೊಂಡಗಳಿಗೆ ಮಣ್ಣು ಹಾಕುವ ಕೆಲಸವೂ ನಡೆದಿಲ್ಲ ಎಂಬುದು ನಗರದ ವಾಸಿಗಳ ಆರೋಪ.ಮೂಗು ಮುಚ್ಚುವ ಸ್ಥಿತಿ:

ಇನ್ನು ನಗರದ ಯಾವುದೇ ಬಡಾವಣೆಗಳಲ್ಲಿ ತಿರುಗಾಡಿಬೇಕಾದರೂ, ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯ. ಎಲ್ಲೆಡೆಯೂ ತೆರೆದ ಚರಂಡಿಯಿಂದಾಗಿ ದುರ್ವಾಸನೆ ಹರಡಿದೆ. ಸೊಳ್ಳೆಗಳ ಕಾಟವಂತೂ ಇನ್ನೂ ವಿಪರೀತವಾಗಿದೆ.

ರಾತ್ರಿ ಹೊತ್ತು ಒಂದೆಡೆ ಅಸಹನೀಯ ದುರ್ವಾಸನೆಯಾದರೆ, ಇನ್ನೊಂದೆಡೆ ಕಿವಿಗೆ ಸಂಗೀತ ಹೇಳುವ ಸೊಳ್ಳೆಗಳ ಕಾಟ. ಅದರಲ್ಲಿಯೂ ವಿದ್ಯುತ್ ಕೈಕೊಟ್ಟರಂತೂ, ರಾತ್ರಿಯ ನಿದ್ದೆ ಅಷ್ಟಕ್ಕಷ್ಟೇ.ಎಲ್ಲ ಬಡಾವಣೆಗಳಲ್ಲಿ ತೆರೆದ ಚರಂಡಿಗಳೇ ಇದ್ದು, ಎಲ್ಲದರಲ್ಲೂ ಹೂಳು ತುಂಬಿಕೊಂಡಿದೆ. ಕೆಸರು ನೀರು ನಿಂತಲ್ಲೇ ನಿಂತಿರುವುದರಿಂದ ಇಷ್ಟೆಲ್ಲ ಸಮಸ್ಯೆಗಳು ಉದ್ಭವವಾಗಿವೆ ಎನ್ನುವುದು ವೀರ ಕನ್ನಡಿಗ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಅವರ ದೂರು.ಇತ್ತೀಚೆಗೆ ನಗರಸಭೆಯ ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿಗಳಿಗೂ ಈ ವಿಷಯ ಗಮನಕ್ಕೆ ಬಂದಿದೆ. ಅಧಿಕಾರ ವಹಿಸಿಕೊಳ್ಳುತ್ತಲೇ ನಗರಸಭೆ ಸಿಬ್ಬಂದಿಗೆ ಚಾಟಿ ಏಟು ಬೀಸಿರುವ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಾಕೀತನ್ನೂ ಮಾಡಿದ್ದಾರೆ.ತೆರೆದ ಚರಂಡಿಯ ಸಮಸ್ಯೆಯಿಂದ ಮುಕ್ತಿ ದೊರೆಯಲು ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದರೂ, ಇದುವರೆಗೆ ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ ಎಂದು ನಗರದ ಜನರು ಹೇಳುತ್ತಿದ್ದಾರೆ.ಮತ್ತೊಮ್ಮೆ ಚುನಾವಣೆ:

ನಗರದಲ್ಲಿ ಸಮಸ್ಯೆಗಳ ಸುರಿಮಳೆಯೇ ಇದೆ. ಇದರ ಮಧ್ಯೆಯೇ ಮತ್ತೊಮ್ಮೆ ನಗರಸಭೆಯ ಚುನಾವಣೆ ಎದುರಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಸಮಸ್ಯೆಗಳೇ ಚುನಾವಣೆಯ ಪ್ರಮುಖ ವಿಷಯಗಳು. ಒಳಚರಂಡಿ ಯೋಜನೆ, ನಿರಂತರ ನೀರು, ರಸ್ತೆಗಳ ಅಭಿವೃದ್ಧಿ, ಮೂಲಸೌಕರ್ಯಗಳ ಭರವಸೆಗಳ ಮಹಾಪೂರವೇ ಮತ್ತೆ ಹರಿಯಲಿದೆ.ಇಷ್ಟೊಂದು ಸಮಸ್ಯೆಗಳ ಮಧ್ಯೆಯೇ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರು ಮಾತ್ರ ಅಭ್ಯರ್ಥಿಗಳ ಭರವಸೆಗಳನ್ನು ನಂಬಿ ಮತ ಹಾಕಲೇಬೇಕು. ಆದರೆ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿವೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುವುದು ಮಾತ್ರ ನಿಶ್ಚಿತ ಎನ್ನುತ್ತಾರೆ ನಗರದ ನಿವಾಸಿ ವಿಶ್ವನಾಥರಡ್ಡಿ.ಕಳೆದ ಬಾರಿ ನಡೆದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿತು. ಮೊದಲು 30 ತಿಂಗಳು ನಿರಾಂತಕ ಆಡಳಿತ ನಡೆಯಿತು. ನಂತರದ 15 ತಿಂಗಳು ಮುಗಿಯುವಷ್ಟರಲ್ಲಿಯೇ ಅಸಮಾಧಾನದ ಹೊಗೆ ಆರಂಭವಾಯಿತು. ಅಧ್ಯಕ್ಷರ ಪದಚ್ಯುತಿಯೂ ಆಯಿತು. ನಂತರ ಕಾಂಗ್ರೆಸ್‌ನ ಲಲಿತಾ ಅನಪೂರ, ನಗರಸಭೆ ಅಧ್ಯಕ್ಷೆಯಾಗಿ ಅಧಿಕಾರಿ ವಹಿಸಿಕೊಂಡರು. ಒಂದು ವರ್ಷ ಪೂರೈಸುವಷ್ಟರಲ್ಲಿಯೇ ಚುನಾವಣೆ ಎದುರಾಗಿದೆ.ಹೀಗಾಗಿ ಯಾವ ಪಕ್ಷಕ್ಕೆ ಮತ ನೀಡಬೇಕು ಎನ್ನುವುದಕ್ಕಿಂತ ಯಾರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವ ಲೆಕ್ಕಾಚಾರವೇ ಈ ಚುನಾವಣೆಯ ಪ್ರಮುಖ ವಿಷಯ ಎನ್ನುವುದು ಮತದಾರರ ಮನದಾಳದ ಮಾತು.ಸಮಸ್ಯೆಗಳ ಹಿಮ್ಮೇಳದಲ್ಲಿ ಮತ್ತೊಂದು ಚುನಾವಣೆಯ ಹಾಡು ಹಾಡುವ ಕಾಲ ಬಂದಿದೆ. ಯಾವ ರಾಗಕ್ಕೆ ಜನರ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಮತಗಳ ಎಣಿಕೆ ನಂತರವಷ್ಟೇ ಉತ್ತರ ಸಿಗಲಿದೆ ಎನ್ನುತ್ತಿದ್ದಾರೆ ಮತದಾರರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry