ಸಮಾಜಕ್ಕೆ ಮಾರ್ಗದರ್ಶನ ನೀಡಿ: ಪೇಜಾವರ ಶ್ರೀ

7

ಸಮಾಜಕ್ಕೆ ಮಾರ್ಗದರ್ಶನ ನೀಡಿ: ಪೇಜಾವರ ಶ್ರೀ

Published:
Updated:

ಹುಬ್ಬಳ್ಳಿ: ಕೀಳು ಅಭಿರುಚಿಯ ಆಚರಣೆ, ಸಂಪ್ರದಾಯಗಳನ್ನು ಪ್ರಚೋದಿಸಿ ಸಮಾಜವನ್ನು ದಾರಿ ತಪ್ಪಿಸುವ ಬದಲಾಗಿ ಉತ್ತಮ ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ನಡೆದ ಜಾಗೃತವಾಣಿ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಮತ್ತು ಪತ್ರಕರ್ತ ಆರ್.ಟಿ. ಮಜ್ಜಗಿ ಅವರ ಆತ್ಮಚರಿತ್ರೆ `ದೊಡ್ಡವರ ಸಹವಾಸದಲ್ಲಿ ಪತ್ರಕರ್ತರ ಪಯಣ' ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಾಧ್ಯಮಗಳು ಸಮಾಜದ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಸೂಚಿಸುವ ವೇದಿಕೆ ಆಗಬೇಕು. ಅನ್ಯಾಯದ ವಿರುದ್ಧದ ದನಿಯಾಗಬೇಕು. ನೊಂದವರು, ದುರ್ಬಲರ ರಕ್ಷಕನಾಗಿಯೂ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ತಮಿಳುನಾಡು, ಮಹಾರಾಷ್ಟ್ರದ ಜನರಲ್ಲಿರುವ ನಾಡು ಮತ್ತು ಭಾಷೆಯ ಬಗೆಗಿನ ಅಭಿಮಾನ ಕನ್ನಡಿಗರಲ್ಲಿ ಇಲ್ಲ. ಸ್ವಾಭಿಮಾನದಿಂದ ಬಾಳಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ನುಡಿದರು.

ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ರಾಜಕೀಯ ವ್ಯವಸ್ಥೆ ಸ್ವಾರ್ಥ, ಭ್ರಷ್ಟಾಚಾರದಿಂದ ಕೂಡಿದೆ. ಇದನ್ನು ಹೋಗಲಾಡಿಸಿ, ಶಿಸ್ತುಬದ್ಧ ಆಡಳಿತ ಜಾರಿಗೊಳಿಸಲು ಸರ್ವಾಧಿಕಾರಿ ಅನಿವಾರ್ಯ ಎನಿಸುತ್ತದೆ. ಅದಕ್ಕಾಗಿ ಪ್ರಜಾಪ್ರಭುತ್ವವನ್ನು ಒಳಗೊಂಡ ಸರ್ವಾಧಿಕಾರಿ ಬೇಕಾಗಿದೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಮಠಾಧೀಶರು ತಮ್ಮ ಪ್ರತಿಷ್ಠೆ ಬಿಟ್ಟು ಸಮಾಜದ ಒಗ್ಗಟ್ಟಿಗೆ ಶ್ರಮಿಸದಿದ್ದರೆ ಮುಂದಿನ ದಿನಗಳಲ್ಲಿ ಅವರ ಅಸ್ತಿತ್ವಕ್ಕೆ ಧಕ್ಕೆ ಆಗಲಿದೆ. ಸಮಸ್ಯೆ ಕೈಮೀರುವ ಮುನ್ನ ಭಿನ್ನ ಮರೆತು ಒಂದಾಗಬೇಕು. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಧಾನಸಭೆ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. 

ಕೆಪಿಎಸ್‌ಸಿ ಮಾಜಿ ಸದಸ್ಯ ರುದ್ರೇಗೌಡ ಆತ್ಮ ಚರಿತ್ರೆ ಬಿಡುಗಡೆ ಮಾಡಿದರು. ಮಹಾಪೌರ ಡಾ. ಪಾಂಡುರಂಗ ಪಾಟೀಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ, ಆರ್.ಟಿ. ಮಜ್ಜಗಿ ದಂಪತಿಯನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry