ಮಂಗಳವಾರ, ನವೆಂಬರ್ 12, 2019
28 °C

`ಸಮಾಜದ ಅಂಕುಡೊಂಕು ಕುರಿತು ಬರೆಯಬೇಕು'

Published:
Updated:
`ಸಮಾಜದ ಅಂಕುಡೊಂಕು ಕುರಿತು ಬರೆಯಬೇಕು'

ಬೆಂಗಳೂರು: `ಇಂದಿನ ಬರಹಗಾರರು ಸಮಾಜದ ದುಃಸ್ಥಿತಿ ಮತ್ತು ಅಂಕುಡೊಂಕುಗಳನ್ನು ತಿದ್ದುವಂತಹ ಕವನ, ಕವಿತೆಗಳನ್ನು ಬರೆಯಬೇಕು' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.`ನ್ಯೂ ಬೆಂಗಳೂರು ಪ್ರಿಂಟ್ ಮೀಡಿಯಾ ಸೆಂಟರ್' ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡರ `ನಾಡಾಡಿ' ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.`ಈ ಕವನ ಸಂಕಲನದಲ್ಲಿ ಸಾಮಾನ್ಯನ ಬಗ್ಗೆ ಬರೆಯುತ್ತ ಹೋಗಿದ್ದಾರೆ. ಸ್ವಾರ್ಥಿ ಮಾನವ ಸೃಷ್ಟಿಯನ್ನು ತನ್ನದೇ ಎಂಬಂತೆ ಬಳಸಿಕೊಳ್ಳುತ್ತಿದ್ದಾನೆ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ, ಮನುಷ್ಯ ತನ್ನ ಸ್ವಾರ್ಥದಿಂದ ನನ್ನದು ಎಂಬ ಭಾವನೆಯಿಂದ ಇಡೀ ಸಮಾಜವನ್ನು ಹಾಳು ಮಾಡುತ್ತಿದ್ದಾನೆ. ಇಂದಿನ ಸಮಾಜ ಕೆಟ್ಟುಹೋಗಿದೆ. ಇದರ ಕುರಿತು ಇಂದಿನ ಬರಹಗಾರರು ಬರೆಯಬೇಕು' ಎಂದು ಹೇಳಿದರು.`ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಿತಿ ಅತಿ ಹೀನಾಯವಾಗಿದೆ. ನಾರಿಯರನ್ನು ಪೂಜಿಸುತ್ತಿದ್ದ ಸಮಾಜದಲ್ಲಿ ಅವರ ಕಥೆಯನ್ನು ಕೇಳಿದರೆ ಕಣ್ಣೀರು ಬರುತ್ತದೆ. ಹೆಣ್ಣುಮಕ್ಕಳು ತಮ್ಮ ಭಯದಿಂದ ಏನನ್ನೂ ಎದುರಿಸಲಾಗದೆ ಸೋತು ಹೋಗುತ್ತಿದ್ದಾರೆ' ಎಂದು ವಿಷಾದಿಸಿದರು.ಕವಿ ದೊಡ್ಡರಂಗೇಗೌಡರು ಮಾತನಾಡಿ, `ನನ್ನ ಮೊದಲ ಕವನ ಸಂಕಲನ `ಜಗಲಿ ಹತ್ತಿ ಇಳಿದು' 1969 ರಲ್ಲಿ  ಬಿಡುಗಡೆಯಾಯಿತು. ಮನೆಯಲ್ಲಿ ವಿಪರೀತ ಬಡತನ ಹೀಗಾಗಿ ಪುಸ್ತಕದ ಮಾರಾಟಕ್ಕೆ ಅಂಗಡಿ ಅಂಗಡಿಗೆ ಹೋಗಿ ಅಲೆದಾಡಿದೆ. ಆದರೆ, ಆಗ ದೊಡ್ಡರಂಗೇಗೌಡ ಯಾರು ಅಂತ ಗೊತ್ತಿರಲಿಲ್ಲ. ಇನ್ನೂ ಕಣ್ತೆರೆಯುತ್ತಿದ್ದೆ ನನ್ನ ಕೃತಿಯ ಬೆಲೆ ರೂ 2 ಇತ್ತು' ಎಂದು ನೆನಪಿಸಿಕೊಂಡರು.`ಆಗ ಎಚ್.ಎಸ್.ದೊರೆಸ್ವಾಮಿ ಅವರು ಮನೆಗೆ ಕರೆಸಿಕೊಂಡು  ರೂ 10 ನೀಡಿ 5 ಪುಸ್ತಕಗಳನ್ನು ಕೊಂಡು ನನಗೆ ಪ್ರೋತ್ಸಾಹವನ್ನು ನೀಡಿದ್ದರು. ಅಂದು ಅವರು ನೀಡಿದ ಪ್ರೋತ್ಸಾಹವೇ ನನಗೆ ಮುಂದೆ ಬೆಳೆಯಲು ಸ್ಫೂರ್ತಿಯಾಯಿತು' ಎಂದು ಸ್ಮರಿಸಿದರು.`ಉತ್ತಮ ಬರಹಗಾರನಾಗಲು ಅನೇಕ ಪುಸ್ತಕಗಳ ಅಧ್ಯಯನ ನಡೆಸಿರಬೇಕು. ಮಾತಿನಂತೆ ಕವನಗಳು ಕೂಡ ಸಹಜವಾಗಿ ಮೂಡಿ ಬರಬೇಕು. ಸೂರ್ಯ ಉದಯವಾಗುವಂತೆ, ಕಂದನ ನಗು ಅರಳುವಷ್ಟು ಸಹಜತೆಯಿಂದ ಕೂಡಿರಬೇಕು' ಎಂದರು.`ನಾಡಾಡಿ' ಕವನ ಸಂಕಲನದಲ್ಲಿ ಸಾಮಾನ್ಯನ ಬದುಕು ಬವಣೆಯ ಚಿತ್ರಣವಿದೆ. ಇದರಲ್ಲಿ ಸಮಾಜದ ಅಂಕುಡೊಂಕು ಮತ್ತು ಓರೆಕೋರೆಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ' ಎಂದು ಹೇಳಿದರು.`ಕವಿ ತನ್ನ ಅಂತರಂಗದ ಜತೆಗೆ ನಡೆಸುವ ಸರಸ ಸಲ್ಲಾಪಗಳೇ ಕವಿತೆಯಾಗುತ್ತವೆ. `ನಾಡಾಡಿ' ನನಗೆ ನಾನೇ ಕೇಳಿಕೊಂಡ ಪ್ರಶ್ನೆಗಳು ಮತ್ತು ನನ್ನ ಅಂತರಂಗದ ಜತೆಗೆ ನಾನೇ ಮಾತನಾಡಿದ ಅನೇಕ ಮಾತುಗಳು ಇಲ್ಲಿ ಕವನಗಳಾಗಿ ಮೂಡಿಬಂದಿವೆ' ಎಂದರು.

ಪ್ರತಿಕ್ರಿಯಿಸಿ (+)