ಭಾನುವಾರ, ಆಗಸ್ಟ್ 18, 2019
22 °C

`ಸಮಾಜದ ಉತ್ತಮ ಭವಿಷ್ಯಕ್ಕಾಗಿ ಕ್ಷೀರಭಾಗ್ಯ'

Published:
Updated:

ರಾಮನಗರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ, ಆರೋಗ್ಯ ಮುಖ್ಯ. ಮಕ್ಕಳ ಆರೋಗ್ಯ ಕಾಪಾಡುವುದರಿಂದ ಮುಂದಿನ ಭವಿಷ್ಯ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೌಷ್ಟಿಕಾಂಶದ ಆಹಾರ ನೀಡುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಗುರುವಾರ ನಗರದ ಬಾಲಕಿಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ `ಕ್ಷೀರ ಭಾಗ್ಯ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.1 ರಿಂದ 10ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಕೆನೆ ಭರಿತ ಪುಡಿಯಿಂದ ತಯಾರಿಸಿದ ಹಾಲನ್ನು ವಿತರಿಸಲಾಗುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಹಾಲನ್ನು ಶಿಕ್ಷಕರು ಪರಿಶೀಲಿಸಿ ಮನದಟ್ಟು ಮಾಡಿಕೊಂಡ ನಂತರ ವಾರದಲ್ಲಿ ಮೂರು ದಿನ ಪ್ರತಿ ಮಕ್ಕಳಿಗೆ 18 ಗ್ರಾಂ ಹಾಲಿನ ಪುಡಿ ಬಳಸಿ 150 ಮಿ.ಲೀ ಹಾಲನ್ನು ಪ್ರಾರ್ಥನೆಗೂ ಮುನ್ನ ನೀಡಲಾಗುವುದು' ಎಂದರು.ಜಿಲ್ಲೆಯ 1533 ಶಾಲೆಗಳ 1,01,758 ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದರು.ಕೆಎಂಎಫ್‌ನ ಉಪವ್ಯವಸ್ಥಾಪಕ ಡಾ.ಎನ್. ಶಿವಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮುನಿಕೆಂಪೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಸ್.ಎಂ.ಚಂದ್ರಾ, ಡಯಟ್ ಪ್ರಾಂಶುಪಾಲರಾದ ಇಂದ್ರಾಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ರಾಜು, ಶಿವರಾಮೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರೇಗೌಡ, ವಿಷಯ ಪರಿವೀಕ್ಷಕಿ ರೇಖಾ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸಿ.ವಿ.ಜಯಣ್ಣ, ಶಿಕ್ಷಕಿ ಅನ್ನಪೂರ್ಣ, ಭಾರತ ಸೇವಾದಳದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.ಬಾರದ ಹಾಲು

ಮಾಗಡಿ:
ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರಯೋಜನೆ ಬುಧವಾರ ತಾಲ್ಲೂಕಿನಲ್ಲಿ ಜಾರಿಗೆ ಬರಲಿಲ್ಲ. ಬುಧವಾರವೇ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿ ಗುರುವಾರ ಹಾಲು ಕೊಡಲಾಗುವುದು. ಮಕ್ಕಳು ಲೋಟ ತೆಗೆದುಕೊಂಡು ಬರಬೇಕು ಎಂದು ತಿಳಿಸಲಾಗಿತ್ತು. ಆದರೆ ಸಂಜೆಯವರೆಗೂ ಮಕ್ಕಳು ಹಾಲಿಗಾಗಿ ಕಾದು ಕಾದು ನಿರಾಸೆಗೊಂಡರು.`ತಿಂಗಳಿಗೆ 8.5 ಟನ್ ಹಾಲಿನ ಪುಡಿ ಅವಶ್ಯ'

ಕನಕಪುರ:
`ಶಾಲಾ ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರ ನೀಡಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ' ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾ ಅಧಿಕಾರಿ ಜೆ.ಜಿ.ನಾಯಕ್ ಹೇಳಿದರು.ಪಟ್ಟಣದ ಬಾಲಕಿಯರ  ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ ಹಾಲನ್ನು ವಿತರಿಸಲಾಗುವುದು' ಎಂದರು.ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಎಲ್.ಎನ್.ವಿ.ರೆಡ್ಡಿ ಮಾತನಾಡಿ, `ಈ ಕಾರ್ಯಕ್ರಮಕ್ಕೆ ತಾಲ್ಲೂಕಿಗೆ ಒಂದು ತಿಂಗಳಿಗೆ 8.5 ಟನ್ ಹಾಲಿನ ಪುಡಿ ಅಗತ್ಯವಿದೆ. ಕೆ.ಎಂ.ಎಫ್ ಇದನ್ನು ನೇರವಾಗಿ ಆಯಾ ಶಾಲೆಗಳಿಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದೆ' ಎಂದರು. `ಹಾಲು ತಯಾರಿಸಲು ಅಡುಗೆ ಸಿಬ್ಬಂದಿಗೆ ಹೆಚ್ಚುವರಿಯಾಗಿ ಡೈರಿಯಿಂದ ತಿಂಗಳಿಗೆ 100 ರೂ ಮಾಸಿಕ ವೇತನ ನೀಡಲಾಗುತ್ತಿದೆ' ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಶಿವಕುಮಾರ್ ಮಾತನಾಡಿ, `ಹಾಲನ್ನು ತಯಾರಿಸಲು ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ನೀಡಲಾಗುವುದು. ಒಂದು ಮಗುವಿಗೆ 18 ಗ್ರಾಂ ಹಾಲಿನ ಪೌಡರ್, ರುಚಿಗೆ ತಕ್ಕಂತೆ ಸಕ್ಕರೆ ಮತ್ತು ಶುದ್ಧ ನೀರು ಸೇರಿದಂತೆ 150 ಎಂ.ಎಲ್. ಹಾಲನ್ನು ವಾರದಲ್ಲಿ ಮೂರು ದಿನ ನೀಡಲಾಗುವುದು' ಎಂದರು.

Post Comments (+)