ಮಂಗಳವಾರ, ಜುಲೈ 27, 2021
27 °C
ಜನರತ್ತ ಜಾನಪದ ವಿಶ್ವವಿದ್ಯಾಲಯ ಜಾಗೃತಿ ಕಾರ್ಯಕ್ರಮ

`ಸಮಾಜದ ಉಳಿವಿಗೆ ಜಾನಪದ ಉಸಿರು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ನಾಡಿನ ನೆಲ, ಭಾಷೆ, ಸಂಸ್ಕೃತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಾಗರಿಕ ಸಮಾಜದ ಎಲ್ಲ ಆಯಾಮಗಳ ಜತೆ ಅದರ ಉಳಿವಿಗೆ ಜಾನಪದ ಉಸಿರಾಗಿದೆ' ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು.ನಗರದ ಜಿ.ಎಚ್.ಕಾಲೇಜು ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ `ಜನರತ್ತ ಜಾನಪದ ವಿಶ್ವವಿದ್ಯಾಲಯ' ಎಂಬ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಳಸಿ, ಉಳಿಸಿ ಬೆಳೆಸುವ ಹೊಣೆ ಯುವ ಜನಾಂಗದ ಮೇಲಿದೆ. ಈ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ಕೂಡ ಹಲವು ತರಬೇತಿ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದರು.ವಿದ್ಯಾರ್ಥಿಗಳು ಎಷ್ಟೇ ಆಧುನಿಕತೆ ಮೈಗೂಡಿಸಿಕೊಂಡರೂ ಭವಿಷ್ಯದ ಸಾಧನೆಗೆ ಪರಿಸರದ ಕಲೆ, ಸಂಸ್ಕೃತಿ ಅಗತ್ಯವಾಗಿದೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗಳು ನೆಲಮೂಲ ಸಂಸ್ಕೃತಿಯನ್ನು ಮರೆಬಾರದು ಎಂದು ಹೇಳಿದರು.ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಕೋರ್ಸ್ ಸಂಯೋಜನಾಧಿಕಾರಿ ಡಾ.ಶ್ರೀಶೈಲ ಹುದ್ದಾರ ಮಾತನಾಡಿ, ನಾಡಿನ ಕಲೆಗಳ ವಾರಸುದಾರರು ನಾವಾಗಬೇಕು. ಹತ್ತಾರು ಕಲೆಗಳು, ಕಲಾವಿದರು ನಿರ್ಲಕ್ಷ್ಯದಿಂದ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜಾನಪದ ಕಲೆಗಳ ಮಹತ್ವ ಅರಿತರೆ ನಮ್ಮ ಜೀವನದ ಬಹು ಮುಖ್ಯ ಭಾಗವನ್ನು ಆನಂದದಿಂದ ಕಳೆಯಲು ಸಾಧ್ಯ ಎಂದರು.ಜಾನಪದ ವಿದ್ವಾಂಸ ಡಾ.ರಾಮು ಮೂಲಗಿ ಮಾತನಾಡಿ, ಲಾವಣಿಗಳ ಹಾಡಿನ ಮಹತ್ವದ ಕಲೆಯ ಕುರಿತು ಪರಿಚಯ ಮಾಡಿಕೊಟ್ಟರು.ಪ್ರಾಚಾರ್ಯ ಡಾ.ಬಿ.ಸಿ.ಬನ್ನೂರ ಮಾತನಾಡಿ, ಗ್ರಾಮೀಣ ಕಲೆ ಸಂಪ್ರದಾಯ ಜಾನಪದ ವೈದ್ಯ ಪದ್ಧತಿಗಳನ್ನು ಇಂದು ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಬೇಕು. ಅದಕ್ಕೆ ಪೂರಕವಾಗಿ ಜಾನಪದ ವಿವಿ ಜನರನ್ನು ಸಜ್ಜುಗೊಳಿಸಬೇಕಿದೆ ಎಂದು ಸಲಹೆ ಮಾಡಿದರು.ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ ಮತ್ತು ವಿರೇಶ ಬಡಿಗೇರ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಸಿ.ಮಲ್ಲಣ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಕೆಂಚವೀರಪ್ಪ ನಿರೂಪಿಸಿದರು.ಕೊನೆಯಲ್ಲಿ ಜಾನಪದ ಕಲಾವಿದರಾದ ವಿರೇಶ ಬಡಿಗೇರ, ಡಾ.ರಾಮು ಮೂಲಗಿ ಮತ್ತು ಬಸವರಾಜ ಶಿಗ್ಗಾವಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಎಸ್‌ಜೆಎಂ ಕಾಲೇಜಿನಲ್ಲಿ: ಹಾವೇರಿಯ ಎಸ್‌ಜೆಎಂ ಪ.ಪೂ.ಕಾಲೇಜು ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸೋಮವಾರ ನಗರದ ಹೊಸಮಠದ ಕಾಲೇಜಿನಲ್ಲಿ `ಜನರತ್ತ ಜಾನಪದ ವಿಶ್ವವಿದ್ಯಾಯಲಯ' ಎಂಬ ಜಾಗೃತಿ ಕಾರ್ಯಕ್ರಮ ನಡೆಯಿತು.ರಾಷ್ಟ್ರ ಪ್ರಶಸ್ತಿ ವಿಜೇತ ಡಾ.ರಾಮು ಮೂಳಗಿ ಮಾತನಾಡಿ, ಜನಪದ ಕಲೆಗಳು, ಸಾಹಿತ್ಯದೊಂದಿಗೆ ಇಂದಿನ ಸಂಸ್ಕೃತಿಗೆ ಹೋಲಿಕೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಜಾನಪದ ವಿಶ್ವವಿದ್ಯಾಲಯದ ಮಹತ್ವ ತಿಳಿಸಿದರು.ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಮಾತನಾಡಿ, ಜಾನಪದ ವಿಶ್ವವಿದ್ಯಾಲಯದ ಹುಟ್ಟು, ಉದ್ದೇಶ, ಪ್ರಗತಿ, ಮುಂದಿನ ಧ್ಯೇಯೋದ್ದೇಶಗಳ ಜೊತೆಗೆ ಅಧ್ಯಯನ ವಿಭಾಗಗಳ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್.ಬೇವಿನಮರದ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಪರಿವರ್ತನೆ ಹಾಗೂ ಪರಂಪರೆಯ ಬದಲಾವಣೆಗೆ ವಿದ್ಯಾರ್ಥಿಗಳು ಕಂಕಣ ಬದ್ಧರಾಗಬೇಕೆಂದು ಕಿವಿಮಾತು ಹೇಳಿದರು.ಸಮಾರಂಭದಲ್ಲಿ ವಿ.ಎನ್.ಆಲದಕಟ್ಟಿ, ಕಾಲೇಜಿನ ಉಪನ್ಯಾಸಕ ವರ್ಗ, ಹಾಗೂ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್.ಬಿ.ಸಂಗಾಪುರ ಸ್ವಾಗತಿಸಿದರು. ಡಾ.ಎಂ.ಆರ್.ಚವ್ಹಾಣ ನಿರೂಪಿಸಿ, ವಂದಿಸಿದರು.

ಕೊನೆಯಲ್ಲಿ ಜನಾಪದ ಕಲಾವಿದರಾದ ಡಾ.ರಾಮು ಮೂಳಗಿ ತಂಡದವರಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.