ಸಮಾಜದ ಒಳಿತಿಗೆ ಮನೋ ಆರೋಗ್ಯ ಮುಖ್ಯ

7

ಸಮಾಜದ ಒಳಿತಿಗೆ ಮನೋ ಆರೋಗ್ಯ ಮುಖ್ಯ

Published:
Updated:

ಬೆಂಗಳೂರು: ಮನಸ್ಸಿನ ಆರೊಗ್ಯ ಚೆನ್ನಾಗಿದ್ದರೆ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡಬಹುದು ಎಂದು ಇಲ್ಲಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.‘ತರಳಬಾಳು ಹುಣ್ಣಿಮೆಯ ಆರನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಪರಿಪೂರ್ಣ ಆರೋಗ್ಯವಂತರ ಪ್ರಮಾಣ ಶೇಕಡಾ 25ರಷ್ಟಿದ್ದು, ಯಾವುದೇ ಸಮಸ್ಯೆಗೆ ಸ್ಪಂದಿಸದ ಇಂಥವರಿಂದ ಸಾಮಾಜಿಕ ಚಿಂತನೆ ಅಸಾಧ್ಯ.ತಾಳ್ಮೆ, ಮುಗುಳ್ನಗೆ ಹಾಗೂ ಸಾಂದರ್ಭಿಕ ಗಾಂಭೀರ್ಯ ಇದ್ದಾಗ, ಸಾಮಾಜಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದರು. ಎಲ್ಲ ಧರ್ಮ, ಗ್ರಂಥಗಳು ಒಂದೇ ಸಂದೇಶ ಸಾರುತ್ತವೆ, ಸಾರ್ವಜನಿಕರಿಗೆ ಅನನುಕೂಲ ಮಾಡುವ ಕಾನೂನಿನ ತಿದ್ದುಪಡಿಗೆ ಒಂದು ಪ್ರತ್ಯೇಕ ಇಲಾಖೆಯನ್ನೇ ರಚಿಸುವ ಅಗತ್ಯವಿದೆ. ಇಂದು ಸಾಕಷ್ಟು ಪದವೀಧರರಿದ್ದಾರೆ. ಅದರೊಂದಿಗೆ ವಿನಯ ಹಾಗೂ ಮಾನವೀಯತೆ ಇರಬೇಕು. ಎಲ್ಲಕ್ಕಿಂತ ಸಾಮಾನ್ಯ ಪ್ರಜ್ಞೆ ಇದ್ದಾಗ ಮಾತ್ರ ನಿಜವಾದ ಪದವೀಧರ ಎನಿಸಿಕೊಳ್ಳುತ್ತಾರೆ ಎಂದರು.ಚಿಂತಕ ಡಾ.ಗುರುರಾಜ ಕರಜಗಿ ಅವರು, ‘ಬಾಳಿಗೊಂದು ನಂಬಿಕೆ’ ವಿಚಾರವಾಗಿ ಮಾತನಾಡಿ, ಮನುಷ್ಯನ ಬದುಕಿಗೆ ನಂಬಿಕೆ ಮುಖ್ಯ. ತಮ್ಮ ಬಗೆಗೆ ಮೊದಲು ನಂಬಿಕೆ ಇರಬೇಕು, ಇದರಿಂದ ಆತ್ಮವಿಶ್ವಾಸ ಬಲಗೊಳ್ಳುತ್ತದೆ. ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇರಬೇಕು. ನಾವು ನಮಗೋಸ್ಕರ ಬದುಕುವುದನ್ನು ಬಿಡಬೇಕು. ದೇವರು ಇದ್ದಾನೆ ಎಂಬ ನಂಬಿಕೆ ಇದ್ದರೆ, ಎಂತಹ ಮಹತ್ಕಾರ್ಯವನ್ನೂ ಸಾಧಿಸಬಹುದು ಎಂದು ನುಡಿದರು.ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ತರುವ  ಕಾರ್ಯ ನಡೆಯುತ್ತಿದೆ. ಆದರೂ, ಕೆಲವು ಶಕ್ತಿಗಳು ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿವೆ. ಜಾತಿ, ಮತದಂತಹ ಅಡ್ಡಗೋಡೆಗಳು ನಂತರದ ಕಾಲದಲ್ಲಿ ಹುಟ್ಟಿಕೊಂಡಿವೆ. ಹುಟ್ಟುವಾಗ ಯಾವುದೇ ಜಾತಿ, ಮತ ಇರುವುದಿಲ್ಲ, ಆಚರಣೆಗಳಿಂದ ಧರ್ಮ, ಪಂಥ ಬೆಳೆಯುತ್ತದೆ ಎಂದರು. ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಸಚಿವ ಜಗದೀಶ ಶೆಟ್ಟರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry