ಮಂಗಳವಾರ, ಮೇ 18, 2021
30 °C
ಸಮ್ಮೇಳನಾಧ್ಯಕ್ಷ ಕುಂಚೂರು ಬಾರಿಕರ ಸದಾಶಿವಪ್ಪ ಸಂದರ್ಶನ

ಸಮಾಜದ ಡೊಂಕು ತಿದ್ದುವ ಸಾಹಿತ್ಯ ಅಗತ್ಯ

ಪ್ರಜಾವಾಣಿ ವಾರ್ತೆ / ಎಂ.ಮಹೇಶ Updated:

ಅಕ್ಷರ ಗಾತ್ರ : | |

ಸಮಾಜದ ಡೊಂಕು ತಿದ್ದುವ ಸಾಹಿತ್ಯ ಅಗತ್ಯ

ದಾವಣಗೆರೆ: ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಹಾಗೂ ಲೋಪ-ದೋಷ ಸರಿಪಡಿಸುವ ಸಾಹಿತ್ಯ ರಚನೆ ಇಂದಿನ ಅಗತ್ಯ ಎಂದು ಹಿರಿಯ ಸಾಹಿತಿ ಕುಂ.ಬಾ.ಸದಾಶಿವಪ್ಪ ಪ್ರತಿಪಾದಿಸಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರದಿಂದ ಆರಂಭವಾಗಲಿರುವ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, `ಪ್ರಜಾವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.ಪ್ರಸ್ತುತ ಕನ್ನಡದ ಸ್ಥಿತಿ ಹೇಗಿದೆ?

ಒಳ್ಳೆಯ ಸ್ಥಿತಿ ಇದೆ. ಅನ್ಯಭಾಷೆಗಳ ಪ್ರಭಾವದ ನಡುವೆಯೂ ಕನ್ನಡಕ್ಕೆ ಧಕ್ಕೆಯಾಗಿಲ್ಲ. ಕನ್ನಡಿಗರಿಗೆ ನಿಜವಾಗಿಯೂ ಅಭಿಮಾನವಿದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಅರ್ಧ ಜನರಿಗೆ ಕನ್ನಡದ ಬಗ್ಗೆ ಅಭಿಮಾನವಿರುವುದು ವ್ಯಕ್ತವಾಗುತ್ತಿಲ್ಲ.ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ನಿಮ್ಮ ಅಭಿಪ್ರಾಯ?

ತಪ್ಪೇನಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಬೇರೆ ಶಾಲೆಗಳಿಗೆ ಕಳುಹಿಸಲಿ. ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗೆ ಕಳುಹಿಸಿದರೂ, ಸರ್ಕಾರಿ ಶಾಲೆಯ ಕಟ್ಟಡ ಇದ್ದೇ ಇರುತ್ತದೆಯಲ್ಲವೇ? ಮಕ್ಕಳ ಸಂಖ್ಯೆ ಹೆಚ್ಚಾದ ನಂತರ ಪುನರಾರಂಭಿಸಬಹುದು. ಒಟ್ಟಿನಲ್ಲಿ ಒಳ್ಳೆ ಶಿಕ್ಷಣ ಸಿಗಬೇಕಷ್ಟೆ.ಸಾಹಿತಿಗಳಿಗೆ ರಾಜಕೀಯದ ಗೊಡವೆ ಬೇಕೆ?

ಸಾಹಿತಿಗಳು ರಾಜಕೀಯಕ್ಕೆ ಹೋಗಬಾರದು ಹಾಗೂ `ರಾಜಕೀಯ' ಮಾಡಬಾರದು; ಉಪಯುಕ್ತ ಸಲಹೆ ಕೊಡಬೇಕಷ್ಟೆ. ಮಹಾತ್ಮ ಗಾಂಧಿ ಕಾಲದಲ್ಲಿಯೂ ಸಾಹಿತಿಗಳು ರಾಜಕಾರಣಿಗಳಿಗೆ ಸಲಹೆ ಕೊಡುತ್ತಿದ್ದರು. ರಾಜಕೀಯದಲ್ಲಿರುವವರು ಅಭಿಶಕ್ತ ದೊರೆಗಳು; ಸಾಹಿತಿಗಳು ಅನಭಿಶಕ್ತ ದೊರೆಗಳು ಎಂದು ಕೀಟ್ಸ್ ಹೇಳಿದ್ದಾನೆ. ಸಾಹಿತಿಗಳು ಅನಭಿಶಕ್ತ ದೊರೆಗಳಾಗಿಯೇ ಉಳಿಯಬೇಕು. ರಾಜರಿದ್ದಾಗ ಗುರುಗಳು ಸಲಹೆ ನೀಡುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಸಾಹಿತಿಗಳು ಆಡಳಿತ ವ್ಯವಸ್ಥೆಗೆ ಮಾರ್ಗದರ್ಶನ ಮಾಡಬೇಕು.ಎಂತಹ ಸಾಹಿತ್ಯ ಇಂದಿನ ಅಗತ್ಯ?

ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ, ಲೋಪ ದೋಷಗಳನ್ನು ತಿದ್ದುವ ಸಾಹಿತ್ಯ ಇಂದಿನ ಅಗತ್ಯ. ಜಾತೀಯತೆ, ಅಸಮಾನತೆ, ಬಡವ-ಬಲ್ಲಿದನೆಂಬ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ, ಎಲ್ಲರ ಆತ್ಮಗೌರವ ಕಾಪಾಡುವ ನಿಲುವಿನಲ್ಲಿ ಸಾಹಿತ್ಯ ರಚನೆಯಾಗಬೇಕು.ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಏನೆನ್ನುತ್ತೀರಿ?

ಇಂದು ಸಮಾಜದಲ್ಲಿ ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿದೆ. ಇದಕ್ಕೆ ನೈತಿಕ ಮೌಲ್ಯ ಕುಸಿದಿರುವುದೇ ಕಾರಣ. ಹೀಗಾಗಿ, ಶಾಲೆಗಳಲ್ಲಿ ನೈತಿಕ ಮೌಲ್ಯ ಹೆಚ್ಚಿಸುವ ವ್ಯವಸ್ಥೆಯಲ್ಲಿ ಶಿಕ್ಷಣ ನೀಡಬೇಕು. ಮಹಾಭಾರತ, ರಾಮಾಯಣ ಮೊದಲಾದ ಧರ್ಮಗ್ರಂಥಗಳ ಬಗ್ಗೆ ತಿಳಿಸಬೇಕು. ಇಂತಹ ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ನೈತಿಕ ಶಿಕ್ಷಣಕ್ಕೆ ಇಂತಿಷ್ಟು ಅಂಕ ಎಂದು ನಿಗದಿಪಡಿಸಬೇಕು.ಕನ್ನಡ ಶಿಕ್ಷಕರಿಗೆ ನಿಮ್ಮ ಸಲಹೆ ಏನು?

ಕನ್ನಡ ಭಾಷೆಯ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕನ್ನಡ ಬಗ್ಗೆ ಅಭಿಮಾನ ಹೆಚ್ಚಾಗುವಂತೆ ಮಾಡಬೇಕು. ಕನ್ನಡೇತರರನ್ನು ಕನ್ನಡದ ಒಳಕ್ಕೆ ಬರುವಂತೆ ಮಾಡಬೇಕು. ಸಂಬಳ ಬರುತ್ತಿದೆ ಎಂದು ಸೋಮಾರಿಗಳಾಗದೇ ಕನ್ನಡದ ಏಳಿಗೆಗೆ ಶ್ರಮಿಸಬೇಕು. ಇದೇ ವೇಳೆ, ಕನ್ನಡ ಶಿಕ್ಷಕರನ್ನು ಸಮಾಜ ತಾತ್ಸಾರ ಮನೋಭಾವದಿಂದ ನೋಡದೇ ಗೌರವ ನೀಡುವಂತಾಗಬೇಕು. ಸರ್ಕಾರ ಅವರಿಗೆ ಹೆಚ್ಚಿನ ತರಬೇತಿ ನೀಡಬೇಕು.ಇಂಗ್ಲಿಷ್ ಮೇಲುಗೈ ಆಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಿಗಬೇಕಿರುವುದೇನು?

ಎಂಬಿಬಿಎಸ್, ಎಂಜಿನಿಯರಿಂಗ್ ಮಾಡಲು ಇಂಗ್ಲಿಷ್ ಅನಿವಾರ್ಯ ಎಂಬ ಸ್ಥಿತಿ ಇದೆ. ಹೀಗಾಗಿ, ಉನ್ನತ ಶಿಕ್ಷಣದಲ್ಲಿ ಕನ್ನಡದಲ್ಲಿ ಓದಿದವರಿಗೆ ಇಂತಿಷ್ಟು ಸೀಟುಗಳೆಂದು ನಿಗದಿ ಮಾಡಬೇಕು. ಉದ್ಯೋಗದ ಅವಕಾಶಗಳು ಹೆಚ್ಚಾಗಬೇಕು. ಕನ್ನಡದಲ್ಲಿ ಕಲಿತರೆ ಎಲ್ಲ ಸೌಲಭ್ಯಗಳು ಸಿಗುತ್ತವೆ ಎಂಬ ವಾತಾವರಣ ನಿರ್ಮಾಣವಾಗಬೇಕು.ಶಾಲೆಗಳಲ್ಲಿ ಯಾವ ಮಾಧ್ಯಮವಿದ್ದರೆ ಒಳಿತು?

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ. ತಾಯಿ ಭಾಷೆಯಲ್ಲಿ ಪಾಠ ಹೇಳಿದರೆ, ಚೆನ್ನಾಗಿ ಅರ್ಥವಾಗುತ್ತದೆ. ಮನಶಾಸ್ತ್ರಜ್ಞರು ಸಹ ಇದನ್ನೇ ಹೇಳಿದ್ದಾರೆ.ಯುವ ಬರಹಗಾರರಿಗೆ ಏನು ಹೇಳುತ್ತೀರಿ?

ಸಮಾಜದ ಅಂಕುಡೊಂಕು ತಿದ್ದುವ ಸಾಹಿತ್ಯ ರಚನೆಗೆ ಯುವ ಬರಹಗಾರರು ಒತ್ತು ನೀಡಬೇಕು. ಕಲ್ಪಿತ ಸಾಹಿತ್ಯಕ್ಕಿಂತ ಸಂಶೋಧನಾತ್ಮಕ ಲೇಖನಗಳತ್ತ ಗಮನಹರಿಸಬೇಕು. ಹಿಂದಿನ ಸಾಹಿತಿಗಳು ಅರ್ಪಣಾ ಮನೋಭಾವದಿಂದ ಸಾಹಿತ್ಯದ ಕೃಷಿ ಮಾಡುತ್ತಿದ್ದರು. ಇಂದು 3-4 ಪುಸ್ತಕ ಬರೆದ ಕೂಡಲೇ ದೊಡ್ಡ ಸಾಹಿತಿಗಳೆಂಬ ಭಾವನೆ ಬಂದುಬಿಡುತ್ತಿದೆ. ಇದು ಸಲ್ಲದು.ಪುಸ್ತಕ ಓದುವ ಸಂಸ್ಕೃತಿಗೇನಾಗಿದೆ?

ಟಿವಿ ಮಾಧ್ಯಮದ ಪ್ರಭಾವದಿಂದ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಆಸಕ್ತಿ ಬೆಳೆಸುವ ವಾತಾವರಣ ನಿರ್ಮಾಣವಾಗಬೇಕು. ಈ ಕೆಲಸವನ್ನು ಸಮಾಜ ಹಾಗೂ ಸರ್ಕಾರ ಎರಡೂ ಸೇರಿ ಮಾಡಬೇಕಿದೆ.ಸಾಹಿತ್ಯ ಕ್ಷೇತ್ರದಲ್ಲಿಯೂ ಜಾತಿ ಇದೆಯೇ?

ಕಂಡುಬರುತ್ತಿದೆ. ಇದು  ವಿಷಾದನೀಯ. `ಅವರು  ನಮ್ಮವರು', `ಅವರ  ಕಡೆಯವರು' ಎನ್ನುವ  ಕೆಲ ಸಾಹಿತಿಗಳಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ  ಇದರ ಮೇಲೆಯೇ  ನಿರ್ಧಾರವಾಗುತ್ತಿದೆ.  ಇದರಿಂದ ಪ್ರಶಸ್ತಿಗಳ  ಮೌಲ್ಯ  ಕಡಿಮೆಯಾಗುತ್ತಿದೆ.  ಇದು ತೊಲಗಬೇಕು.  ಅಂತರ್ಜಾತಿ ವಿವಾಹಗಳು ಹೆಚ್ಚಿದರೆ ಸಮಾಜದಲ್ಲಿ ಜಾತಿ ತೊಲಗುತ್ತದೆ.ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ

ದಾವಣಗೆರೆ: ನಗರದಲ್ಲಿ ಶನಿವಾರ ಆರಂಭವಾಗುವ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಕುಂ.ಬಾ.ಸದಾಶಿವಪ್ಪ ಅವರು ಬಡತನದಲ್ಲಿಯೇ ಬೆಳೆದು ಸಾಧನೆ ತೋರಿದ ಬಹುಮುಖ ಪ್ರತಿಭೆ.1933ರ ಜನವರಿ 2ರಂದು ಜಿಲ್ಲೆಯ ಹರಪನಹಳ್ಳಿಯ ಕುಂಚೂರು ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಅವರು, ಕಷ್ಟದಲ್ಲಿಯೇ ಓದಿ ಬೆಳೆದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರಿದವರು; ಗ್ರಾಮೀಣ ಪ್ರದೇಶವರಾದರೂ ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿದವರು.ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆಯೇ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ನೌಕರಿ ಸಿಕ್ಕಿತೆಂದು ಸುಮ್ಮನಾಗಲಿಲ್ಲ. ಬಿ.ಎ, ಎಂ.ಎ, ಬಿ.ಇಡಿ ಮಾಡಿಕೊಂಡರು. ಪ್ರೌಢಶಾಲೆಗೆ ಬಡ್ತಿ ಪಡೆದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕನ್ನಡ ವಿಷಯ ಮುಖ್ಯ ಪರೀಕ್ಷಕರಾಗಿ 1991ರಿಂದ 1994ರವರೆಗೆ ಸೇವೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಮೂರು ವರ್ಷ, ಕರ್ನಾಟಕ ಜಾನಪದ ಪರಿಷತ್‌ನ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ 10 ವರ್ಷ, ಕರ್ನಾಟಕ ಇತಿಹಾಸ ಪರಿಷತ್‌ನಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ 22 ವರ್ಷ ಕಾರ್ಯನಿರ್ವಹಿಸಿದ್ದಾರೆ. 2003ರಲ್ಲಿ ಹರಪನಹಳ್ಳಿಯಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಅವರಿಗೆ, 1992ರಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಜಿಲ್ಲಾ ಕಸಾಪ ನೀಡುವ `ಮಹಲಿಂಗರಂಗ ಪ್ರಶಸ್ತಿ' ಸಂದಿದೆ. ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಲಾಗಿದೆ. 2009ರಲ್ಲಿ ಕಾಸರಗೋಡು ಗಡಿನಾಡು ಉತ್ಸವದಲ್ಲಿ `ಸಾಹಿತ್ಯ ಪ್ರಶಸ್ತಿ', ಕಸಾಪ ರಾಜ್ಯ ಘಟಕದ ವತಿಯಿಂದ `ಜೈನ ಪ್ರಶಸ್ತಿ' ನೀಡಲಾಗಿದೆ. 2008ರಲ್ಲಿ ದಾವಣಗೆರೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.ಸಾಹಿತ್ಯ ಕೃಷಿ

ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ಏಳು ಪುಸ್ತಕ, ಶಿಷ್ಟ ಸಾಹಿತ್ಯಕ್ಕೆ ಸಂಬಂಧಿಸಿದಂತೆ 24 ಪುಸ್ತಕ ಸೇರಿ ಒಟ್ಟು 41 ಪುಸ್ತಕಗಳನ್ನು ರಚಿಸಿದ್ದಾರೆ. ರಾಜ್ಯದ ವಿವಿಧ ಕಡೆ 31 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. `ಜೀವನ ಜೋಕಾಲಿ' ಕವನ ಸಂಕಲನ ಬರೆದಿದ್ದಾರೆ. `ವಿಶ್ವವಿಭೂತಿ ಪುರುಷರು', `ಶಿವಶರಣ ಅಂಬಿಗರ ಚೌಡಯ್ಯ', `ಜೋಳಿಗೆ ತುಂಬ ಜಾನಪದ ಹೋಳಿಗೆ', `ನಾವು ಹಾಡ್ತೇವ ಥರಾ ಥರಾ', `ಅರಳ್ತಾವಾ ಮಲ್ಲಿಗೆ ಮೊಗ್ಗು', `ಹರಪನಹಳ್ಳಿ ಪಾಳೇಗಾರರು', `ಕಂನಾಡಿಗೆ ಜೈನರ ಕೊಡುಗೆ'  ಅವರ ಪ್ರಮುಖ ರಚನೆಗಳು.ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮೊಮ್ಮಕ್ಕಳೊಂದಿಗೆ ಅವರು ಹರಪನಹಳ್ಳಿಯಲ್ಲಿ ವಾಸವಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿ ಮುಂದುವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.