ಮಂಗಳವಾರ, ಮೇ 18, 2021
22 °C

ಸಮಾಜದ ಧೋರಣೆ ಬದಲಾವಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಮಾಜದಲ್ಲಿ ಮಾನಸಿಕ ರೋಗವನ್ನು `ಕಳಂಕ~ ಎಂಬಂತೆ ಕಾಣುವ ಧೋರಣೆ ಬದಲಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್ ಕರೆ ನೀಡಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಆಶ್ರಯದಲ್ಲಿ ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೆದುಳಿನಲ್ಲಿನ ರಾಸಾಯನಿಕ ಕ್ರಿಯೆಗಳ ವ್ಯತ್ಯಾಸದಿಂದ ಮಾನಸಿಕ ರೋಗಗಳು ಬರುತ್ತವೆ. ಶೇ. 90ರಿಂದ 95ರಷ್ಟು ರೋಗಗಳನ್ನು ಶೀಘ್ರವೇ ಗುಣಪಡಿಸಬಹುದು. ಇಂಥವರನ್ನು ಕೀಳಾಗಿ ಕಾಣಬಾರದು. ಮನೆಯವರು, ಪ್ರೀತಿ- ವಿಶ್ವಾಸದಿಂದ ನೋಡಿಕೊಳ್ಳಬೇಕು. ಕೇವಲ ಆಸ್ಪತ್ರೆಗೆ ಸೇರಿಸುವುದರಿಂದ ಜವಾಬ್ದಾರಿ ಮುಗಿಯುವುದಿಲ್ಲ. ಕಾನೂನಿನ ಪ್ರಕಾರ, ಇತರರಂತೆಯೇ ಮಾನಸಿಕ ರೋಗಿಗಳಿಗೂ ಎಲ್ಲ ಹಕ್ಕುಗಳು ಇವೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮನೋರೋಗ ವಿಭಾಗಗಳನ್ನು ತೆರೆಯಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಚಿಕಿತ್ಸಾ ಸೌಲಭ್ಯವಿದೆ. ಉಚಿತವಾಗಿ ಸೇವೆ ಪಡೆಯಬಹುದು. ಚಿಕಿತ್ಸೆಗಾಗಿ ದುಬಾರಿ ವೆಚ್ಚವಾಗುತ್ತದೆ ಎಂಬ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.ಇಂದಿನ ಯುವಪೀಳಿಗೆಗೆ ಬುದ್ಧಿ ಇದೆ; ತಾಳ್ಮೆ ಕಡಿಮೆ. ನಿರೀಕ್ಷಿಸಿದಷ್ಟು ಅಂಕ ಬರಲಿಲ್ಲ ಎಂದು, ಪ್ರೀತಿಸಿದವರು, ಇಷ್ಟಪಟ್ಟಿದ್ದು ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬರುತ್ತಿದೆ. ಎಲ್ಲ ಸಂಪತ್ತು, ಸೌಂದರ್ಯ ಇದ್ದರೂ ಯುವಕ/ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಮರಸ್ಯದಿಂದ ದಾಂಪತ್ಯ ಜೀವನ ನಡೆಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮಾನಸಿಕವಾಗಿ ಇರುವ ತೊಂದರೆ ಕಾರಣ ಇರಬಹುದು. ಈ ಬಗ್ಗೆ ಅರಿವು ಹೊಂದುವುದು ಅಗತ್ಯ ಎಂದು ತಿಳಿಸಿದರು.ರಾಜಧಾನಿ ಬೆಂಗಳೂರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿರುವಂತೆ, ಆತ್ಮಹತ್ಯೆಯಲ್ಲಿಯೂ ದೇಶದಲ್ಲಿ ನಂ. 1 ಸ್ಥಾನದಲ್ಲಿದೆ. ಈ ಪೈಕಿ, ಶೇ. 80ರಷ್ಟು ಮಂದಿ ಯುವಕ- ಯುವತಿಯರೇ ಆಗಿರುವುದು ಆತಂಕದ ಸಂಗತಿ. ಇದರಿಂದ, ದೇಹದ ಆರೋಗ್ಯ ಮಾತ್ರ ಸಾಲದು; ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಹೀಗಾಗಿ, ಮಾನಸಿಕ ರೋಗವನ್ನು ಗಂಭೀರ ಸಮಸ್ಯೆಯನ್ನಾಗಿ ಪರಿಗಣಿಸಲಾಗಿದೆ. ಅರಿವು ಹೊಂದುವ ಮೂಲಕ ಈ ರೋಗದಿಂದ ಹೊರ ಬರಬಹುದು ಎಂದು ಹೇಳಿದರು.ಜಗತ್ತಿನ ಜನಸಂಖ್ಯೆಯಲ್ಲಿ ಶೇ. 10ರಷ್ಟು ಮಂದಿ ಮಾನಸಿಕ ರೋಗಿಗಳಾಗಿದ್ದಾರೆ. ಈ ಪೈಕಿ, ಶೇ. 20ರಷ್ಟು ಮಕ್ಕಳು. ಅಮೆರಿಕಾದಂತಹ ಮುಂದುವರಿದ ದೇಶದಲ್ಲಿ  ಈ ಪ್ರಮಾಣ ಶೇ. 30ರಷ್ಟಿದೆ.  ಮಾನಸಿಕ ರೋಗ ತಂದುಕೊಡಬಲ್ಲ ಐಶ್ವರ್ಯ ಏಕೆ ಬೇಕು ಎಂದು ಪ್ರಶ್ನಿಸಿದರು.ಅವಿಭಕ್ತ ಕುಟುಂಬ ವ್ಯವಸ್ಥೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ವಿದ್ಯೆ, ಉದ್ಯೋಗ, ಹಣ ಸಂಪಾದನೆಯೇ ಮೂಲ ಗುರಿ ಆಗಿರುವುದರಿಂದ ಮಾನವೀಯತೆ, ಪ್ರೀತಿ, ವಿಶ್ವಾಸ, ನೆಮ್ಮದಿಯ ಜೀವನ ಮರೀಚಿಕೆಯಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಇದಕ್ಕೆ ಕಾರಣ. ಇದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ವಿಶ್ಲೇಷಿಸಿದರು. ಭಾರತೀಯ ಮನೋವೈದ್ಯಕೀಯ ಸಂಘದ  ಕರ್ನಾಟಕ ಶಾಖೆಯ ಉಪಾಧ್ಯಕ್ಷ ಡಾ.ಬಿ.ಎನ್. ಗಂಗಾಧರ್ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಎಸ್. ತಡಹಾಳ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ, ಕಾನೂನು ಪದವಿ ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್. ರೆಡ್ಡಿ, ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಆರ್. ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ವಿ. ತಿಮ್ಮೇಶ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಪರಶುರಾಮಪ್ಪ, ಮನೋವೈದ್ಯ ಡಾ.ನಾಗರಾಜರಾವ್, ಡಾ.ಅನುಪಮಾ, ಡಾ.ಮಹೇಶ್‌ಬಾಬು ಮತ್ತಿತರರು ಉಪಸ್ಥಿತರ್ದ್ದಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.