ಸಮಾಜದ ವಿರುದ್ಧ ಅಪಪ್ರಚಾರ ನಿಲ್ಲಲಿ

7

ಸಮಾಜದ ವಿರುದ್ಧ ಅಪಪ್ರಚಾರ ನಿಲ್ಲಲಿ

Published:
Updated:
ಸಮಾಜದ ವಿರುದ್ಧ ಅಪಪ್ರಚಾರ ನಿಲ್ಲಲಿ

ಚಿತ್ರದುರ್ಗ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಇತರ ಜನಾಂಗದ ಮುಖಂಡರು ಮಾದಿಗ ಸಮುದಾಯದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ತಡೆಗಟ್ಟುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಮಾಜಿ ಶಾಸಕ ಎಚ್. ಆಂಜನೇಯ ಹೇಳಿದರು.ನಗರದ ಕಬೀರಾನಂದ ಆಶ್ರಮದಲ್ಲಿ ಭಾನುವಾರ ನಡೆದ ಮಾದಿಗ ಸಮುದಾಯದ ಸಮಾನ ಮನಸ್ಕ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾದಿಗ ಸಮುದಾಯದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಿದೆ. ಜಾತಿ ನಿಂದನೆ ಮೊಕದ್ದಮೆ ದಾಖಲಿಸುತ್ತಾರೆ ಎಂದು ಹೇಳುವ ಮೂಲಕ ಮೇಲ್ವರ್ಗದ ಸಮುದಾಯದವರನ್ನು ತಮ್ಮ ವಿರುದ್ಧ ಪ್ರಚೋದಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.ಇಂತಹ ಹೊತ್ತಿನಲ್ಲಿ ನಾವು ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಸೆಯಲು ಹೆಚ್ಚು ಪ್ರಯತ್ನಿಸುವ ಮೂಲಕ ಇದು ಸುಳ್ಳು ಎಂದು ನಿರೂಪಿಸಬೇಕಾಗಿದೆ. ತಾವು ಭರಮಸಾಗರ ಶಾಸಕರಾಗಿದ್ದ ವೇಳೆ ಒಂದೇ ಒಂದು ಜಾತಿ ನಿಂದನೆ ಮೊಕದ್ದಮೆ ದಾಖಲಾಗಿಲ್ಲ. ಜತೆಗೆ ಇಂದು ದಲಿತರ ಸ್ಥಿತಿ ಕೂಡ ಬಹಳಷ್ಟು ಬದಲಾಗಿದೆ ಎಂದು ಹೇಳಿದರು.ಮಾದಿಗ ಸಮುದಾಯ ನಿಜಕ್ಕೂ ತಾಯ್ತನ, ಮಾನವೀಯ ಮೌಲ್ಯವುಳ್ಳ ಸಮುದಾಯ. ಊರಿನ ಸ್ವಚ್ಛತೆಯಿಂದ ಹಿಡಿದು ಎಲ್ಲರ ಜಮೀನುಗಳನ್ನು ಉತ್ತಿ, ಬಿತ್ತಿ ರೈತರ ಬೆನ್ನಲುಬಾಗಿ ಕೆಲಸ ಮಾಡುತ್ತಿದೆ. ತಮ್ಮ ಆರೋಗ್ಯ ಬಲಿಕೊಟ್ಟು ಸಮಾಜದ ಆರೋಗ್ಯಕ್ಕಾಗಿ ಕೆಲಸ ಮಾಡುವ ಪೌರ ಸೇವಕರಿವರು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಈ ಸಮುದಾಯದ 3.5 ಲಕ್ಷ ಜನಸಂಖ್ಯೆಯಿದೆ. ಅತಿ ಹೆಚ್ಚು ಜನಸಂಖ್ಯೆಯಿದ್ದರೂ ರಾಜಕೀಯ ಸ್ಥಾನಮಾನ ಮಾತ್ರ ಸಿಕ್ಕಿಲ್ಲ. ಈ ಜಿಲ್ಲೆ ಸಮುದಾಯದ ಮುಖಂಡರು ರಾಜಕೀಯವಾಗಿ ಬೆಳೆಯಲು  ಅವಕಾಶವಿದ್ದು, ಇತ್ತ ಸಮುದಾಯ ಚಿಂತನೆ ನಡೆಸಬೇಕು ಎಂದರು.ಚುನಾವಣೆ ವೇಳೆ ಸಮುದಾಯದ ಜನ ಇತರ ಸಮುದಾಯ ಮುಖಂಡರ ಬಳಿ ಹೋಗಿ ನಾವು ಸಮಾಜದ ಅಭಿವೃದ್ಧಿಗೆ ದುಡಿದಿದ್ದೇವೆ. ನೀವು ಹೇಳಿದವರಿಗೆ ಮತ ಹಾಕಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ. ಈಗ ನೀವು ನಮಗೆ ಮತ ನೀಡಿ ಎಂದು ಸಾಮರಸ್ಯದಿಂದ ಮತ ಯಾಚಿಸಬೇಕು ಎಂದು ಕಿವಿಮಾತು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್‌ಮೂರ್ತಿ ಜಿಲ್ಲೆಯಲ್ಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯ ಬೆಳವಣಿಗೆಗೆ ಅವಕಾಶವಿದೆ. ನಮ್ಮಲ್ಲಿನ ಒಡಕು ಬದಿಗೊತ್ತಿ ಸೌಹಾರ್ದ, ಸಾಮರಸ್ಯದಿಂದ ಮುಂದಡಿಯಿಟ್ಟರೆ ಇದನ್ನು ಸಾಧಿಸಬಹುದು. ಆಂಜನೇಯ ಅವರು ಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದು ಅವರ ಕೈ ಬಲಪಡಿಸಬೇಕಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಬೇಕಿದೆ ಎಂದರು.ಸಮುದಾಯದ ಮುಖಂಡರಾದ ನಗರಸಭೆ ಸದಸ್ಯ ಮಲ್ಲೇಶ್, ಪ್ರೊ.ಲಿಂಗಪ್ಪ,  ನಿವೃತ್ತ ಅಧಿಕಾರಿಗಳಾದ ಮೈಲಾರಪ್ಪ, ಬಾಲಮೂರ್ತಿ, ಗೋಪಾಲಕೃಷ್ಣ, ಹುಲ್ಲೂರ್ ಕುಮಾರಸ್ವಾಮಿ, ಭೀಮರಾಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry