ಶುಕ್ರವಾರ, ನವೆಂಬರ್ 22, 2019
22 °C

`ಸಮಾಜದ ವಿರುದ್ಧ ಪಿತೂರಿ ನಡೆಸುವುದು ಅಪರಾಧ'

Published:
Updated:

ಮೈಸೂರು: `ಸಮಾಜ ವ್ಯವಸ್ಥೆಯ ಹೊರಗಿದ್ದುಕೊಂಡೇ ಕೆಲವರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾರೆ. ವ್ಯವಸ್ಥೆ ವಿರುದ್ಧ ಪಿತೂರಿ ನಡೆಸುವುದು  ಅಪರಾಧವೇ' ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ತಿಳಿಸಿದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಲಾಮಂದಿರದ ಮನೆಯಂಗಳದಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.`ಹಕ್ಕುಗಳ ಯುಗದಲ್ಲಿ ನಾವು ಇದ್ದೇವೆ. ಸಮಾಜದಲ್ಲಿ ದೊರಕುವ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಮೂಲಭೂತ ಹಕ್ಕುಗಳ ಸವಾಲುಗಳಿಗೆ ಐಕ್ಯತೆ ಮತ್ತು ಸಂಘಟನೆ ಪರಿಹಾರ. ಸಾಮಾಜಿಕ ಮತ್ತು ರಾಜಕೀಯ ಧ್ರುವೀಕರಣ ಆಗಬೇಕಿದೆ. ಮಡೆ ಮಡೆಸ್ನಾನ ಸಮಾಜದ ಘನತೆ, ಗೌರವಕ್ಕೆ ಧಕ್ಕೆ ತರುವಂತಹದು. ಇದನ್ನು ಸಮಾಜದಿಂದ ತೊಲಗಿಸಬೇಕು' ಎಂದು ಕರೆ ನೀಡಿದರು.`ಸರ್ಕಾರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಮಾಜ ಅಧೋಗತಿಗೆ ಹೋಗುತ್ತಿದೆ. ಸಮಾಜದ ಒಳಿತಿಗೆ ರಾಜಕಾರಣಿಗಳು ಕೆಲಸ ಮಾಡುತ್ತಿಲ್ಲ. ಹಕ್ಕುಗಳ ಚ್ಯುತಿ ಆದಾಗ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಯಾವ ವರ್ಗಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಇನ್ನೂ ಸಿಕ್ಕಿಲ್ಲ, ಯಾಕೆ ಸಿಕ್ಕಿಲ್ಲ ಎಂಬುದರ ಬಗ್ಗೆ ಎಲ್ಲರು ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಒಂದು ಸಮುದಾಯವನ್ನು ವ್ಯವಸ್ಥಿತವಾಗಿ ನಿರಂತರವಾಗಿ ಹಿಂದಿಕ್ಕಲು ಸಾಧ್ಯವಿಲ್ಲ' ಎಂದು ಹೇಳಿದರು.ಸಾಹಿತಿ ಬಂಜಗೆರೆ ಜಯಪ್ರಕಾಶ್ `ಕರ್ನಾಟಕದ ಮುನ್ನೋಟದಲ್ಲಿ ಹಿಂದುಳಿದ ವರ್ಗಗಳ ಸಮಸ್ಯೆಗಳು' ವಿಷಯ ಕುರಿತು ಮಾತನಾಡಿ `ಜಾಗತೀಕರಣ ಜಾತೀಕರಣವಾಗಿ ಮಾರ್ಪಟ್ಟಿದೆ. ಹಿಂದುಳಿದವರು ತುಳಿತಕ್ಕೆ ಒಳಗಾದವರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಆಗುತ್ತಿಲ್ಲ.ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ, ದಲಿತ ವರ್ಗಕ್ಕೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹಣದ ಕೊರತೆಯನ್ನು ಎದುರಿಸಲಾಗುತ್ತಿದೆ. ಉನ್ನತ ಶಿಕ್ಷಣ ಕೇವಲ ಶ್ರೀಮಂತರ, ಮೇಲ್ವರ್ಗದವರ ಪಾಲಾಗುತ್ತಿದೆ. ಹಾಗಾಗಿ ಹಿಂದುಳಿದ, ದಲಿತರು ಆಟೊ, ಬಾರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇಲ್ವರ್ಗದ ಜನಾಂಗದ ಮಕ್ಕಳು ಐಟಿ-ಬಿಟಿ, ಕಾರ್ಪೊರೇಟ್ ಸಂಸ್ಥೆಗಳು, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದರು.`ಮೇಲ್ವರ್ಗದವರ ಕುತಂತ್ರದಿಂದ ತುಳಿತಕ್ಕೆ ಒಳಗಾದವರು ಜೀತದಾಳುಗಳಾಗಿ ಕೆಲಸ ಮಾಡಬೇಕಾಗಿದೆ. ಬುದ್ಧಿ ಆಧರಿಸಿ ಕೆಲಸ ಮಾಡುವ  ಹುದ್ದೆಗಳನ್ನು ಮೇಲ್ವರ್ಗದ ಬ್ರಾಹ್ಮಣರು ಮಾಡುತ್ತಿದ್ದಾರೆ. ಇವರೆಂದು ಬೆವರು ಸುರಿಸಿ, ಶ್ರಮವಹಿಸಿ ದುಡಿದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂದು  ಹೇಳಿಕೊಳ್ಳಲು ಹಿಂದುಳಿದ, ದಲಿತ ವರ್ಗದವರಿಗೆ ಆಗುತ್ತಿಲ್ಲ. ಮೇಲ್ವರ್ಗದವರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.ರಾಜಕೀಯದಲ್ಲಿ ಹುದ್ದೆ-ಅಧಿಕಾರ ಬೇಕಾದರೆ ರಾಜ್ಯದಲ್ಲಿ ಅಹಿಂದ ಒಕ್ಕೂಟ ಕಟ್ಟಬೇಕು. ಕಾರ್ಯಾಚರಣೆ ಮೂಲಕ ಐಕ್ಯತೆ ಬಲಿಷ್ಠಗೊಳಿಸಬೇಕು' ಎಂದು ಕರೆ ನೀಡಿದರು.ವಿಶ್ವಕರ್ಮ ಮಹಾಮಂಡಲ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ, ರಂಗ ಕಲಾವಿದ ಎಸ್.ನಾಗರಾಜ್ ಉಪಸ್ಥಿತರಿದ್ದರು.  ಎಫ್‌ಐಎಐ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ಎ.ಎಚ್.ಕೃಷ್ಣೇಗೌಡ ಸ್ವಾಗತಿಸಿದರು. ಅಧ್ಯಕ್ಷ ಕೆ.ಎಸ್.ಶಿವರಾಮ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಪ್ರತಿಕ್ರಿಯಿಸಿ (+)