ಮಂಗಳವಾರ, ಜನವರಿ 28, 2020
17 °C

ಸಮಾಜಮುಖಿ ಕೃತಿ ರಚನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಬರಹಗಾರರು ಮತ್ತು ಅವರ ಬರವಣಿಗೆ ಸಮಾಜದಿಂದ ವಿಮುಖ ಆಗಿರುವ ಇಂಥ ಸಂದರ್ಭದಲ್ಲಿ ಸಿ.ಟಿ. ಶಾಂತರಾಜ್ ಅವರ ‘ಶಿಶಿರ’ ಸಮಾಜಮುಖಿ ಕೃತಿಯಾಗಿ ಹೊರಹೊಮ್ಮಿದೆ’ ಎಂದು ಲೇಖಕಿ ಮತ್ತು ಕುವೆಂಪು ವಿಶ್ವವಿದ್ಯಾಲಯದ ಕುಲ ಸಚಿವೆ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.ನಗರದ ರೋಟರಿ ಬಾಲಭವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕ ಸಿ.ಟಿ. ಶಾಂತರಾಜ್ ಅವರ ‘ಶಿಶಿರ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.‘ಸಾಹಿತ್ಯ ಕ್ಷೇತ್ರಕ್ಕೆ ಈಚೆಗೆ ಸೇರ್ಪಡೆಯಾಗುತ್ತಿರುವ ಕೃತಿಗಳಲ್ಲಿ ಪ್ರೀತಿ–ಪ್ರೇಮ, ಪ್ರಣಯ, ಸೌಂದರ್ಯ ವರ್ಣನೆ ಹೆಚ್ಚುತ್ತಿವೆ. ಪರಿಣಾಮವಾಗಿ ಸಾಹಿತ್ಯ ಕೃತಿಗಳು ಸಮಾಜ ಸಂಚಲನಗೊಳಿಸುವ ಶಕ್ತಿ ಕಳೆದುಕೊಂಡಿವೆ. ಕೃತಿಕಾರರ ದೌರ್ಬಲ್ಯವೋ ಇಲ್ಲ ಕೃತಿಗಳ ಗುಣಮಟ್ಟ ಕಾರಣವೋ ಗೊತ್ತಿಲ್ಲ, ಓದುಗ ವಲಯ ಕೂಡ ಕ್ಷೀಣಿಸಿದೆ. ಆದರೆ, ಉತ್ತಮ ಕೃತಿ ಬಂದಾಗ ಕನ್ನಡಿಗರು ಕೃತಿಗಳನ್ನು ಅಪ್ಯಾಯಮಾನವಾಗಿ ಸ್ವೀಕರಿಸಿದ್ದಾರೆ. ಬಹು ವರ್ಷಗಳ ನಂತರ ‘ಶಿಶಿರ’ದಂತಹ ಸಮಾಜಮುಖಿ ಚಿಂತನೆವುಳ್ಳ ಕೃತಿ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿದೆ. ಇಂತಹ ಕೃತಿಗಳನ್ನು ಓದುವ ಜತೆಗೆ ಮಕ್ಕಳ ಕೈಗಳಿಗೂ ಮುಟ್ಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ‘ ಶಿಶಿರ ವಿಮರ್ಶೆಗೂ ನಿಲುಕದ ಕೃತಿ. ಇಂತಹ ಉತ್ತಮ ಕೃತಿಗಳನ್ನು ವಿಮರ್ಶಕರು ಸೀಮಿತ ಚೌಕಟ್ಟು ಹಾಕಿ ಬರಹಗಾರರನ್ನು ಸದೆಡಿಯಲು ನೋಡುತ್ತಾರೆ. ವಿಮರ್ಶಕರು ಜನಪ್ರಿಯ ಸಾಹಿತಿಗಳನ್ನು ಮಣೆ ಹಾಕದೇ ಶಾಂತರಾಜ್ ಅವರಂತಹ ಲೇಖಕರ ಕೃತಿಗಳನ್ನು ಮೌಲಿಕ ನೆಲೆಯಲ್ಲಿ ವಿಮರ್ಶೆ ನಡೆಸಬೇಕಿದೆ. ಬಂಡವಾಳ ಶಾಹಿಗಳ ನೆರಳಿನಲ್ಲಿ ಬದುಕುತ್ತಿರುವ ಭೈರಪ್ಪರಂತಹವರ ಕೃತಿಗಳನ್ನು ವಿಮರ್ಶಕರು ಪ್ರಶಂಶಿಸುವುದನ್ನು ನಿಲ್ಲಿಸಬೇಕು. ಆಗ ನಮ್ಮ ಸುತ್ತಮುತ್ತಲು ಬರೆಯುತ್ತಿರುವ ಸಾಮಾನ್ಯ ಲೇಖಕರಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಪರರನ್ನು ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಕಾರ್ಯವನ್ನು ವಿಮರ್ಶಕರೂ ಸೇರಿದಂತೆ ಎಲ್ಲರೂ ಮಾಡಬೇಕು ಎಂದು ಸಲಹೆ ನೀಡಿದರು.‘ಬರಹಗಾರರು ಕೂಡ ಸಮಾಜಮುಖಿ ಚಿಂತನೆ ಇರುವ ಕೃತಿಗಳನ್ನು ಸಮಾಜಕ್ಕೆ ನೀಡಬೇಕು. ಎಚ್.ನರಸಿಂಹಯ್ಯ, ಅನಕೃ, ಬಸವರಾಜ ಕಟ್ಟಿಮನಿ, ಲಂಕೇಶ್ ಅವರಂತಹವರು ಸಮಾಜಮುಖಿ ಕೃತಿಯನ್ನು ನೀಡುವ ಮೂಲಕ ಜನರಲ್ಲಿ ವೈಚಾರಿಕ ಚಿಂತನೆ ಬಿತ್ತುವ ಕಾರ್ಯ ಮಾಡಿದರು’ ಎಂದರು.ಉಪನ್ಯಾಸಕ ಎ.ಬಿ.ರಾಮಚಂದ್ರಪ್ಪ ಕೃತಿ ಕುರಿತು ಮಾತನಾಡಿ,‘ಜಾಗತೀಕರಣದ ಇಂದಿನ ಕಾಲದಲ್ಲಿ ಎಲ್ಲರ ಮನಸ್ಸುಗಳು ಧನದಾಹಿಗಳಾಗಿವೆ. ಹಾಗಾಗಿ, ಇಂದು ಸಾಂಸ್ಕೃತಿಕ ಜಗತ್ತು ಕಾಣೆಯಾಗಿದೆ. ಸಾಮಾಜಿಕ ಹಿತಾಸಕ್ತಿ ಅಂಶ–ಆಶಯವಿಲ್ಲದ ಜೊಳ್ಳು ಕೃತಿಗಳು ಇಂದು ಬರುತ್ತಿವೆ. ಇಂಥ ಕೃತಿಗಳಲ್ಲಿ ಸೌಂದರ್ಯ ಇಲ್ಲವೇ ಕ್ರೌರ್ಯ ತುಂಬಿರುತ್ತದೆ. ಆದರೆ, ‘ಶಿಶಿರ’ ಕಾರ್ಮಿಕರ ಬದುಕಿನ ವೈವಿಧ್ಯ ಮಜಲುಗಳನ್ನು ಪರಿಚಯಿಸುತ್ತದೆ.ಮಲೆನಾಡಿನ ಸಾಂಸ್ಕೃತಿಕ ಬದುಕನ್ನು ಕೃತಿ ವಿಮರ್ಶಿಸುತ್ತಾ ಸಾಗುತ್ತದೆ. ಕಾಫಿತೋಟಗಳ ಜಮೀನ್ದಾರಿಗಳ ದೌರ್ಜನ್ಯವನ್ನು ತೋರಿಸುತ್ತದೆ. ಈ ದೇಶದ ಜ್ವಲಂತ ಸಮಸ್ಯೆಯಾಗಿರುವ ನಕ್ಸಲ್‌ವಾದವನ್ನು ಪ್ರತಿರೋಧಿಸಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳುವಂತೆ ಕೃತಿ ಸಂದೇಶ ಸಾರುತ್ತದೆ’ ಎಂದು ಹೇಳಿದರು.ಸಾಹಿತಿ ಬಿ.ಎಲ್. ವೇಣುಗೆ ಶಿಶಿರ ಕೃತಿ ಅರ್ಪಣೆಗೊಂಡಿದ್ದು, ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್. ವಿಶ್ವನಾಥ್ ಮಾತನಾಡಿದರು.ವಿಚಾರವಾದಿ ಪ್ರೊ.ಬಿ.ವಿ. ವೀರಭದ್ರಪ್ಪ, ಸಾಹಿತಿ ಡಾ.ಎಂ.ಜಿ.ಈಶ್ವರಪ್ಪ, ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಕಡಕೋಳ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)