ಸಮಾಜವಾದದ ಸಾಮ್ರಾಟ

7

ಸಮಾಜವಾದದ ಸಾಮ್ರಾಟ

Published:
Updated:
ಸಮಾಜವಾದದ ಸಾಮ್ರಾಟ

ಭಾರತದ ಸಮಾಜವಾದಿ ಆಂದೋಲನದಲ್ಲಿ ಅಶೋಕ ಮೆಹತಾ ಅವರದ್ದು ವಿಶಿಷ್ಟ ಹೆಸರು. ಅವರು, ಮಾರ್ಕ್ಸ್‌ವಾದ ಹಾಗೂ ಗಾಂಧೀವಾದಗಳಿಂದ ಭಿನ್ನವಾಗಿ ಜನತಾಂತ್ರಿಕ ಸಮಾಜವಾದದ ಪ್ರತಿಪಾದಕರು.`ಬುದ್ಧಿಜೀವಿಗಳಲ್ಲೊಬ್ಬ ರಾಜಕಾರಣಿ~ ಹಾಗೂ `ರಾಜಕಾರಣಿಗಳಲ್ಲೊಬ್ಬ ಬುದ್ಧಿಜೀವಿ~ ಎನ್ನುವುದು ಅವರ ಬಗೆಗಿನ ವಿಶೇಷಣ. `ಕವಿ ಹೃದಯದ ಕಾರ್ಮಿಕ ಮುಖಂಡ~ ಎನ್ನುವುದೂ ಅವರಿಗೆ ಸಲ್ಲುವ ಇನ್ನೊಂದು ವಿಶೇಷಣ.ಅಶೋಕ ಮೆಹತಾ ಗುಜರಾತಿನ ಭಾವನಗರದವರು (24.10.1911 - 17.01.1985). ಬೆಳೆದದ್ದು ಮುಂಬಯಿಯಲ್ಲಿ. ವಿದ್ಯಾರ್ಥಿ ದಿನಗಳಲ್ಲಿಯೇ ಸಮಾಜವಾದಿ ನಾಯಕ ಯುಸುಫ್ ಮೆಹೆ ಅವರ ಪ್ರಭಾವಕ್ಕೊಳಗಾದರು.ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ವಿಶ್ವವಿದ್ಯಾಲಯದ `ಸ್ಕೂಲ್ ಆಫ್ ಎಕಾನಾಮಿಕ್ಸ್~ನಲ್ಲಿ ಅಧ್ಯಾಪನ ಕೆಲಸ ಪ್ರಾರಂಭಿಸುವ ವೇಳೆಗೆ, ಗಾಂಧೀಜಿ `ಸವಿನಯ ಕಾನೂನು ಭಂಗ~ ಚಳವಳಿ ಆರಂಭಿಸಿದ್ದರು.ಅಧ್ಯಾಪನ ಕೆಲಸ ಬಿಟ್ಟ ಮೆಹತಾ ಚಳವಳಿಗೆ ಧುಮುಕಿದರು. ಬಂಧಿತರಾಗಿ ನಾಸಿಕದ ಜೈಲು ಸೇರಿದರು. ಅವರು ನಾಸಿಕದ ಜೈಲು ಸೇರಿದ್ದು ಭಾರತದ ಜನತಾಂತ್ರಿಕ ಸಮಾಜವಾದಿ ಆಂದೋಲನಕ್ಕೆ ಒಂದು ವರವಾಗಿಯೇ ಪರಿಣಮಿಸಿತು.ಅಲ್ಲಿ ಎರಡೂವರೆ ವರ್ಷಗಳ ಕಾಲ ಅಶೋಕರಿಗೆ ಪ್ರಖರ ಮಾರ್ಕ್ಸ್‌ವಾದಿ ಜಯಪ್ರಕಾಶ ನಾರಾಯಣ, ನಾನಾಸಾಹೇಬ ಗೋರೆ ಹಾಗೂ ಗಾಂಧೀವಾದಿ ಅಚ್ಯುತ ಪಟವರ್ಧನ ಮೊದಲಾದವರ ಒಡನಾಟ ದೊರೆಯಿತು.ನಾಸಿಕ್‌ನ ಜೈಲಿನಲ್ಲಿದ್ದ ಸಮಾಜವಾದಿಗಳೆಲ್ಲ ಸೇರಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನೊಳಗೆ ಒಂದು ಸಮಾಜವಾದಿ ಪಕ್ಷವನ್ನು ಕಟ್ಟಲು ನಿರ್ಧರಿಸಿದರು.ಸೆರೆಮನೆಯಿಂದ ಹೊರಬಂದ ಅವರು, 1934ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಸ್ಥಾಪಿಸಿದರು. ಅಶೋಕ, ಸ್ವಾಭಾವಿಕವಾಗಿಯೇ ಆ ಪಕ್ಷದ ಸ್ಥಾಪನಾ ಸದಸ್ಯರಾದರು.1941ರಲ್ಲಿ ಗಾಂಧೀಜಿ ಆಯ್ದ ಸತ್ಯಾಗ್ರಹಿಗಳ ಮೂಲಕ ವೈಯಕ್ತಿಕ ಸತ್ಯಾಗ್ರಹ ನಡೆಸಲು ಕರೆ ನೀಡಿದರು. ವಿನೋಬಾ ಭಾವೆಯವರನ್ನು ಮೊದಲ ವೈಯಕ್ತಿಕ ಸತ್ಯಾಗ್ರಹಿಯನ್ನಾಗಿ ಆಯ್ಕೆ ಮಾಡಿದರು. ಈ ವೈಯಕ್ತಿಕ ಸತ್ಯಾಗ್ರಹವನ್ನು ಜೆ.ಪಿ. ವಿರೋಧಿಸಿದರೂ, ಅಶೋಕ ಮೆಹತಾ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದರು. 1942ರ `ಭಾರತ ಬಿಟ್ಟು ತೊಲಗಿ~ ಆಂದೋಲನದಲ್ಲಿಯೂ ಭಾಗವಹಿಸಿ ಜೈಲಿಗೆ ಹೋದರು.ಗಾಂಧಿಯ ಕರೆಯಂತೆ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದರೂ ಅಶೋಕ ಮೆಹತಾ ಗಾಂಧೀವಾದವನ್ನು ಒಪ್ಪಲಿಲ್ಲ. ಹಾಗೆಯೇ ಜೇಪಿ ಮೊದಲಾದ ಮಾರ್ಕ್ಸ್‌ವಾದಿಗಳೊಡನೆ ಎರಡೂವರೆ ವರ್ಷ ನಾಸಿಕದ ಜೈಲಿನಲ್ಲಿದ್ದರೂ, ಅವರೊಂದಿಗೆ ಕಾಂಗ್ರೆಸ್ ಸಮಾಜವಾದಿ ಪಕ್ಷದಲ್ಲಿ ಹಲವಾರು ವರ್ಷ ಕೆಲಸ ಮಾಡಿದರೂ ಮಾರ್ಕ್ಸ್‌ವಾದಿಯೂ ಆಗಲಿಲ್ಲ. 1947ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ, ಮಾರ್ಕ್ಸ್‌ವಾದವನ್ನು ಕೈಬಿಟ್ಟು ಜನತಾಂತ್ರಿಕ ಸಮಾಜವಾದವನ್ನು ಒಪ್ಪಿಕೊಂಡದ್ದು ಅವರ ಸೈದ್ಧಾಂತಿಕ ಗೆಲುವೇ ಆಗಿತ್ತು.ಸ್ವಾತಂತ್ರ್ಯಾನಂತರದಲ್ಲಿ ಸಮಾಜವಾದಕ್ಕಾಗಿ ಹೋರಾಟವನ್ನು ಮುಂದುವರೆಸಿದ ಮೆಹತಾ, ಕಾರ್ಮಿಕರ ಸಂಘಟನೆ ಸಮಾಜವಾದಿ ಹೋರಾಟಕ್ಕೆ ಅಗತ್ಯ ಎಂದು ಭಾವಿಸಿದ್ದರು.ಮೊದಲಿಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯುನಿಯನ್ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದ ಅವರು, ಸಮಾಜವಾದಿಗಳು ಪ್ರತ್ಯೇಕ ಪಕ್ಷವನ್ನು ಕಟ್ಟಿದ ಮೇಲೆ ರಾಜಕೀಯ ಸಿದ್ಧಾಂತಕ್ಕೆ ಬದ್ಧವಾಗ್ದ್ದಿದರು. ಆದರೆ, ರಾಜಕೀಯ ಪಕ್ಷದೊಂದಿಗೆ ನೇರ ಸಂಬಂಧ ಹೊಂದಿರದೆ ಸ್ವತಂತ್ರವಾಗಿರುವ ಕಾರ್ಮಿಕ ಸಂಘಟನೆಗಳ ಕೇಂದ್ರವೊಂದನ್ನು ಸ್ಥಾಪಿಸುವ ಅವಶ್ಯಕತೆಯನ್ನು ಮನಗಂಡ ಅವರು, ಹಲವು ಕಾರ್ಮಿಕ ನಾಯಕರೊಂದಿಗೆ ಸೇರಿ ಕಲ್ಕತ್ತೆಯ ಹಾವಡಾದಲ್ಲಿ 1948ರಲ್ಲಿ `ಹಿಂದ್ ಮಜದೂರ ಸಭಾ~ ಎಂಬ ಕಾರ್ಮಿಕ ಸಂಘಟನೆ  ಸ್ಥಾಪಿಸಿದರು.ಆರ್.ಎಸ್.ಝಕರ್ ಅಧ್ಯಕ್ಷರಾಗಿ ಹಾಗೂ ಮೆಹತಾ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ನಂತರ ಮುಂಬಯಿಯಲ್ಲಿ ಬಟ್ಟೆ ಗಿರಣಿಗಳ 2.2 ಲಕ್ಷ ಕಾರ್ಮಿಕರು ಎರಡು ತಿಂಗಳು ನಡೆಸಿದ ಮುಷ್ಕರದ ನೇತೃತ್ವ ವಹಿಸಿದಾಗ ಅವರ ನಾಯಕತ್ವದ ಸಾಮರ್ಥ್ಯ ಸ್ಪಷ್ಟವಾಗಿ ಬೆಳಕಿಗೆ ಬಂತು.1953ರಲ್ಲಿ ಗುಜರಾತಿನ ಪರಡಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಮೆಹತಾ ಸಕ್ರಿಯಪಾತ್ರ ವಹಿಸಿದ್ದರು. ಈ ಹೋರಾಟ ಭೂಸಂಬಂಧಗಳನ್ನು  ಬದಲಿಸುವ ಉದ್ದೇಶ ಹೊಂದಿತ್ತು. 97 ಮಹಿಳೆಯರೂ ಸೇರಿ 1054 ರೈತರು ಸ್ಥಳೀಯ ಜಮೀನುದಾರನ 1000 ಎಕರೆ ಭೂಮಿ ಆಕ್ರಮಿಸಿಕೊಂಡರು. ಜಮೀನುದಾರನ ಫಿರ್ಯಾದಿನಿಂದ ಹೋರಾಟಗಾರರು ಬಂಧನಕ್ಕೊಳಗಾದರು. ಮೆಹತಾ ಒಂದು ವರ್ಷ ಜೈಲು ಅನುಭವಿಸಿದರು. 1974ರಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗಲೂ ಮೆಹತಾ ಜೈಲು ಸೇರಿದ್ದರು.1957ರಲ್ಲಿ ಆಹಾರ ಧಾನ್ಯ ವಿಚಾರಣಾ ಸಮಿತಿ, 1964ರಲ್ಲಿ ವಿದ್ಯುತ್‌ಚಾಲಿತ ಮಗ್ಗಗಳ ವಿಚಾರಣಾ ಸಮಿತಿ ಹಾಗೂ 1968ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಿಚಾರಣಾ ಸಮಿತಿಗಳ ಅಧ್ಯಕ್ಷರಾಗಿ ಅಶೋಕ ಮೆಹತಾ ಮಹತ್ವಪೂರ್ಣ ವರದಿಗಳನ್ನು ನೀಡಿದ್ದಾರೆ.1977ರಲ್ಲಿ ನೇಮಿಸಲಾದ ಪಂಚಾಯತಿ ರಾಜ್ ಸಮಿತಿಯ ವರದಿಯ ಸಂದರ್ಭದಲ್ಲಿ ಅವರನ್ನು ಪ್ರಮುಖವಾಗಿ ಸ್ಮರಿಸಲಾಗುತ್ತದೆ. 1977ರಲ್ಲಿ ಜನತಾ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗ, ಅಶೋಕ ಮೆಹತಾ ನೇತತ್ವದಲ್ಲಿ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಒಂದು ಸಮಿತಿಯನ್ನು ನೇಮಿಸಿತು.ಈ ಸಮಿತಿ, ಹಲವು ಗ್ರಾಮಗಳನ್ನು ಒಳಗೊಂಡ ಮಂಡಲ ಪಂಚಾಯತಿಯ ಪರಿಕಲ್ಪನೆಯನ್ನು ಪ್ರತಿಪಾದಿಸಿತು. ಈ ಮಂಡಲ ಪಂಚಾಯತಿಯ ಕೇಂದ್ರದಲ್ಲಿರುವ ಗ್ರಾಮಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಅದರ ಪ್ರಯೋಜನ ಸುತ್ತಮುತ್ತಲಿನ ಗ್ರಾಮಗಳಿಗೆ ತಲುಪುವಂತೆ ಮಾಡಬೇಕೆನ್ನುವುದು ಸಮಿತಿಯ ಶಿಫಾರಸಾಗಿತ್ತು. ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಭಿವದ್ಧಿಯ ಕೇಂದ್ರಗಳನ್ನಾಗಿ ಮಾತ್ರವಲ್ಲದೆ, ಆಡಳಿತದ ಘಟಕಗಳನ್ನಾಗಿಯೂ ಅಶೋಕ ಪರಿಕಲ್ಪಿಸಿದರು. ಮೊದಲ ಪಂಚವಾರ್ಷಿಕ ಯೋಜನೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಮೆಹತಾ, ಯೋಜನೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ಯೋಚನೆಯೇ ಇಲ್ಲದಿದ್ದುದನ್ನು ಎತ್ತಿ ತೋರಿಸಿದ್ದರು. ಯೋಜನಾಬದ್ಧ ಆರ್ಥಿಕ ಬೆಳವಣಿಗೆಯ ಬಗ್ಗೆ ಅವರಿಗಿದ್ದ ಆಸಕ್ತಿಯಿಂದಾಗಿ ಅಂದಿನ ಪ್ರಧಾನಿ ನೆಹರೂ ಅವರು 1963ರಲ್ಲಿ ಅಶೋಕರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದರು.ಆದರೆ, ಇದನ್ನು  ಒಪ್ಪದ ಪ್ರಜಾ ಸಮಾಜವಾದಿ ಪಕ್ಷ ಅಶೋಕರ ಪಕ್ಷದ ಸದಸ್ಯತ್ವವನ್ನೇ ಕೊನೆಗೊಳಿಸಿತು. ನಂತರ ಇಂದಿರಾಗಾಂಧಿಯವರು ಪ್ರಧಾನಿಯಾದಾಗ, ಅಶೋಕರನ್ನು ಯೋಜನಾ ಖಾತೆಗೆ ಮಂತ್ರಿಗಳನ್ನಾಗಿ ನೇಮಿಸಿದರು. ಆದರೆ, 1968ರಲ್ಲಿ ಜೆಕೊಸ್ಲೋವಾಕಿಯಾ ದೇಶದ ಮೇಲೆ ರಷ್ಯಾದ ದಾಳಿಯನ್ನು ಭಾರತ ಸರ್ಕಾರ ಖಂಡಿಸದೇ ಇದ್ದುದನ್ನು ಪ್ರತಿಭಟಿಸಿ ಅವರು ಮಂತ್ರಿಪದವಿಗೆ ರಾಜೀನಾಮೆ ನೀಡಿದರು. ಈ ರಾಜೀನಾಮೆ ಅವರ ಜನತಾಂತ್ರಿಕ ಸಮಾಜವಾದಿ ಸಿದ್ಧಾಂತದ ಬಗೆಗಿನ ಬದ್ಧತೆಗೆ ಸಾಕ್ಷಿಯಂತಿತ್ತು.ಅಶೋಕ ಮೆಹತಾ ಒಬ್ಬ ಶ್ರೇಷ್ಠ ಚಿಂತಕ, ಬರಹಗಾರ. `ಕಾಂಗ್ರೆಸ್ ಸಮಾಜವಾದಿ~ ಎಂಬ ನಿಯತಕಾಲಿಕವನ್ನು ಕೆಲವು ಕಾಲ ಸಂಪಾದಿಸುತ್ತಿದ್ದ ಅವರು, ತಮ್ಮ `ಗಾಂಧಿ ಮತ್ತು ಸಮಾಜವಾದ~ ಕೃತಿಯಲ್ಲಿ ಗಾಂಧೀಜಿಯವರ ಸಿದ್ಧಾಂತವನ್ನು ಪ್ರತಿಕ್ರಿಯಾವಾದಿ ಸ್ವಚ್ಛಂದವಾದ ಎಂದು ನಿರ್ವಚಿಸಿದರು. `ಹೂ ಓನ್ಸ್ ಇಂಡಿಯಾ~ ಎನ್ನುವ ಪುಸ್ತಕದಲ್ಲಿ ಒಡೆತನ ಹಾಗೂ ನಿಯಂತ್ರಣದ ಪ್ರಶ್ನೆಗಳನ್ನು ಚರ್ಚಿಸಿದರು.ಈ ಕಿರುಪುಸ್ತಕ ಜಾಗತಿಕ ಸಮಾಜವಾದಿ ವಲಯದ ಗಮನ ಸೆಳೆಯಿತು. ಜಯಪ್ರಕಾಶ ನಾರಾಯಣರ ಸಲಹೆಯ ಮೇರೆಗೆ, ಜನತಾಂತ್ರಿಕ ಸಮಾಜವಾದದ ಹಿನ್ನೆಲೆ ಹಾಗೂ ಅದರ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ-ಸಾಂಸ್ಕತಿಕ ಆಯಾಮಗಳ ಬಗ್ಗೆ ಒಂದು ಸರಣಿ ಭಾಷಣ ಮಾಡಿದರು. ಆ ಭಾಷಣಗಳನ್ನು `ಜನತಾಂತ್ರಿಕ ಸಮಾಜವಾದ~ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಯಿತು.ಭಾರತವಷ್ಟೇ ಅಲ್ಲ, ಇಡೀ ಜಾಗತಿಕ ಜನತಾಂತ್ರಿಕ ಚಳವಳಿಗಳು ಅಶೋಕ ಮೆಹತಾ ಅವರ ಈ ಲೇಖನ ಮಾಲೆಗೆ ಋಣಿಯಾಗಿರಬೇಕು. `ಇವುಗಳನ್ನು ಓದುತ್ತಾ ಸಾಗಿದಾಗ, ಸಂಘಟನೆ ಹಾಗೂ ಮುಂದಾಳತ್ವದ ಕಾರ್ಯದಲ್ಲಿ ತೊಡಗಿದ ಅಶೋಕರಿಗೆ ಇಷ್ಟೊಂದು ವಿಸ್ತೃತ ಓದು ಹಾಗೂ ಚಿಂತನೆಗೆ ಸಮಯ ಸಿಕ್ಕಿದ್ದಾದರೂ ಹೇಗೆ ಎಂದು ಆಶ್ಚರ್ಯ ಪಟ್ಟಿದ್ದೇನೆ~ ಎಂದು ಜೇಪಿ ಈ ಪುಸ್ತಕವನ್ನು ಪ್ರಶಂಸಿಸಿದ್ದಾರೆ.`ಏಷ್ಯಾದ ಸಮಾಜವಾದದ ಅಧ್ಯಯನ~ ಅವರ ಇನ್ನೊಂದು ಕೃತಿ. ಅದರಲ್ಲಿ ಗಾಂಧೀವಾದದ ಬಗೆಗಿನ ತಮ್ಮ ಅಭಿಪ್ರಾಯವನ್ನು ಪರಿಷ್ಕರಿಸಿ, ಗಾಂಧೀವಾದವನ್ನು ಪರಂಪರಾಗತ ಯಥಾಸ್ಥಿತಿವಾದ ಎಂದು ಪುನರ್ ನಿರ್ವಚಿಸುವ ಪ್ರಾಮಾಣಿಕತೆಯನ್ನು ತೋರಿಸಿದರು. ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆ ಈ ಇಬ್ಬರು ಭಾರತೀಯರಲ್ಲಿ `ಯುಟೋಪಿಯನ್ ಸಮಾಜವಾದ~ ತನ್ನ ಉನ್ನತ ಶಿಖರವನ್ನು ತಲುಪಿದೆ ಎಂದು ಹೊಗಳಿದರು. ಮದರಾಸಿನಲ್ಲಿ ನಡೆದ ಸಮಾಜವಾದಿ ಪಕ್ಷದ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿನ ಅಶೋಕರ ಮಾತುಗಳ ಕುರಿತು- `ಇದು ರವೀಂದ್ರನಾಥ ಟ್ಯಾಗೋರರ ಶೈಲಿಗೆ ಹೋಲುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ತರಹದ ಭಾಷಣಗಳನ್ನು ದೇಶ ವಿದೇಶಗಳ ರಾಜಕೀಯ ವೇದಿಕೆಗಳಲ್ಲಿ ನಾನು ಕೇಳಿಲ್ಲ~ ಎಂದು ಆಚಾರ್ಯ ಕೃಪಲಾನಿ ಉದ್ಘರಿಸಿದ್ದರು.ಅವಿವಾಹಿತರಾಗಿದ್ದ ಅಶೋಕ ಮೆಹತಾ ತಮ್ಮ ಬದುಕನ್ನು ಸಮಾಜವಾದವನ್ನು ಜೀವಂತವಾಗಿ ಇರಿಸಲು ಹಾಗೂ ಹೊಸ ಆಯಾಮಗಳನ್ನು ನೀಡಲು ಶ್ರಮಿಸಿದರು. ಸಮಾಜವಾದ ಮತ್ತೊಂದು ಸಂಕ್ರಮಣದ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಅವರ ನೆನಪು, ಶತಮಾನೋತ್ಸವ ಸಂದರ್ಭ ಭರವಸೆಯ ಬೆಳಕಿನಂತೆ ಕಾಣಿಸುತ್ತದೆ.

ಇಂದು ಬೆಂಗಳೂರಿನಲ್ಲಿ `ಸಮಾಜವಾದಿ ಅಧ್ಯಯನ ಕೇಂದ್ರ~ದ ವತಿಯಿಂದ `ಅಶೋಕ ಮೆಹತಾ ಶತಮಾನೋತ್ಸವ~ ಆಚರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry