ಗುರುವಾರ , ಮೇ 19, 2022
20 °C
ತಂಗಡಗಿ ನೇರ ಸಂವಾದಕ್ಕೆ ಬರಲಿ: ಸವಾಲು

`ಸಮಾಜ ಎಳೆ ತರುವುದು ಸರಿಯಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ ಬೇನಾಮಿ ಕಟ್ಟಡದ ಪ್ರಕರಣದಲ್ಲಿ ತಾವು ಶುದ್ಧ ಹಸ್ತರಾಗಿದ್ದರೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ನೇರ ಸಂವಾದಕ್ಕೆ ಆಗಮಿಸಲಿ ಎಂದು ಸಚಿವರಿಗೆ ಕರವೇ ಸ್ವಾಭಿಮಾನಿ ಬಣದ ಪಂಥಾಹ್ವಾನ ನೀಡಿದೆ.ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಬಳ್ಳಾರಿ ಜಿಲ್ಲೆಯ ಅಧ್ಯಕ್ಷ ಕುರುಗೋಡು ಚನ್ನಬಸವರಾಜ ಮಾತನಾಡಿ, ತಂಗಡಗಿ ನೇರ ಮಾತಿನ ಚರ್ಚೆಗೆ ಆಗಮಿಸಲಿ ಎಂದು ಸವಾಲು ಹಾಕಿದರು.ತಂಗಡಗಿ ಮಾತ್ರವಲ್ಲ ಚುನಾಯಿತ ಪ್ರತಿನಿಧಿ, ಅಧಿಕಾರಿಗಳ ಅಕ್ರಮ ವ್ಯವಹಾರದ ಬಗ್ಗೆ ಸಾಮಾಜಿಕ ದೃಷ್ಟಿಕೋನದಿಂದ ಹೋರಾಟ ಮಾಡಲು ರಾಜ್ಯದ ಯಾವುದೇ ಸಂಘಟನೆಗಳಿಗೆ ಹಕ್ಕಿದೆ ಎಂದು ನುಡಿದರು.ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ತಂಗಡಗಿ ಸಚಿವರಾದ ಬಳಿಕ ಕೇವಲ ಭೋವಿ ಸಮಾಜಕ್ಕೆ ಮಾತ್ರ ಸೀಮಿತವಲ್ಲ. ಅವರು ಎಲ್ಲ ಸಮಾಜಕ್ಕೆ, ಇಡೀ ಜಿಲ್ಲೆಗೆ ಬೇಕಾದ ವ್ಯಕ್ತಿ. ಈ ಹಿನ್ನೆಲೆ ಭೋವಿ ಸಮಾಜದ ಮುಖಂಡರು ತಂಗಡಗಿಯನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದರು.ಭೋವಿ ಸಮಾಜದ ಬಗ್ಗೆ ನಮ್ಮ ಸಂಘಟನೆಗೆ ಅಪಾರ ಗೌರವವಿದ್ದು, ಸಚಿವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಕೆಲ ಮುಖಂಡರು ಇಡೀ ಸಮಾಜವನ್ನು ತರುವ ಯತ್ನಕ್ಕೆ ಕೈಹಾಕಿರುವುದು ಶೋಭೆ ತರುವ ವಿಚಾರವಲ್ಲ ಎಂದರು.ಸಚಿವರ ಅಕ್ರಮ ಆಸ್ತಿಗಳಿಕೆ, ಭೂ ಒತ್ತುವರಿ, ಅಧಿಕಾರಿಗಳ ವರ್ಗಾವಣೆಯ ಪ್ರಕರಣ ಮೊದಲಾದವುಗಳ ಬಗ್ಗೆ ತನಿಖೆಯಾಗಲಿ. ಹೋರಾಟ ಮಾಡುವುದು ಸಂಘಟನೆಗಳ ಹಕ್ಕು. ಇದಕ್ಕೆ ಯಾವುದೆ ಸಮಾಜ ಅಡ್ಡಿ ಪಡಿಸಬಾರದು ಎಂದರು.ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ಅಂಗಡಿ ಮಾತನಾಡಿ, ತಾವು ಯಾವುದೇ ಪಕ್ಷದಲ್ಲಿಲ್ಲ. ಸಂಘಟನೆಯಲ್ಲಿ ತೊಡಗಿದ್ದು, ಅಕ್ರಮ, ಅವ್ಯವಹಾರದಂತ ಪ್ರಕರಣಗಳು ಗಮನಕ್ಕೆ ಬಂದರೆ ಯಾವುದೇ ಪಕ್ಷದ ನಾಯಕರಿರಲಿ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಗೋಷ್ಠಿಯಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಜಂಗರ, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ನಾಯಕ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವೆಂಕಟೇಶ ಬಾಬು, ಆನೆಗೊಂದಿ ಘಟಕದ ಅಧ್ಯಕ್ಷ ನಾಗರಾಜ ಗೂಗಿಬಂಡೆ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.