ಭಾನುವಾರ, ಏಪ್ರಿಲ್ 11, 2021
25 °C

ಸಮಾಜ ಕಟ್ಟುವ ಕಾರ್ಯವಾಗಲಿ: ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಭಾರತೀಯ ವಿಚಾರ ಪ್ರತಿಬಿಂಬಿಸುವ ಸುಸಂಸ್ಕೃತ ವ್ಯಕ್ತಿಗಳ ಸಂಘಟಿತ ಪ್ರಯತ್ನದಿಂದ ಸಮಾಜ ಕಟ್ಟುವ ಕಾರ್ಯ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

 

ಅವರು ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಕೆ.ಎಸ್.ನಾರಾಯಣಾಚಾರ್ಯರ ಕೃತಿಗಳ ವಿಚಾರ ಸಂಕಿರಣ ಉದ್ಘಾಟಿಸಿ, `ಸುಭಾಷರ ಕಣ್ಮರೆ-ಅನ್ಯಾಯದ ಅಧ್ಯಾಯ~, `ಶ್ರೀರಾಮ ಜನ್ಮಭೂಮಿ ತೀರ್ಪು~ ಕೃತಿ ಬಿಡುಗಡೆ ಮಾಡಿ  ಮಾತನಾಡಿದರು.`ನಮಗೆ ಆಡಳಿತ ಚುಕ್ಕಾಣಿಯಲ್ಲಿ ಮಾತ್ರ ಸ್ವಾತಂತ್ರ್ಯ ದೊರತಿದೆ. ಸ್ವಾತಂತ್ರ್ಯ ಬಂದರೂ ಗುಲಾಮಿತನದ ಮಾನಸಿಕತೆ ಬದಲಾಗಿಲ್ಲ. ಹೀಗಾಗಿ ಭಾರತೀಯ ತತ್ವ, ಸಿದ್ಧಾಂತಕ್ಕೆ ದೇಶದಲ್ಲಿ ಬೆಂಬಲ ಸಿಗುತ್ತಿದೆಯಾ ಎಂದು ಪರಾಮರ್ಶಿಸಿಕೊಳ್ಳಬೇಕಾಗಿದೆ ಎಂದರು. `ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮಾ ಗಾಂಧೀಜಿ ನೇತೃತ್ವ ಕೊಟ್ಟಿರಬಹುದು, ಅವರ ಸರಳ ವ್ಯಕ್ತಿತ್ವ, ಮಾಧ್ಯಮದ ಪ್ರಭಾವದಿಂದ ಅವರು ಹೆಸರು ಪಡೆದಿರಬಹುದು. ನಿಜವಾಗಿ ಬ್ರಿಟಿಷರನ್ನು ಹೆದರಿಸಿದ್ದು ಸುಭಾಷ್‌ಚಂದ್ರ ಭೋಸರ ಹೋರಾಟವಾಗಿತ್ತು~ ಎಂದು ಹೇಳಿದರು. ಕೆ.ಎಸ್.ನಾರಾಯಣಾಚಾರ್ಯ ಪ್ರಖರ ರಾಷ್ಟ್ರೀಯವಾದಿಗಳಾಗಿ ನಿರ್ಭಿಡೆಯಿಂದ ತಮ್ಮ ವಿಚಾರಗಳನ್ನು ಸಮಾಜದ ಮುಂದೆ ಪ್ರಸ್ತುತಪಡಿಸುತ್ತಾರೆ.ಯುವ ಪೀಳಿಗೆಯಲ್ಲಿ ನಮ್ಮತನ ಜಾಗೃತಗೊಳಿಸಲು ಇಂತಹ ವಿಚಾರಗಳ ಅಗತ್ಯವಿದೆ. ಸಮಾಜದ ಸುಶಿಕ್ಷಿತ ವ್ಯಕ್ತಿಗಳು ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಸಾಮಾಜಿಕ ಜವಾಬ್ದಾರಿಗೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.`ಉದಕ ತತ್ವ ನಿರೂಪಣೆಯಲ್ಲಿ ಆಚಾರ್ಯರ ವೈಶಿಷ್ಟ್ಯ~ ಕುರಿತು ಜಿ.ಎನ್.ಭಟ್ಟ ಮಂಗಳೂರು, `ಆಚಾರ್ಯರ ರಾಮಗುಣ ನಿರೂಪಣೆಯಲ್ಲಿ ರಾಮಾಯಣ ಪ್ರದಕ್ಷಿಣೆ~ ಕುರಿತು ಎಂ.ಎ.ಹೆಗಡೆ ದಂಟಕಲ್, `ಆಚಾರ್ಯರ ಕಾದಂಬರಿಗಳ ಒಡಲಲ್ಲಿ ಪದ್ಯಗಳ ಕಡಲು~ ಕುರಿತು ಕಬ್ಬಿನಾಲೆ ವಸಂತ ಭಾರದ್ವಾಜ, `ಆಚಾರ್ಯರ ರಾಷ್ಟ್ರೀಯ ಚಿಂತನೆಗಳಲ್ಲಿ ಬೆರಗಾಗಿಸುವ ವಿಷಯ ವೈವಿಧ್ಯ~ ಕುರಿತು ಗ.ನಾ.ಭಟ್ಟ ಮೈಸೂರು ಮಾತನಾಡಿದರು. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವರಾಂ ಕೆ.ವಿ. ಸ್ವಾಗತಿಸಿದರು. ಡಾ.ಕೃಷ್ಣಮೂರ್ತಿ ರಾಯ್ಸದ, ರಮಾ ಪಟವರ್ಧನ ಕಾರ್ಯಕ್ರಮ ನಿರೂಪಿಸಿದರು.`ಕಾರ್ನಾಡ್ ಟೀಕೆ ಸಲ್ಲ~


ಶಿರಸಿ: `ವಿ.ಎಸ್. ನೈಪಾಲರಿಗೆ ನೊಬೆಲ್ ಪಾರಿತೋಷಕ ತಂದು ಕೊಟ್ಟ ಕೃತಿಯನ್ನು ಸರಿಯಾಗಿ ಓದದೇ ನಾಟಕಕಾರ ಗಿರೀಶ ಕಾರ್ನಾಡ್ ಕೆಂಡಕಾರಿದ್ದಾರೆ. ಯಾವುದೇ ಕೃತಿಯನ್ನು ಆಳವಾಗಿ ಓದದಿದ್ದರೆ ರಾವಣ ರಾಮಾಯಣ ಓದಿದಂತೆ ಆಗುತ್ತದೆ~ ಎಂದು ಹಿರಿಯ ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ ಮಾರ್ಮಿಕವಾಗಿ ನುಡಿದರು.ತಮ್ಮ ಕೃತಿಗಳ ಕುರಿತು ವಿಮರ್ಶಕರು ಮಾತನಾಡಿದ ನಂತರ ಅವರು ಮಾತನಾಡಿ, `ಭಾರತ ದೇಶದ ಸಂಪರ್ಕ ಕಡಿದುಕೊಂಡರೂ ಭಾರತೀಯತೆ ಉಳಿಸಿಕೊಂಡ ನೈಪಾಲ್ ಅವರನ್ನೂ, ಇದೇ ದೇಶದಲ್ಲಿ ಇದ್ದೂ ಪರಕೀಯರಾದ ಕಾರ್ನಾಡ್ ಅವರನ್ನು ತುಲನೆ ಮಾಡಿ ನೋಡಬೇಕಾಗಿದೆ~ ಎಂದು ಹೇಳಿದರು. `ತನ್ನ ಕೃತಿಗಳನ್ನು ಅರ್ಥೈಸಿಕೊಂಡ ಓದುಗ ಮತ್ತು ವಿಮರ್ಶಕ ದೊರೆತಾಗ ಒಬ್ಬ ಸಾಹಿತಿ ಧನ್ಯತೆ ಕಾಣುತ್ತಾನೆ. ಹಿರಿಯ ಸಾಹಿತಿ ಬೇಂದ್ರೆ ಅವರಿಗೆ ಈ ಅವಕಾಶ ದೊರೆತಿಲ್ಲ. ಅದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟಿದ್ದರು. ಬೇಂದ್ರೆಯವರ ದೂರ್ವಾಸನ ಸ್ವಭಾವಕ್ಕೆ ಅಂಜಿ ಅವರ ಜೀವಿತಾವಧಿಯಲ್ಲಿ ಕೃತಿ ವಿಮರ್ಶೆ ಮಾಡಿಲ್ಲ. ಈ ಬಗ್ಗೆ ನನಗೆ ಈಗಲೂ ಪಶ್ಚಾತ್ತಾಪವಿದೆ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.