ಶನಿವಾರ, ಮೇ 15, 2021
29 °C

ಸಮಾಜ ಮುಖಿ ಕಾರ್ಯಕ್ಕೆ ಮಹಿಳೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲತೆ ಕಾಣುವ ಜತೆಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್ ಸಲಹೆ ನೀಡಿದರು.ತಾಲ್ಲೂಕಿನ ಮದಕರಿಪುರದ ಸಮುದಾಯ ಭವನದಲ್ಲಿ ಈಚೆಗೆ ಗ್ರೀನ್ ಫೌಂಡೇಷನ್ ಸಂಸ್ಥೆ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಆಯೋಜಿಸಿದ್ದ ಕೇಂದ್ರ ಸರ್ಕಾರದ ಮಹಿಳಾ ಕಿಸಾನ್ ಸಬಲೀಕರಣ ಪ್ರಾಯೋಗಿಕ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಯೋಜನೆ ಜಾರಿಗೆ ತಂದಿದ್ದು, ಅದರಲ್ಲಿ ಕಿಸಾನ್ ಸಬಲೀಕರಣ ಕಾರ್ಯಕ್ರಮ ಒಂದಾಗಿದೆ. ಇದರಲ್ಲಿ ಮಹಿಳೆಯರ ಆರೋಗ್ಯ, ಸಾವಯವ ಕೃಷಿ ಮತ್ತು ನಮ್ಮ ಹಳೆಯ ತಳಿಗಳನ್ನು ಉಳಿಸಿ ಬೆಳಸಬೇಕಿದೆ ಎಂದರು.ಜಿ.ಪಂ. ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ, ಕೃಷಿಯಲ್ಲಿ ತೊಡಗಿರುವ ಗ್ರಾಮೀಣ ಮಹಿಳೆಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಆರೋಗ್ಯ, ಸಾವಯವ ಕೃಷಿ, ಹಳೇ ನಾಟಿ ತಳಿಗಳ ಸಂರಕ್ಷಣೆ ಮಾಡುವುದು, ಬಿದ್ದ ಮಳೆಯ ನೀರು ಇರುವಲ್ಲಿಯೇ ಇಂಗುವಂತೆ ಮಾಡುವುದು, ಪೌಷ್ಟಿಕಾಂಶವುಳ್ಳ ತರಕಾರಿ ಬೆಳೆಸುವುದು, ಹಣ್ಣು ಗಿಡಗಳನ್ನು ಹಾಕುವುದು, ಈ ಭಾಗದ ಪ್ರಾಣಿ ಸಂಪತ್ತು ವೃದ್ಧಿಸುವ ತರಬೇತಿ ನೀಡಲು ಸಂಸ್ಥೆ ಮುಂದಾಗಿದೆ ಎಂದು ವಿವರಿಸಿದರು.ಗ್ರೀನ್ ಫೌಂಡೇಷನ್‌ನ ಸಮನ್ವಯ ಅಧಿಕಾರಿ ರುಕ್ಕಮ್ಮ ಮಹಾಂತೇಶ್ ಮಾತನಾಡಿ, ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ ಹೋಬಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 3,225 ಮಹಿಳೆಯರು ಮಹಿಳೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.ಗ್ರಾ.ಪಂ. ಸದಸ್ಯ ಕಸ್ತೂರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಪಾರ್ವತಮ್ಮ, ತಿಪ್ಪೇಸ್ವಾಮಿ, ಅನ್ನಪೂರ್ಣಮ್ಮ, ಮಲ್ಲೇಶ್ ಇತರರು ಹಾಜರಿದ್ದರು. ಸಂಸ್ಥೆಯ ಏರಿಯಾ ಮ್ಯಾನೇಜರ್ ಅಂಬುಜಾ ಸ್ವಾಗತಿಸಿ ನಿರೂಪಿಸಿದರು.ಮಕ್ಕಳಿಗೆ ಸಂಸ್ಕಾರ ಕಲಿಸಿ

ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಯುವ ಸಮುದಾಯ ಮುಂದಾಗಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಕರೆ ನೀಡಿದರು. ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಶಾರಾಮಜಿ ಬಾಪು ಸೇವಾ ಸಮಿತಿ ವತಿಯಿಂದ  ಆಯೋಜಿಸಿದ್ದ ಬಾಲಸಂಸ್ಕಾರ ಸಿಂಚನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಮತ್ತು ಯುವಜನರಿಗೆ ಸಂಸ್ಕಾರ ಕಲಿಸಿಕೊಡುವ ಅಗತ್ಯವಿದೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನ, ಆಸನ, ಪ್ರಾಣಯಾಮ, ಧ್ಯಾನ, ತ್ರಾಟಕ, ಸೂರ್ಯ ನಮಸ್ಕಾರ, ಯೌವನ ಸುರಕ್ಷೆ ಸೇರಿದಂತೆ ವಿವಿಧ ಕ್ರಿಯೆಗಳನ್ನು ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಅರಿವು ಮೂಡಿಸಬೇಕಿದೆ ಎಂದು ನುಡಿದರು.ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸುರೇಶ್‌ರಾಜು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಪೋಷಕರು ಮತ್ತು ಗುರುಹಿರಿಯರನ್ನು ಗೌರವಿಸುವುದು ಮತ್ತು ದೇಶಿಯ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು. ಯಶೋಧಾ, ಡಾ.ಜಯಮ್ಮ, ಸಂಸ್ಥೆ ಖಜಾಂಚಿ ವೆಂಕಟರಾಮ್, ಕಾರ್ಯದರ್ಶಿ ಸುರೇಶ್‌ಬಾಬು, ನಗರಸಭೆ ಸದಸ್ಯ ರಾಜ್‌ಕುಮಾರ್ ಇತರರು ಹಾಜರಿದ್ದರು.29ಕ್ಕೆ ಸುವರ್ಣ ಮಹೋತ್ಸವ

ತಾಲ್ಲೂಕಿನ ದೇವಪುರದಹಟ್ಟಿಯ ಬಾಲಾಜಿ ಬಾವಾಜಿ ದೇವಸ್ಥಾನದಲ್ಲಿ ಏ. 29ರಿಂದ ಮೇ 1ರವರೆಗೆ ಲಕ್ಷ್ಮೀವೆಂಕಟೇಶ್ವರ ಸ್ವಾಮೀಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ ಹಾಗೂ ರಾಜಗೋಪುರ ಮಹಾ ಕುಂಭಾಬೀಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.29ರಂದು ಕಳಶಸ್ಥಾಪನೆ, 30ರಂದು ಕಲ್ಯಾಣೋತ್ಸವ, ಅಭಿಷೇಕ, ಮೇ 1ರಂದು ರಾಜಗೋಪುರದ ಕುಂಭಾಬೀಷೇಕ ನಡೆಯಲಿದ್ದು, ಅದೇದಿನ ಸಂಜೆ 5ಕ್ಕೆ ಬ್ರಹ್ಮರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.