ಶುಕ್ರವಾರ, ಮೇ 14, 2021
31 °C

ಸಮಾಜ ಸುಧಾರಕರೊಂದಿಗೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಅಸ್ಪೃಶ್ಯತೆ ಹಾಗೂ ಅಸಮಾನತೆ ನಿವಾರಣೆಗೆ ಸಾವಿರ ವರ್ಷಗಳ ಹಿಂದೆಯೇ ಹೋರಾಟ ನಡೆಸಿದ ಕ್ರಾಂತಿಕಾರಿ ಬಸವಣ್ಣನವರ ಆದರ್ಶ ಪಾಲಿಸಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದರು.ತಾಲೂಕು ಆಡಳಿತ, ಬಸವೇಶ್ವರ ಯುವಕ ಸಂಘ, ವೀರಶೈವ ಸಮಾಜ, ಅಕ್ಕನಬಳಗ, ಸೋಮವಾರಪೇಟೆ ಬಸವೇಶ್ವರ ದೇವಾಲಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ದೇವಾಲಯದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.ಇಂದು ಅಣ್ಣಾ ಹಜಾರೆಯಂಥವರು ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಮಾಜ ಸುಧಾರಕರ ಜೊತೆ ಕೈಜೋಡಿಸಿ ಬಲಿಷ್ಠ ಭಾರತ ನಿರ್ಮಿಸಲು ಮುಂದಾಗೋಣ ಎಂದು ಕರೆ ನೀಡಿದರು. 

ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸೌಮ್ಯ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಕೆ.ಎಸ್.ಉತ್ತಪ್ಪ, ಸಿ.ಎಸ್.ವಿನುತ ಹಾಗೂ ಪಿ.ಕೆ.ಕಾವ್ಯ ಅವರನ್ನು ಗೌರವಿಸಲಾಯಿತು.

 

ಆರೋಗ್ಯ ಇಲಾಖೆಯ ಬಿ.ಪಿ.ಮೀನಾಕ್ಷಿ ಮತ್ತು ನಿವೃತ್ತ ಮೇಜರ್ ಮಂದಣ್ಣರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನಿಮಿತ್ತ ನಡೆಸಿದ ನಡಿಗೆ ಸ್ಪರ್ಧೆ, ರಂಗೋಲಿ , ಛದ್ಮವೇಷ ಮತ್ತು ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ಉದ್ಘಾಟಿಸಿದರು. ವಿರಕ್ತಮಠದ ವಿಶ್ವೇಶ್ವರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಡಿ.ಎಸ್.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.  ತಹಶೀಲ್ದಾರ್ ಕೆ.ಎಸ್.ಭಾಸ್ಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಮೂರ್ತಿ, ವೀರಶೈವ ಸಮಾಜದ ಯಜಮಾನ ಕೆ.ಸಿ.ಹರೀಶ್ ಇತರರು ಇದ್ದರು. ಬೆಳಿಗ್ಗೆ 6ಕ್ಕೆ ವಿರಕ್ತ ಮಠದಿಂದ ಪ್ರಭಾತಫೇರಿಯಲ್ಲಿ ಹೊರಟು ಕಕ್ಕೆಹೊಳೆ ಸಮೀಪದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.ಬಸವಜಯಂತಿ: ಮೆರವಣಿಗೆ

ಕುಶಾಲನಗರ:
ಇಲ್ಲಿಯ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿ ಅಂಗವಾಗಿ ಮಂಗಳವಾರ ಸಂಜೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ವಿದ್ಯುತ್ ಅಲಂಕೃತ ಮಂಟಪದಲ್ಲಿ ಬಸವೇಶ್ವರ ಭಾವಚಿತ್ರವನ್ನಿಟ್ಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.ಪಟ್ಟಣದ ಬೈಚನಹಳ್ಳಿಯ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆಗೆ ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಚಾಲನೆ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಎನ್.ಎನ್.ಶಂಭುಲಿಂಗಪ್ಪ, ಸಮಾಜದ ಅಧ್ಯಕ್ಷ ಎಚ್.ಎಸ್.ರೇವಪ್ಪ, ಗೌರವಾಧ್ಯಕ್ಷ ಎಂ.ಬಿ.ಬಸವರಾಜ್, ಮಾಜಿ ಅಧ್ಯಕ್ಷ ಕೆ.ಸಿ.ನಂಜುಂಡಸ್ವಾಮಿ,  ಕಾರ್ಯದರ್ಶಿ ಕೆ.ಎಸ್.ಮೂರ್ತಿ ಇತರರು ಇದ್ದರು.ಬಸವ ಜಯಂತಿ ಅಂಗವಾಗಿ ಏ.28 ರಂದು ಇಲ್ಲಿಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ.ಜಾನುವಾರು ಮೆರವಣಿಗೆ

ಕುಶಾಲನಗರ: ಸಮೀಪದ ತೊರೆನೂರು ಗ್ರಾಮದಲ್ಲಿ ಮಂಗಳವಾರ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಜಾನುವಾರು ಮೆರವಣಿಗೆ ಗಮನ ಸೆಳೆಯಿತು.

ಎತ್ತಿನ ಗಾಡಿಯಲ್ಲಿ ಬಸವೇಶ್ವರರ ಭಾವಚಿತ್ರವನ್ನಿಟ್ಟು, ಅಲಂಕೃತ ಜಾನುವಾರುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದರು.ವೀರಶೈವ ಸಮಾಜದ ಅಧ್ಯಕ್ಷ ಟಿ.ಜೆ.ಸಿದ್ದಪ್ಪ, ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಟಿ.ಜಿ.ಪ್ರೇಮಕುಮಾರ್,   ಟಿ.ಬಿ.ಬಸವರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಬಿ.ಜಗದೀಶ್, ಎಚ್.ಬಿ.ಚಂದ್ರಪ್ಪ, ಟಿ.ಎಂ.ಲಿಂಗರಾಜು, ಟಿ.ವಿ.ಶಿವಣ್ಣ ಮೊದಲಾದವರು ಇದ್ದರು.`ವಚನಗಳ ಸಾರ್ವಭೌಮ ಬಸವಣ್ಣ~

ವಿರಾಜಪೇಟೆ: ವಚನಗಳನ್ನು ಸಾಮಾನ್ಯ ಮನುಷ್ಯನಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ ರಚಿಸಿ ಸಮಾಜ ಸುಧಾರಣೆಗೆ ಕಾರಣರಾದ ಕ್ರಾಂತಿಕಾರಿ ಬಸವಣ್ಣ ವಚನಗಳ ಸಾರ್ವಭೌಮರು ಎಂದು ವಿರಾಜಪೇಟೆ ತಾಲೂಕು ವೀರಶೈವ ಸಮಾಜದ ಪ್ರಮುಖ ಕೆ.ಬಿ.ಹೇಮಚಂದ್ರ ಹೇಳಿದರು.ವಿರಾಜಪೇಟೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ  ಉದ್ಘಾಟಿಸಿ ಅವರು ಮಾತನಾಡಿದರು. ತಹಶೀಲ್ದಾರ್ ಹನುಮಂತಯ್ಯ, ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಕೆ.ಎನ್.ಸಂದೀಪ್, ಸಮಾಜದ ಉಪಾಧ್ಯಕ್ಷ          ಎಸ್.ಜಿ.ಮರಿಸ್ವಾಮಿ, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ರೆವಿನ್ಯೂ ಸಿಬ್ಬಂದಿ ತಿರುವೆಂಕಟರಮಣ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.