ಸಮಾನತೆ ಕನಸನ್ನು ಮತ್ತೆ ಕಾಣುತ್ತಾ...

7

ಸಮಾನತೆ ಕನಸನ್ನು ಮತ್ತೆ ಕಾಣುತ್ತಾ...

Published:
Updated:

ಮೈಸೂರು: ಅದು ಏಪ್ರಿಲ್ 14, 2012. ಅಂದು ಅಂಬೇಡ್ಕರ್ ಜಯಂತಿ. ಈ ಸಂದರ್ಭದಲ್ಲಿ ನಾಡಿನ ವಿಶ್ವಾಸರ್ಹ ದಿನಪತ್ರಿಕೆ `ಪ್ರಜಾವಾಣಿ' `ಸಮಾನತೆ ಕನಸನ್ನು ಮತ್ತೆ ಕಾಣುತ್ತಾ...' ವಿಶೇಷ ಸಂಚಿಕೆಯನ್ನು ಹೊರತಂದಿತ್ತು.ಡಿ. 6, 2012 ರಂದು ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ. ಈ ದಿನ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಶಾಖೆಯು `ಸಮಾನತೆ ಕನಸನ್ನು ಮತ್ತೆ ಕಾಣುತ್ತಾ...' ಪುಸ್ತಕವನ್ನು ಬಿಡುಗಡೆಗೊಳಿಸಿತು.ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಗುರುವಾರ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ 2 ಸಾವಿರಕ್ಕೂ ಹೆಚ್ಚು ದಲಿತರು ಹಾಜರಿದ್ದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಮಹಿಳೆಯರು, ಯುವತಿಯರೂ ಸಹ ಆಗಮಿಸಿದ್ದರು. ಅವರೆಲ್ಲರ ಹಂಬಲ ಒಂದೇ ಆಗಿತ್ತು; ಅದು ಸಮಾನತೆ.`ಸಮಾನತೆ ಕನಸನ್ನು ಮತ್ತೆ ಕಾಣುತ್ತಾ...' ಪುಸ್ತಕವನ್ನು ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಶಾಖೆಯು ಹೊರತಂದಿದೆ.

ದಲಿತ ಮುಖಂಡ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ `ಪ್ರಜಾವಾಣಿ' ಐತಿಹಾಸಿಕ ಮತ್ತು ಅಸಾಮಾನ್ಯ ಹೆಜ್ಜೆಯನ್ನು ಇಟ್ಟಿದೆ. `ಪ್ರಜಾವಾಣಿ'ಯು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದು, ಇಂಥ ಪ್ರಯತ್ನ ಮಾಡಲು ಸಾಧ್ಯವಾಯಿತು ಎಂದು ಶ್ಲಾಘಿಸಿದರು.ಆಂದೋಲನ ದಿನಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, `ಪ್ರಜಾವಾಣಿ' ಪತ್ರಿಕೆ ಇಂತಹ ಅಪರೂಪದ ಸಂಚಿಕೆಯನ್ನು ರೂಪಿಸುವ ಮೂಲಕ ನನ್ನಲ್ಲಿ ಪ್ರೀತಿಯ ಮತ್ಸರವನ್ನು ಉಂಟು ಮಾಡಿತು. ದಲಿತರ ಲೋಕವನ್ನು ಅನಾವರಣಗೊಳಿಸಿದ `ಪ್ರಜಾವಾಣಿ' ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.ರಾಜ್ಯ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ಅಧಿಕಾರಿ ಡಾ.ಎಸ್.ತುಕಾರಾಂ ಮಾತನಾಡಿ, ನಾನು ಅಂದಿನ ಸಂಚಿಕೆಯನ್ನು ಓದುತ್ತಾ ಊರು, ಕೇರಿ, ದೇಶವನ್ನು ಮೀರಿ ಅನಿಕೇತನವಾಗಿಬಿಟ್ಟೆ ಎಂದು ಭಾವುಕರಾಗಿ ಹೇಳಿದರು. ಜಿಲ್ಲಾ ದಸಂಸ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry