ಭಾನುವಾರ, ಮೇ 22, 2022
24 °C

ಸಮಾನ ಕೆಲಸಕ್ಕೆ ಸಮಾನ ವೇತನ ಎಲ್ಲಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾನ ಕೆಲಸಕ್ಕೆ ಸಮಾನ ವೇತನ ಎಲ್ಲಿದೆ?

‘ಅಂಗನವಾಡಿ ಉದ್ಯೋಗಿಗಳು ತಮ್ಮ ಕೆಲಸವನ್ನು ತಾವೇ ಸ್ವಯಂ ಸ್ಫೂರ್ತಿಯಿಂದ ಸಮಾಜ ಸೇವೆ ಎಂದು ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಇವರಿಗೆ ಗೌರವಧನ ಕೊಟ್ಟು ಪುರಸ್ಕರಿಸುತ್ತಿದೆ’ ಇದು ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ನೀಡಿದ ಹೇಳಿಕೆ! ಕರ್ನಾಟಕ ರಾಜ್ಯದ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಈ ಉದ್ಯೋಗಿಗಳನ್ನು ಸರ್ಕಾರದ ಖಾಯಂ ನೌಕರರೆಂದು ಪರಿಗಣಿಸಿ ಅವರಿಗೆ ಸರ್ಕಾರಿ ನೌಕರರಿಗೆ ನೀಡುವ ವೇತನ ಮತ್ತಿತರ ಸೌಲಭ್ಯ ನಿಗದಿಮಾಡಬೇಕೆಂದು ಆದೇಶಿಸಿದ ವಿವಾದವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಒಯ್ದ ಸಂದರ್ಭದಲ್ಲಿ ಈ ‘ಸ್ವಯಂ ಸೇವೆ ಮತ್ತು ಗೌರವಧನ’ ವಾದ ಮಾಡಿ ಗೆದ್ದುಬಿಟ್ಟಿತು.1980ರ ದಶಕದ ಆರಂಭದ ವರ್ಷಗಳಲ್ಲಿ ದೇಶಾದ್ಯಂತ ಹಂತ ಹಂತವಾಗಿ ಪ್ರಾರಂಭಿಸಲಾದ ಅಂಗನವಾಡಿ ಕೇಂದ್ರಗಳಲ್ಲಿ ಕೇವಲ 150 ರೂಪಾಯಿಗಳ ಮಾಸಿಕ ವೇತನದ (ಇದೀಗ ಗೌರವಧನ) ಕೆಲಸಕ್ಕೆ ಬಡ ಕುಟುಂಬಗಳ ಹೆಣ್ಣುಮಕ್ಕಳು ಸೇರಿಕೊಂಡರು. ನಂತರದ ದಿನಗಳಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಬದುಕಿನ ಭದ್ರತೆಗಾಗಿ ಸಂಘಟಿತರಾಗಿ ಸರ್ಕಾರದ ಮುಂದೆ ಬೇಡಿಕೆ ಮಂಡಿಸಲಾರಂಭಿಸಿದರು. ಎರಡು ಮೂರು ವರ್ಷಕ್ಕೊಮ್ಮೆ 100-200 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಮಂಡಿಸುತ್ತಿದ್ದ ಅವರು ‘ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ’ದ ಮೂಲಕ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋದರು.ಆಗ ಕಂಡ ಮೊದಲ ಗೆಲುವು  ಇಡೀ ದೇಶದ ಲಕ್ಷಾಂತರ ಅಂಗನವಾಡಿ ಉದ್ಯೋಗಿಗಳಲ್ಲಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಖಾಸಗಿ ವ್ಯಕ್ತಿ- ಕಂಪೆನಿಗಳಿಂದ ಸರ್ಕಾರಕ್ಕೆ ಕೋಟ್ಯಂತರ ನಷ್ಟ ಉಂಟಾಗುವ ಅದೆಷ್ಟು ಹಗರಣಗಳ ವಿವಾದದಲ್ಲಿ ನ್ಯಾಯಾಲಯಗಳಿಗೆ ಸಕಾಲಕ್ಕೆ ಸೂಕ್ತ ಮಾಹಿತಿ ನೀಡದೆ ವಾದ ಮಂಡಿಸಲು ನಿರಾಸಕ್ತಿ ತೋರಿದ ಉದಾಹರಣೆ ಹೊಂದಿರುವ ಅಧಿಕಾರಿಗಳು ಈ ಬಡಪಾಯಿ ಮಹಿಳಾ ಉದ್ಯೋಗಿಗಳ ವಿರುದ್ಧ ಓಡೋಡಿ ಹೋಗಿ ಕೇವಲ ಮೂರು ವಾರದೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದು ಸರ್ಕಾರದ ಪೂರ್ವಗ್ರಹ ಪೀಡಿತ ಧೋರಣೆಗೆ ಒಂದು ಉತ್ತಮ ಉದಾಹರಣೆ.ದೇಶಾದ್ಯಂತ ಒಟ್ಟು 21 ಲಕ್ಷಕ್ಕೂ ಅಧಿಕ ಸಂಖ್ಯೆಯ ಈ ಮಹಿಳಾ ಉದ್ಯೋಗಿಗಳನ್ನು ಖಾಯಂಗೊಳಿಸಿದಲ್ಲಿ ಸರ್ಕಾರಿ ಬೊಕ್ಕಸಕ್ಕೆ ಭರಿಸಲಾಗದ ಹೊರೆಯಾಗುತ್ತದೆ.. ಇತ್ಯಾದಿ ಅಸಮರ್ಥನೀಯ ವಾದ ಮಂಡಿಸಿ ಕೇವಲ ತಾಂತ್ರಿಕ ತೊಡಕಿನ ನೆಪ ಒಡ್ಡಿ ಸರ್ಕಾರ ತನ್ನ ಪರ ತೀರ್ಪು ಪಡೆದು ನಿಟ್ಟುಸಿರು ಬಿಟ್ಟಿತ್ತು. ಅಂದಿನಿಂದ ದೇಶಾದ್ಯಂತ  ಅಂಗನವಾಡಿ ಉದ್ಯೋಗಿಗಳ ಹೋರಾಟ ದಿನದಿಂದ ದಿನಕ್ಕೆ ತೀವ್ರಸ್ವರೂಪ ಪಡೆಯುತ್ತಿದೆ. ಒಂದೆಡೆ ಖಾಸಗೀಕರಣದ ಸರ್ಕಾರಿ ಹುನ್ನಾರದ ವಿರುದ್ಧ, ಇನ್ನೊಂದೆಡೆ ಉದ್ಯೋಗ ಭದ್ರತೆ ಮತ್ತು ನಿವೃತ್ತಿವೇತನ ಮೊದಲಾದ ಸೌಲಭ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿರುದ್ಧ ಏಕ ಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ.ಸಮಾಜ ಕಲ್ಯಾಣ ಯೋಜನೆಗಳ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹೆಸರಲ್ಲಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ನಿರ್ದಿಷ್ಟ ವಿದ್ಯಾರ್ಹತೆ ನಿಗದಿಮಾಡಿ ಗರಿಷ್ಠ ಅಂಕಗಳ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಿ ಅಂಗನವಾಡಿ ಕಾರ್ಯ ನಿರ್ವಹಣೆಯ ತರಬೇತಿ ನೀಡಲಾಗುತ್ತದೆ. ಗೈರು ಹಾಜರಿಗೆ ವೇತನ ಕಡಿತಗೊಳಿಸಲಾಗುತ್ತದೆ. ದೂರು ಮತ್ತು ಕರ್ತವ್ಯ ಲೋಪದ ಬಗ್ಗೆ ಇಲಾಖಾ ತನಿಖೆ ನಡೆಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆಲಸದ ವೇಳೆ ನಿಗದಿ ಮಾಡಲಾಗಿದೆ. ಸರ್ಕಾರಿ ರಜೆ, ಸಾಂದರ್ಭಿಕ ರಜೆ, ವರ್ಗಾವಣೆ ಇತ್ಯಾದಿಗಳಲ್ಲಿ ಸರ್ಕಾರಿ ನೌಕರರ ನಿಯಮಗಳನ್ನೇ ಅನ್ವಯಿಸಲಾಗುತ್ತಿದೆ. ವರ್ಷವಿಡೀ ಕೆಲಸ ಇರುವುದರಿಂದ ಇದು ತಾತ್ಕಾಲಿಕ ಸ್ವರೂಪದ ಕೆಲಸವೂ ಅಲ್ಲ. ಶಾಲಾ ಪೂರ್ವ ಶಿಕ್ಷಣವಾದ ಎಲ್‌ಕೆಜಿ, ಯುಕೆಜಿ ಮಾದರಿಯಂತೆ ಅಂಗನವಾಡಿಗಳಲ್ಲಿ ಆಟ ಪಾಠಗಳಿವೆ. ಇದೆಲ್ಲವನ್ನೂ ಗಮನಿಸಿದಾಗ ಇದೊಂದು ಖಾಯಂ ಸ್ವರೂಪದ ಉದ್ಯೋಗವಾಗಿದ್ದು ನಿರಂತರವಾಗಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಲಕ್ಷಣಗಳನ್ನು ಹೊಂದಿರುತ್ತದೆ. ಜೊತೆಗೆ ಕ್ಷಯ, ಕುಷ್ಠರೋಗ ನಿವಾರಣಾ ಪ್ರಚಾರ, ಕುಟುಂಬ ಯೋಜನೆ ಪ್ರಚಾರ, ಪೋಲಿಯೋದಂತಹ ಕೆಲವು ಲಸಿಕೆ, ಇಮ್ಯೂನೈಜೇಷನ್‌ಗಳಲ್ಲದೆ ಭಾಗ್ಯಲಕ್ಷ್ಮಿ ಬಾಂಡ್, ಸೀರೆ ಹಂಚಿಕೆಗಳವರೆಗೆ ಹತ್ತಾರು ಇಲಾಖೆಯ ತಳಹಂತದ ಸಮೀಕ್ಷಾ ಕಾರ್ಯಗಳನ್ನು ಮಾಡಬೇಕಾಗಿದೆ. ಇಷ್ಟೆಲ್ಲ ಆದರೂ ಅವರ ಉದ್ಯೋಗ ‘ಗೌರವಧನದ ಸ್ವಯಂ ಸೇವೆ’ ಎಂಬ ನಿಲುವು ಅಸಮರ್ಥನೀಯ.ಸರ್ಕಾರ ಸದ್ಯಕ್ಕೆ 500- 250 ರೂಪಾಯಿಗಳ ವೇತನ ಹೆಚ್ಚಿಸಿದ್ದು ಬೆಳಗ್ಗೆ 10 ರಿಂದ ಸಂಜೆ ನಾಲ್ಕರ ವರೆಗೆ ಕೆಲಸದ ಅವಧಿಯನ್ನು ವಿಸ್ತರಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಕನಿಷ್ಠ ಕೂಲಿ ದರ ದಿನಕ್ಕೆ 125 ರೂಪಾಯಿಗಳೆಂದು ನಿಗದಿಯಾಗಿದ್ದು, ಅದೇ ಮಾನದಂಡವನ್ನು ಅಂಗನವಾಡಿ ಉದ್ಯೋಗಿಗಳಿಗೆ ಅನ್ವಯಿಸುತ್ತಿಲ್ಲ. ಮಾತ್ರವಲ್ಲ, ಹತ್ತನೇ ತರಗತಿ ಪಾಸಾದವರ ಮತ್ತು ಫೇಲಾದವರ ನಡುವೆಯೂ ವೇತನ ತಾರತಮ್ಯವಿದೆ. ಇದಲ್ಲದೆ ಮಿನಿ ಅಂಗನವಾಡಿಗಳೆಂಬ ಹೊಸ ಕೇಂದ್ರಗಳನ್ನು ತೆರೆದು, ಅಲ್ಲಿ ಕೇವಲ ಸಾವಿರ ರೂಪಾಯಿಗಳ ವೇತನ ನಿಗದಿಗೊಳಿಸಲಾಗಿದೆ. ಕಾರ್ಯಕರ್ತೆಯರಿಗೆ ಹೆರಿಗೆ ಭತ್ಯೆ ನೀಡಿದರೂ ಸಹ ಅವರ ಸಹೋದ್ಯೋಗಿಯಾಗಿರುವ ಸಹಾಯಕಿಯರಿಗೆ ಈ ಭತ್ಯೆ ಇಲ್ಲ. ರಾಜ್ಯದಿಂದ ರಾಜ್ಯಕ್ಕೆ ಗೌರವಧನದಲ್ಲಿ ಮತ್ತು ಸೌಲಭ್ಯಗಳಲ್ಲಿ ವ್ಯತ್ಯಾಸವಿದೆ.  ಕೇರಳದಲ್ಲಿ ನಿವೃತ್ತಿವೇತನ ನಿಗದಿಯಾಗಿದ್ದರೆ ಉಳಿದೆಡೆ ಇಲ್ಲ. ಕೇಂದ್ರಾಡಳಿತ ಪ್ರದೇಶಗಳಲ್ಲಿ 4 ರಿಂ! 6 ಸಾವಿರದವರೆಗೆ ರಾಜ್ಯಗಳಲ್ಲಿ 2 ರಿಂದ 3 ಸಾವಿರ ರೂಪಾಯಿವರೆಗೆ ಗೌರವಧನವಿದೆ. ಇವರೆಲ್ಲರ ಕೆಲಸದ ಸ್ವರೂಪ ಒಂದೇ ರೀತಿ ಇದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಸರ್ಕಾರ ವರ್ತಿಸುತ್ತಿದೆ. ಖಾಸಗೀ ಮಾಲೀಕತ್ವದಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿ ಜಾರಿಯನ್ನು ಕಡ್ಡಾಯಗೊಳಿಸುವ ಸರ್ಕಾರ, ತನ್ನ ಅಧೀನದ ಈ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡುತ್ತಿಲ್ಲ.

ಒಂದು ಸರ್ಕಾರ ಮಾದರಿ ಮಾಲೀಕನಾಗಿರಬೇಕೆಂಬ ಸತ್‌ಸಂಪ್ರದಾಯವನ್ನು ಕೂಡಾ ಪಾಲಿಸುತ್ತಿಲ್ಲ. ಈಗಾಗಲೇ ನಿವೃತ್ತಿಗೊಂಡಿರುವ ಸಾವಿರಾರು ಜನ ಬರಿಗೈಯಲ್ಲಿ ಮನೆ ಸೇರಿದ್ದು ನಿವೃತ್ತಿಯ ಅಂಚಿನಲ್ಲಿರುವ ಸಹಸ್ರಾರು ಜನ ಅತಂತ್ರ ಬದುಕಿನ ಭೀತಿಯಲ್ಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇಶದ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಅಂತೆಯೇ ಅಂಗನವಾಡಿ ನೌಕರರ ಮೈಬೆವರು ಹರಿದಿದೆ. ಬೆವರಿಗೆ ತಕ್ಕ ಫಲ ದಕ್ಕಲು ಸಾಗಬೇಕಾದ ದಾರಿ        ಸಾಕಷ್ಟಿದೆ.

  

( ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಂಗನವಾಡಿ  ಕಾರ್ಯಕರ್ತೆಯರ  ಮತ್ತು ಸಹಾಯಕಿಯರ ಫೆಡರೇಷನ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.