ಬುಧವಾರ, ಮಾರ್ಚ್ 3, 2021
25 °C
ಜಿಲ್ಲಾಧಿಕಾರಿ ಕಚೇರಿ ಎದುರು ದಸಂಸ ಪ್ರತಿಭಟನೆ

ಸಮಾನ ಶಿಕ್ಷಣ ಅನುಷ್ಠಾನಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾನ ಶಿಕ್ಷಣ ಅನುಷ್ಠಾನಗೊಳಿಸಿ

ಉಡುಪಿ: ಸಾವಿತ್ರಿ ಬಾಯಿಪುಲೆ ಅವರ 185ನೇ ಜನ್ಮದಿನದ ಅಂಗವಾಗಿ ಸಮಾನ ಶಿಕ್ಷಣ ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಸದಸ್ಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚ ಬಾರದು. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು.ಎಲ್ಲ ಸರ್ಕಾರಿ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟಕ್ಕೆ ಏರಿಸ ಬೇಕು. ಸರ್ಕಾರ ತನ್ನ ಶಿಕ್ಷಣ ನೀತಿಯನ್ನು ಪ್ರಕಟಿಸಬೇಕು. ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಒಂದೇ ಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಖಾಸಗಿ ಶಾಲೆಗಳ ಆಡಳಿತ ನೀತಿಗಳ ಮೇಲೆ ಕಡಿವಾಣ ಹಾಕುವ ಕಾನೂನನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿ ತಿಯ ರಾಜ್ಯ ಸಂಚಾಲಕ ಸುಂದರ್‌ ಮಾಸ್ತರ್‌ ಮಾತನಾಡಿ, ಸರ್ಕಾರ ಮಕ್ಕಳಿಗೆ ಅನ್ನಭಾಗ್ಯ, ಕ್ಷೀರಾಭಾಗ್ಯ, ಶೂ ಭಾಗ್ಯವನ್ನು ಕೊಡುವುದು ಮುಖ್ಯವಲ್ಲ. ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಕಾರ್ಮಿಕರ, ಬಡವರ, ಶೋಷಿ ತರ ಮಕ್ಕಳು ಬರುವುದರಿಂದ ಅವರಿಗೆ ಒಳ್ಳೆಯ ಶಿಕ್ಷಣ ಒದಗಿಸಬೇಕು. ಅದಕ್ಕಾಗಿ 1ರಿಂದ 4ನೇ ತರಗತಿವರೆಗೆ ತರಗತಿ ಗೊಬ್ಬರು ಶಿಕ್ಷಕರು, 5ನೇ ತರಗತಿಯ ನಂತರ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.ಕನ್ನಡ ಮಾಧ್ಯಮದ ಹೆಸರಿನಲ್ಲಿ ಶಾಲೆಯನ್ನು ತೆರೆಯಲು ಅನುಮತಿ ಪಡೆದುಕೊಂಡು ಬಳಿಕ ಇಂಗ್ಲಿಷ್‌ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುವ ಖಾಸಗಿ ಸಂಸ್ಥೆಗಳನ್ನು ಶಿಕ್ಷೆ ಗುರಿಪಡಿಸಬೇಕು. ರಾಜ್ಯದಲ್ಲಿ ಸುಮಾರು 30 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಆದರೆ, ಸರ್ಕಾರ ಕಾಟಾಚಾರಕ್ಕೆ ಕೆಲವು ಕಡೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡುತ್ತಿದೆ ಎಂದು ಆರೋಪಿಸಿದರು.ದ.ಸ.ಸಂ. ರಾಜ್ಯ ಸಮಿತಿ ಸದಸ್ಯ ಸುಂದರ್‌ ಗುಜ್ಜರಬೆಟ್ಟು, ದಲಿತ ಚಿಂತಕ ನಾರಾಯಣ ಮಣೂರು, ಜಿಲ್ಲಾ ಪ್ರಧಾನ ಸಂಚಾಲಕ ಎಸ್‌.ಎಸ್‌. ಪ್ರಸಾದ್‌, ತಾಲ್ಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು, ದಲಿತ ಮುಖಂಡರಾದ ಶಂಕರ್‌ದಾಸ್‌ ಮೂಡುಬೆಟ್ಟು, ಎಸ್‌. ವಿಜಯ್‌, ಪ್ರಶಾಂತ್‌ ತೊಟ್ಟಂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.