ಸಮಾನ ಶಿಕ್ಷಣ ಆರಂಭ ಎಲ್ಲಿಂದ?

7

ಸಮಾನ ಶಿಕ್ಷಣ ಆರಂಭ ಎಲ್ಲಿಂದ?

Published:
Updated:

ಮಕ್ಕಳು ದೇಶದ ಅತ್ಯಂತ ಪ್ರಮುಖ ಆಸ್ತಿ ಎಂದು ಭಾರತದ ೧೯೭೪ರ ರಾಷ್ಟ್ರೀಯ ಮಕ್ಕಳ ನೀತಿಯ ಮೂಲಕ ಘೋಷಿಸಿರುವ ಸರ್ಕಾ­ರವು, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಅಂತರ­ರಾಷ್ಟ್ರೀಯ ಒಪ್ಪಂದಗಳಿಗೆ ಸಹಿಹಾಕುವ ಮೂಲಕ ದೃಢಪಡಿಸಿದೆ. ಇದನ್ನು ಆಧ­ರಿಸಿ ೨೦೧೩ರ ರಾಷ್ಟ್ರೀಯ ಮಕ್ಕಳ ನೀತಿ ಮಕ್ಕಳೆಂಬ ಮಾನವ ಸಂಪ­ನ್ಮೂಲದ ಸಮಗ್ರ ಅಭಿವೃದ್ಧಿಗೆ ಸಂಬಂಧಿ­ಸಿದ ರಚನಾತ್ಮಕ ಕೆಲಸಗಳಿಗೆ ಒತ್ತು ನೀಡಿ, ಎಲ್ಲಾ ಮಕ್ಕಳಿಗೆ ಸಮಾನ ಅವ­ಕಾಶ ಮತ್ತು ಶಿಕ್ಷಣ ನೀಡುವುದು ದೇಶದ ಆದ್ಯ ಕರ್ತವ್ಯವೆಂದು ಪ್ರತಿಪಾದಿಸಿದೆ. ಆದರೆ  ‘ಸೇವ್ ದಿ ಚೈಲ್ಡ್ ’   ಸ್ವಯಂ­ಸೇವಾಸಂಸ್ಥೆ ವರದಿಯ ಪ್ರಕಾರ, ಭಾರತ­ದಲ್ಲಿ ಮಕ್ಕಳ ಸ್ಥಿತಿ ಅತ್ಯಂತ ಹೀನಾಯ­ವಾಗಿದೆ. ಅದು ಇತರೆಲ್ಲ ದೇಶಗಳ ಹೋಲಿಕೆಯ ಪಟ್ಟಿಯಲ್ಲಿ ೧೧೨ನೇ ಸ್ಥಾನ­ವನ್ನು ಪಡೆದಿದೆ. ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿ­ದ್ದರೂ ಇದು ಬಡವರು ಮತ್ತು ಕಡು­ಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ವರದಿ ತಿಳಿಸುತ್ತದೆ.ದೇಶವೊಂದರ ಅಭಿವೃದ್ಧಿಯನ್ನು ಅಳೆಯುವ ಪ್ರಮುಖ ಮಾನದಂಡ­ಗಳಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸು­ತ್ತದೆ. ನಮ್ಮ ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾ­ನತೆ, ಸಾಮಾಜಿಕ ನ್ಯಾಯ, ತಾರತಮ್ಯ­ರಹಿತ ಬದುಕಿನ, ಶಿಕ್ಷಣದ ಅವಕಾಶ ಮತ್ತು ಹಕ್ಕುಗಳನ್ನು ನೀಡಬೇಕು. ಆದರೆ ಭಾರತ ನಿಧಾನಕ್ಕೆ ಈ ಆಶಯದಿಂದ ದೂರ ಸರಿಯುತ್ತಿದ್ದು, ಹಿಂದೆ ಜಾತಿ ಆಧಾರಿತವಾಗಿ ಅಸಮಾನತೆಯಿಂದ ನರಳುತ್ತಿದ್ದ ಶಿಕ್ಷಣ ಇಂದು ಬಂಡವಾಳ­ಶಾಹಿಯ ಕೈ ಸೇರಿ ವರ್ಗಾಧಾರಿತವಾದ ಶ್ರೇಣೀಕೃತ ವ್ಯವಸ್ಥೆಯಾಗಿ ಬೇರು­ಬಿಟ್ಟಿದೆ. ಇಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದ್ದು ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಹೆಚ್ಚು ಮೌಲ್ಯದ ಶಿಕ್ಷಣ ಎಂಬಂತಾಗಿದೆ. ಇದ­ರಿಂದ  ಶಿಕ್ಷಣ ಮಾರುಕಟ್ಟೆಯ ಸರಕಾಗಿ ಬಿಕರಿಗೊಳ್ಳುತ್ತಿದೆ.      

ಉಳ್ಳವರ ಪರವಾದ ಶೈಕ್ಷಣಿಕ ನೀತಿ­ಗಳಿಂದಾಗಿ ಆರ್ಥಿಕ ಮತ್ತು ಸಾಮಾಜಿಕ­ವಾಗಿ ದುರ್ಬಲವಾಗಿರುವ ಮಹಿಳೆ-, ತಳಸಮುದಾಯ ಹಾಗೂ ಬಡವರ್ಗ­ದವರು ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ, ಮುಖ್ಯವಾಹಿನಿ­ಯಿಂದ ಅಂಚಿಗೆ ಸರಿಯುತ್ತಿದ್ದಾರೆ. ಸಮಾ­ನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಆದರೆ ಸಮಾನ ಶಿಕ್ಷಣದ ಕುರಿತ ಎಲ್ಲಾ ನೀತಿ, ಆಯೋಗಗಳ ಸಲಹೆಗಳನ್ನೂ ನಿರ್ಲಕ್ಷಿಸಿ ಸರ್ಕಾರ ವಿದ್ಯೆಯೆಂಬ ಮೂಲ­ಭೂತ ಹಕ್ಕನ್ನೂ ಖಾಸಗಿಯವರಲ್ಲಿ ಒತ್ತೆಯಿಟ್ಟು, ಸಮಾಜದಲ್ಲಿ ಅಸಮಾ­ನತೆ­ಯನ್ನು ತಾನೇ ಹೆಚ್ಚು ಮಾಡುತ್ತಿದೆ. ಹೀಗಾಗಿ ಇಂದು ಸಮಗ್ರ ಸಮಾನ­ಶಾಲಾ ವ್ಯವಸ್ಥೆಯುಳ್ಳ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಬೇಕಾಗಿದೆ.                                                                                                                                                                                                                                             

ಮಗು ಕೇಂದ್ರಿತ ಶಿಕ್ಷಣವನ್ನು ಯೋಚಿ­ಸುವ ಯಾವುದೇ ದೇಶವಾದರೂ ೩–೬ ವರ್ಷ ವಯಸ್ಸಿನ ಮಕ್ಕಳ ಶಿಕ್ಷಣ­ದಿಂದಲೇ ತಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ. ಆದರೆ  ನಮ್ಮ ಸರ್ಕಾರದ ಯಾವುದೇ ರಾಷ್ಟ್ರೀಯ ಶಿಕ್ಷಣ ನೀತಿಯೂ ೩–-೬ ವರ್ಷ ವಯೋ­ಮಾನದ ಮಕ್ಕಳ ಶಿಕ್ಷಣದ ಬಗ್ಗೆ ಪ್ರಸ್ತಾ­ಪಿಸಿಯೇ ಇಲ್ಲ! ೦–೬ ವರ್ಷದ ಮಕ್ಕಳು ಪೋಷಣೆಗಷ್ಟೇ ಪಾತ್ರರೆಂಬ ಅವೈಜ್ಞಾ­ನಿಕ ನಂಬಿಕೆಯಿಂದಲೇ ಸರ್ಕಾರಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.ಕೇಂದ್ರ ಸರ್ಕಾರದ ಯೋಜನೆಯಂತೆ ೦–-೬ ವರ್ಷದ ಮಕ್ಕಳ ಪೋಷಣೆಗಾಗಿ , ದೇಶದಾದ್ಯಂತ ಅಂಗನವಾಡಿ ಕೇಂದ್ರ­ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಇರುತ್ತಾರೆಂಬುದು ಗಮ­ನಾರ್ಹ. ಪೋಷಣೆಯ ಜೊತೆಗೆ ಅಂಗನ­ವಾಡಿ ಕೇಂದ್ರಗಳು ೩–-6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡಬೇಕೆಂಬ ನಿರ್ದೇಶನವೂ ಸರ್ಕಾರ­ದಿಂದಿದೆ. ಆದರೆ ಇದಕ್ಕೆ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ, ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲಿ, ಪ್ರತ್ಯೇಕ ಶಾಲಾ ಕೊಠಡಿಯಾಗಲಿ, ತರಬೇತಾದ ಬೋಧನಾ ಸಿಬ್ಬಂದಿ­ಯಾ­ಗಲಿ ಇಲ್ಲ. ಇದು ಮಕ್ಕಳ ಪೋಷಣಾ ವ್ಯವಸ್ಥೆಯಾಗಿ ಆರೋಗ್ಯ ಇಲಾಖೆಯಡಿ ದಾಖಲಾಗುತ್ತದೆಯೇ ಹೊರತು, ಶೈಕ್ಷಣಿಕ ವ್ಯವಸ್ಥೆಯಾಗಿ ಸರ್ಕಾರದಲ್ಲಿ ದಾಖಲಾಗುವುದೇ ಇಲ್ಲ! ಹೀಗಾಗಿ ಅದೊಂದು ಪಾಲಿಸುವ, ಪೋಷಿಸುವ, ಆಡಿಸುವ ಮನೆಯಷ್ಟೇ ಹೊರತು ವಿದ್ಯಾಕೇಂದ್ರ ಅಲ್ಲವೇ ಅಲ್ಲ! ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾ­ನತೆ ಹಿಂದುಳಿದ ಮಕ್ಕಳಿಗೆ ಇಲ್ಲಿಂದಲೇ ಪ್ರಾರಂಭವಾಗಿ ದೊಡ್ಡ ಕಂದಕವನ್ನೇ ನಿರ್ಮಿಸಿದೆ.ಇದೇ ಸಂದರ್ಭದಲ್ಲಿ ಸರ್ಕಾರದ ಈ ದಿವ್ಯ ನಿರ್ಲಕ್ಷ್ಯ ಮತ್ತು ನಿರ್ಲಿಪ್ತತೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶೈಕ್ಷಣಿಕ ವ್ಯವಸ್ಥೆ ಸರ್ಕಾರದ ಲಂಗುಲಗಾಮಿಲ್ಲದೇ, ಸರ್ಕಾರಿ ವ್ಯವಸ್ಥೆ­ಯನ್ನೇ ನುಂಗಿ ನೊಣೆಯುತ್ತಿದೆ. ೩–೬ ವರ್ಷ ವಯಸ್ಸಿನ ಖಾಸಗಿ ಕಿಂಡರ್‌­ಗಾರ್ಟನ್‌ನಲ್ಲಿ ಕಲಿಯುವ ಮಕ್ಕಳು ನರ್ಸರಿ, ಎಲ್‌ಕೆಜಿ, ಯುಕೆಜಿಗಳನ್ನು ಈ ಶಿಕ್ಷಣಕ್ಕಾಗಿಯೇ ಸಿದ್ಧಪಡಿಸಿದ ನಿಗದಿತ ನಮೂನೆಯ ಪಠ್ಯವನ್ನಾಧರಿಸಿ ಶಿಸ್ತು­ಬದ್ಧ­ವಾಗಿ, ಆಂಗ್ಲ ಮಾಧ್ಯಮದಲ್ಲಿಯೇ ಕಲಿಯುತ್ತಾರೆ! ವಿಪರ್ಯಾಸವೆಂದರೆ ಖಾಸಗಿಯಲ್ಲಿ ಕಲಿಯುತ್ತಿರುವ ಈ ೩–೬ ವರ್ಷಗಳ ಮಕ್ಕಳು ಸರ್ಕಾರದಲ್ಲಿ ಎಲ್ಲಿಯೂ ದಾಖಲಾಗುವುದಿಲ್ಲ! ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಲೂ ಪರವಾನಗಿ ತೆಗೆದುಕೊಳ್ಳ­ಬೇಕಿರುವ ಈ ಕಾಲದಲ್ಲಿ ಬಹು­ಸಂಖ್ಯಾತ ಎಳೆಯ  ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ ನೀಡುತ್ತಿ­ರುವ ಈ ಖಾಸಗಿ ಶೈಕ್ಷಣಿಕ ಗುತ್ತಿಗೆ­ದಾರರು ಸರ್ಕಾರದ ಯಾವುದೇ ಇಲಾಖೆಯಡಿಯೂ ನೋಂದಣಿ­ಯಾ­ಗುವ ಅವಶ್ಯಕತೆಯಿಲ್ಲ! ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರ ಇತ್ತೀಚೆಗೆ ದಾಖಲೀಕರಣದ ಬಗ್ಗೆ ಸಣ್ಣ ಪ್ರಯತ್ನಗಳಾಗುತ್ತಿವೆ­ಯಾ­ದರೂ, ಯಾವ ಕಠಿಣ ಕ್ರಮವನ್ನೂ ಕೈಗೊಂಡಿಲ್ಲ.ಯಾವ, ಯಾರ ಒಪ್ಪಿಗೆಯನ್ನೂ ಪಡೆಯದೇ  ಎಲ್ಲೆಂದರಲ್ಲಿ ಬೇಕಾಬಿಟ್ಟಿ­ಯಾಗಿ, ಬೇರೆಬೇರೆ ಮಾದರಿಯ, ಶಿಕ್ಷಣ ಕ್ರಮದ ಇಂತಹ ಆಂಗ್ಲ ಮಾಧ್ಯಮದ ಖಾಸಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿ­ಕೊಳ್ಳುತ್ತಿದ್ದರೂ,  ಕೇಳುವವರೇ ಇಲ್ಲ! ಇಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಶಿಕ್ಷಣದ ಬಗ್ಗೆಯಾಗಲೀ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಕುರಿತಾಗಲೀ, ಸರ್ಕಾರಿ ನಿಯಂತ್ರಣದ ಬಗೆಗಾಗಲೀ ಸರ್ಕಾರ ಒಮ್ಮೆಯೂ ಯೋಚಿಸಿಯೇ ಇಲ್ಲ! ಇನ್ನು ಅಧ್ಯಯನ, ಸಮೀಕ್ಷೆ, ದಾಖ­ಲೀ­ಕರಣ ದೂರದ ಮಾತು! ಹೀಗಾಗಿ ಇತ್ತ ಖಾಸಗಿಯಲ್ಲಿ ಆಂಗ್ಲ ಮಾಧ್ಯಮ­ದಲ್ಲಿ ಕಲಿಯುತ್ತಿರುವ, ಅಥವಾ ಸರ್ಕಾ­ರದ ಅಂಗನವಾಡಿಗಳಲ್ಲಿ ಆಟ­ಕ್ಕುಂಟು ಲೆಕ್ಕಕ್ಕಿಲ್ಲದಂತೆ ಕನ್ನಡ ಮಾಧ್ಯಮ­­ದಲ್ಲಿ ಕಲಿಯುತ್ತಿರುವ ೩–೬ ವರ್ಷ ವಯ­ಸ್ಸಿನ ಮಕ್ಕಳು ಸರ್ಕಾರದ ಯಾವುದೇ ಶೈಕ್ಷಣಿಕ ವ್ಯವಸ್ಥೆಯಡಿ ದಾಖಲಾಗು­ವುದೇ ಇಲ್ಲ! ಹಾಗಾದರೆ ಮಕ್ಕಳ ಕುರಿತು ಸರ್ಕಾರಕ್ಕೆ ಯಾವ ಜವಾಬ್ದಾರಿ, ಕಾಳಜಿಗಳಿವೆಯೆಂದು ಭಾವಿಸೋಣ? ಆಧುನಿಕತೆಯೋ, ಆಂಗ್ಲ ಭಾಷಾ ಪ್ರಭಾವವೋ ಒಟ್ಟಿನಲ್ಲಿ  ಇಂತಹ ಆಂಗ್ಲ ಮಾಧ್ಯಮದ ಖಾಸಗಿ ಪೂರ್ವ ಪ್ರಾಥ­ಮಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಣ ಕೊಡಿ­ಸುವ  ಬಹುಸಂಖ್ಯಾತ ಪೋಷಕರು, ಆರು ವರ್ಷದ ನಂತರ ಮತ್ತೆ ತಮ್ಮ ಮಕ್ಕಳನ್ನು ಖಾಸಗಿಯಿಂದ ಸರ್ಕಾರಿ ಶಾಲೆಗೆ, ಕನ್ನಡ ಮಾಧ್ಯಮಕ್ಕೆ ಸೇರಿಸುವ ಮನಸ್ಸು ಮಾಡು­ತ್ತಾರೆಯೇ?  ಹೀಗೆಂದೇ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಹುಸಂಖ್ಯೆಯಲ್ಲಿ ಮುಚ್ಚಿ­ಹೋಗು­­ತ್ತಿವೆ. ಸರ್ಕಾರ ಜಾಣ ಕುರುಡು, ಕಿವುಡಿನ ನಟನೆಯಾಡುತ್ತಾ, ಸರ್ಕಾರಿ ಶಾಲೆಗೆ ಮಕ್ಕಳೇ ಬರುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾ, ಗುಟ್ಟಾಗಿ ಖಾಸಗಿ ಶೈಕ್ಷಣಿಕ ವ್ಯವಸ್ಥೆಯನ್ನು ತಾನೇ ಕೊಬ್ಬಿ­ಸುತ್ತಾ, ತನ್ನ ತಲೆಯ ಮೇಲೆಯೇ ಚಪ್ಪಡಿ ಎಳೆದುಕೊಳ್ಳುತ್ತಿದೆ!ಹೀಗೆಂದೇ ಸರ್ಕಾರ ಇದುವರೆಗೆ ಗಮನಹರಿಸದ, ಯಾವ ಶಿಸ್ತುಬದ್ಧ ಕಠಿಣ ಕ್ರಮವನ್ನೂ ಕೈಗೊಳ್ಳದ, ತನ್ನ ತಳಮಟ್ಟದ ಶೈಕ್ಷಣಿಕ ವ್ಯವಸ್ಥೆಯಡಿ ದಾಖಲೆಯೇ ಮಾಡಿಲ್ಲದ, ೩–-೬ ವರ್ಷದ ಮಕ್ಕಳ ಪೂರ್ವ ಪ್ರಾಥಮಿಕ ಹಂತದಲ್ಲಿ ಮೊದಲು ಏಕರೂಪದ ಸಮಾನಶಿಕ್ಷಣ ವ್ಯವಸ್ಥೆಯನ್ನು ಸಮ­ರ್ಪಕವಾಗಿ ಜಾರಿಗೆ ತರುವ ಪ್ರಯತ್ನ­ವನ್ನು ತುರ್ತಾಗಿ, ಸಮರ್ಥವಾಗಿ ಮಾಡು­ವುದು ಮುಖ್ಯವಾಗಿದೆ. ಆ ನಂತರ ಹಂತ ಹಂತವಾಗಿ ಪ್ರಾಥಮಿಕ ಶೈಕ್ಷಣಿಕ ವ್ಯವಸ್ಥೆಯನ್ನೂ ಇದರಡಿಗೆ ತರಬಹುದು. ಹೀಗಾದಾಗ ಸರ್ಕಾರಿ ಶಿಕ್ಷಣ ವ್ಯವಸ್ಥೆ ತನ್ನಂತೆ ತಾನೇ ಬಲಗೊಳ್ಳುವುದು ನಿರ್ವಿವಾದ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry