`ಸಮಾರಂಭವೂ ಬೇಡ ಸೀರೆಯೂ ಬೇಡ'

7
ಸೀರೆ ವಿತರಣಾ ಕಾರ್ಯಕ್ರಮಕ್ಕೆ ತಡವಾಗಿ ಬಂದ ಮಾಜಿ ಸಿಎಂ ಎಚ್‌ಡಿಕೆ

`ಸಮಾರಂಭವೂ ಬೇಡ ಸೀರೆಯೂ ಬೇಡ'

Published:
Updated:

ಯಲಹಂಕ: ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸೀರೆ ವಿತರಣಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರುವುದು ತಡವಾಗಿದ್ದರಿಂದ ಬೇಸರಗೊಂಡ ಮಹಿಳೆಯರು ಮನೆಗೆ ಹಿಂದಿರುಗಿದ ಘಟನೆ ಸಿಂಗನಾಯಕನಹಳ್ಳಿಯಲ್ಲಿ ನಡೆಯಿತು.ಕುಮಾರಸ್ವಾಮಿ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ಸಿಂಗನಾಯಕನಹಳ್ಳಿಯ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಬಡಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಸಮಾರಂಭ ಆರಂಭವಾಗಬೇಕಿತ್ತು. ಆದರೆ ಸಂಘಟಕರು 12 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ ಎಂದು ಪ್ರಚಾರ ಮಾಡಿದ್ದರಿಂದ ಬೆಳಿಗ್ಗೆ 11ರಿಂದಲೇ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಹಿಳೆಯರು ಕಲ್ಯಾಣ ಮಂಟಪದ ಬಳಿ ಸೇರಿದ್ದರು.`ಕುಮಾರಸ್ವಾಮಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ' ಎಂದು ಹಲವಾರು ಬಾರಿ ಘೋಷಿಸುತ್ತ, ವೇದಿಕೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಮುಖಂಡರ ಭಾಷಣದೊಂದಿಗೆ ಕಾಲ ದೂಡಲಾಗುತ್ತಿತ್ತು. ಆದರೆ ಸಂಜೆ 4 ಗಂಟೆಯಾದರೂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬಾರದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಆಗಮಿಸಿದ್ದ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಖದಲ್ಲಿ ನಿರಾಶೆ ಮೂಡಿತ್ತು.ಅಲ್ಲದೆ ಬೆಳಗ್ಗೆಯಿಂದ ಕಾಯ್ದು ಕಾಯ್ದು ಸುಸ್ತಾಗಿದ್ದ ಮಹಿಳೆಯರು ಬೇಸರಗೊಂಡು ಕಲ್ಯಾಣ ಮಂಟಪದಿಂದ ಹೊರನಡೆಯಲು ಮುಂದಾದರು. ಆಗ ಕಾರ್ಯಕರ್ತರು ಗೇಟ್‌ಗೆ ಬೀಗಹಾಕಿ, ಅವರನ್ನು ತಡೆದು, ಇನ್ನೇನು ಐದು ನಿಮಿಷಗಳಲ್ಲಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ತಾವು ಕಾರ್ಯಕ್ರಮ ಮುಗಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.ಆದರೆ ಇದಕ್ಕೆ ಒಪ್ಪದ ಮಹಿಳೆಯರು, `ನಮಗೆ ಕಾರ್ಯಕ್ರಮವೂ ಬೇಡ, ಸೀರೆಯೂ ಬೇಡ, ಮೊದಲು ನಮ್ಮನ್ನು ಹೊರಗೆ ಬಿಡಿ' ಎಂದು ಕೇಳಿದರು. ಈ ವೇಳೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಕಾರ್ಯಕರ್ತರು ಗೇಟ್ ತೆರೆದು, ಮಹಿಳೆಯರಿಗೆ ಸೀರೆ ವಿತರಿಸಿ ಕಳುಹಿಸಿದರು.ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್, ಮಾಜಿ ಶಾಸಕರಾದ ರಾಜಣ್ಣ, ಜ್ಯೋತಿರೆಡ್ಡಿ, ಅಶ್ವಥನಾರಾಯಣರೆಡ್ಡಿ, ಸುಭಾಷ್ ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಚಂದ್ರಪ್ಪ ಮೊದಲಾದವರು ಹಾಜರಿದ್ದರು. ನಂತರ ಬಂದ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry