ಸಮಾವೇಶಕ್ಕೆ ಜನರು ಬರ‌್ತಾರೆ; ಓಟು ನೀಡಲ್ಲ: ಪುತ್ರನಿಗೆ ಕಾಡಿದ ಅಪ್ಪನ ಅನುಮಾನ

7

ಸಮಾವೇಶಕ್ಕೆ ಜನರು ಬರ‌್ತಾರೆ; ಓಟು ನೀಡಲ್ಲ: ಪುತ್ರನಿಗೆ ಕಾಡಿದ ಅಪ್ಪನ ಅನುಮಾನ

Published:
Updated:

ಚಾಮರಾಜನಗರ: `ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಸಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು~ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.ಜಿಲ್ಲೆಯ ಹನೂರು ಪಟ್ಟಣದಲ್ಲಿ ಶುಕ್ರವಾರ ಜೆಡಿಎಸ್ ರಾಜ್ಯ ಪ್ರವಾಸದ ಅಂಗವಾಗಿ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರಿಗೆ ಸಮಾವೇಶಕ್ಕೆ ಬರುವ ಜನರು ಓಟು ನೀಡುವಲ್ಲಿ ಹಿಂದೇಟು ಹಾಕುತ್ತಾರೆಂಬ ಅನುಮಾನವೂ ಕಾಡಿತು. ತಂದೆಗೆ ಈ ಚಿಂತೆ ಕಾಡುವ ಬಗ್ಗೆಯೂ ಪ್ರಸ್ತಾಪಿಸಿದರು. ಕುಮಾರಸ್ವಾಮಿ ಕಾರ್ಯಕ್ರಮಗಳಿಗೆ ಜನರು ಹೆಚ್ಚು ಬರುತ್ತಾರೆ.

 

ಅವರೆಲ್ಲರೂ ಜೆಡಿಎಸ್‌ಗೆ ಓಟು ಹಾಕುವುದಿಲ್ಲ. ಈ ಬಗ್ಗೆ ನನ್ನ ತಂದೆಯವರಿಗೆ ಅನುಮಾನ ಕಾಡುತ್ತಿದೆ. ಹೀಗಾಗಿ, ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದರೆ ಚಾಮರಾಜನಗರದ ಜಿಲ್ಲಾ ಕೇಂದ್ರದಿಂದಲೇ ಸರ್ಕಾರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು.ರೈತರು ಬೆಳೆದ ಫಸಲಿಗೆ ವೈಜ್ಞಾನಿಕ ಬೆಲೆ ಇಲ್ಲ. ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಯಾಗಿಲ್ಲ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಪ್ರತ್ಯೇಕ ಕೃಷಿ ಬಜೆಟ್‌ನಿಂದ ಅನ್ನದಾತರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಕೃಷಿ ಬಜೆಟ್‌ನಲ್ಲಿ 17,800 ಕೋಟಿ ಮೀಸಲಿಟ್ಟಿದ್ದರೂ ಸದ್ಬಳಕೆಯಾಗಿಲ್ಲ ಎಂದು ಟೀಕಿಸಿದರು.ಸಾವಯವ ಕೃಷಿ, ಸುವರ್ಣ ಭೂಮಿ ಹಾಗೂ ಜೈವಿಕ ಇಂಧನ ಅಭಿವೃದ್ಧಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದರೂ, ರೈತರಿಗೆ ಸೌಲಭ್ಯ ಕಲ್ಪಿಸಿಲ್ಲ. ಸಾವಯವ ಕೃಷಿಗೆ 200 ಕೋಟಿ ರೂ ಮೀಸಲಿಡಲಾಗಿತ್ತು. ಅದರಲ್ಲಿ ಜನವರಿ ಅಂತ್ಯಕ್ಕೆ 50 ಕೋಟಿ ರೂ ಬಿಡುಗಡೆಯಾಗಿದ್ದು, 18 ಕೋಟಿ ರೂ ಮಾತ್ರ ಖರ್ಚಾಗಿದೆ.

 

ರೈತರ ಕಿವಿಯ ಮೇಲೆ ಹೂ ಇಡಲು ಮತ್ತೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.

ಮುಂದಿನ ತಿಂಗಳ ಅಂತ್ಯದಲ್ಲಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುವುದು ದೇವೇಗೌಡ ಅವರ ನಿರ್ಧಾರ.ತಾವು ಮುಖ್ಯಮಂತ್ರಿಯಾಗಲು ಈ ಸಮಾವೇಶ ಸಂಘಟಿಸುತ್ತಿಲ್ಲ. ಕಬ್ಬು, ಅರಿಸಿನ ಸೇರಿದಂತೆ ಇತರೇ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲು ಜನರ ಬಳಿಗೆ ಹೋಗುತ್ತಿದ್ದೇವೆ ಎಂದರು.ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಕೊನೆಯ ಶ್ರೇಣಿಗೆ ತಲುಪಿದ್ದಾರೆ. ರಾಜ್ಯದಲ್ಲಿ ಬರಗಾಲ ತಲೆದೋರಿದ್ದರೂ ಸಮರ್ಪಕವಾಗಿ ಪರಿಹಾರ ಕಾರ್ಯಕೈಗೊಂಡಿಲ್ಲ ಎಂದ ಅವರು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಆಶೀರ್ವಾದ ನೀಡಿದರೆ ಕಬಿನಿ-2ನೇ ಹಂತದ ಯೋಜನೆಗೆ ಚಾಲನೆ ನೀಡಲಾಗುವುದು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.ಸಮಾವೇಶದಲ್ಲಿ ಸಂಸದ ಎನ್. ಚೆಲುವರಾಯಸ್ವಾಮಿ, ಪಕ್ಷದ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಪುಟ್ಟಣ್ಣ, ಮಾಜಿ ಸಚಿವ ಕೋಟೆ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಚಿಕ್ಕಮಾದು, ಡೇವಿಡ್ ಸಿಮೋನ್, ಅನ್ನದಾನಿ, ಮಾಜಿ ಶಾಸಕ ಎಸ್. ಬಾಲರಾಜ್, ಎಂ. ಪಂಚಾಕ್ಷರಿ, ಜೆ. ಶಿವಮೂರ್ತಿ, ಪೊನ್ನಾಚಿ ಮಹದೇವಸ್ವಾಮಿ, ಶಕೀಲ್ ನವಾಜ್, ಅಬ್ದುಲ್ ಅಜೀಂ, ಸುಬ್ರಮಣ್ಯ ಇತರರು ಹಾಜರಿದ್ದರು.ತೆನೆಹೊತ್ತು ಸಂಭ್ರಮಿಸಿದ ಪೂಜಾ ಗಾಂಧಿ

ನಿಗದಿತ ಸಮಯಕ್ಕೆ ಸಮಾವೇಶ ಆರಂಭವಾಗುವುದು ವಿಳಂಬವಾಯಿತು. ಸೂರ್ಯ ನೆತ್ತಿಯ ಮೇಲೆರಿದ್ದ. ಪೆಂಡಾಲ್ ಕೆಳಗೆ ಕುಳಿತಿದ್ದ ಕಾರ್ಯಕರ್ತರ ಹುಮ್ಮಸ್ಸು ಸೋತಿತ್ತು. ಪಕ್ಷದ ವರಿಷ್ಠರು ವೇದಿಕೆಗೆ ಬರಲು ತಡವಾಯಿತು. ಅವರಿಗೂ ಮೊದಲೇ ಚಿತ್ರನಟಿ ಪೂಜಾ ಗಾಂಧಿಯ ಆಗಮನವಾಯಿತು. ಕಾರ್ಯಕರ್ತರಲ್ಲೂ ಒಮ್ಮೆಲೆ ಸಂಚಲನ ಮೂಡಿತು!ಮಹಿಳೆಯರು ಎದ್ದುನಿಂತು ಚಪ್ಪಾಳೆ ತಟ್ಟಿ ಪೂಜಾ ಗಾಂಧಿಯನ್ನು ಸ್ವಾಗತಿಸಿದರು. ವೇದಿಕೆಗೆ ಬಂದ ಪೂಜಾ ಕಾರ್ಯಕರ್ತರತ್ತ ಕೈಬೀಸಿ ಕುರ್ಚಿಯಲ್ಲಿ ಅಸೀನರಾದರು. ಕೆಲವು ಕಾರ್ಯಕರ್ತರು ಆಕೆಯ ಆಟೋಗ್ರಾಫ್ ಪಡೆಯಲು ಮುಗಿಬಿದ್ದರು. ಕೊನೆಗೆ ಸಮಾವೇಶ ಆರಂಭಗೊಂಡಾಗ ವೇದಿಕೆ ಏರಿದ ಪೂಜಾ ಕಾರ್ಯಕರ್ತರತ್ತ ಕೈಬೀಸಿದರು.ಅದೇ ವೇಳೆ ಕಾರ್ಯಕರ್ತನೊಬ್ಬ ತೆನೆಹೊತ್ತ ಮಹಿಳೆಯ ವೇಷತೊಟ್ಟಿದ್ದು ಗಮನ ಸೆಳೆಯಿತು. ವೇದಿಕೆಯಲ್ಲಿ ಕುಳಿತಿದ್ದ ಪೂಜಾ ಬಳಿಗೆ ತೆರಳಿದ ಆತ ತೆನೆಯನ್ನು ಹೊರುವಂತೆ ದುಂಬಾಲು ಬಿದ್ದ. ಕೊನೆಗೆ, ಪೂಜಾ ಗಾಂಧಿ ತೆನೆಹೊತ್ತು ಸಂಭ್ರಮಿಸಿದರು.ಕಳ್ಳರ ಕರಾಮತ್ತು: ನಗದು ಕಳವು

ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದ ಸಮಾವೇಶದಲ್ಲಿ ನಗರಸಭೆ ಸದಸ್ಯ ಮಹಮ್ಮದ್ ಅಸ್ಗರ್ ಅವರ ಜೇಬಿಗೆ ಕಿಡಿಗೇಡಿಗಳು ಕತ್ತರಿ ಹಾಕಿದ್ದು ಬೆಳಕಿಗೆ ಬಂದಿತು. ಅವರು ಸಮಾವೇಶದಲ್ಲಿ ಮಗ್ನರಾಗಿದ್ದ ವೇಳೆ ಕೈಚಳಕ ತೋರಿಸಿರುವ ಕಿಡಿಗೇಡಿಗಳು ಪರ್ಸ್ ಸಮೇತ 17 ಸಾವಿರ ರೂ ದೋಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry