ಭಾನುವಾರ, ಆಗಸ್ಟ್ 25, 2019
28 °C
ಸಿನಿಮಾ ಪ್ರಶಸ್ತಿ

ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ

Published:
Updated:

ಬೆಂಗಳೂರು: ತೀವ್ರ ವಿವಾದಕ್ಕೆ ಒಳಗಾಗಿರುವ 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ಹಿಂದಕ್ಕೆ ಪಡೆಯುವುದಾಗಿ ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ. ಹೊಸ ಆಯ್ಕೆ ಸಮಿತಿ ರಚನೆಗೆ ನ್ಯಾಯಾಲಯ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮತ್ತು ನಟಿ ಪ್ರಿಯಾ ಹಾಸನ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಕುರಿತು ಸಿಬಿಐ ತನಿಖೆಗೆ ಆದೇಶಿಸುವ ಇಂಗಿತವನ್ನು ನ್ಯಾಯಾಲಯ ಹೊರಹಾಕಿತ್ತು.

ಆದರೆ, ಸೋಮವಾರ ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ರಾಜ್ಯ ಸರ್ಕಾರ, 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ವಾಪಸು ಪಡೆಯುವುದಾಗಿ ಸ್ಪಷ್ಟಪಡಿಸಿತು.

ಪ್ರಶಸ್ತಿ ಆಯ್ಕೆ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿಯನ್ನು ನೇಮಕ ಮಾಡುವುದಾಗಿಯೂ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಪ್ರಮಾಣಪತ್ರವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರ ಏಕಸದಸ್ಯ ಪೀಠ, ನಾಲ್ಕು ವಾರದೊಳಗೆ ಹೊಸ ಆಯ್ಕೆ ಸಮಿತಿಯನ್ನು ನೇಮಕ ಮಾಡುವಂತೆ ಗಡುವು ವಿಧಿಸಿತು. ಬಳಿಕ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿತು.ಗುಣಮಟ್ಟದ ಬಗ್ಗೆ ಅಸಮಾಧಾನ: ಉಪೇಂದ್ರ ಅಭಿನಯದ `ಸೂಪರ್' ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸಿರುವುದನ್ನು ಸಮರ್ಥಿಸಿಕೊಂಡ ಚಿತ್ರದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಪರ ವಕೀಲರು, `ದೇಶದ ನಾಗರಿಕರು ಸಮಾಜಕ್ಕಾಗಿ ದುಡಿಯಬೇಕು ಎಂಬ ಸಂದೇಶ ಸೂಪರ್ ಚಿತ್ರದಲ್ಲಿದೆ. ಈ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮಂಜಸವಾಗಿದೆ. ಇದರಲ್ಲಿ ಅವ್ಯವಹಾರ ನಡೆಸಿದೆ ಎಂಬ ಅನುಮಾನ ಮೂಡಿದರೆ ಸಿಬಿಐ ತನಿಖೆಗೆ ಆದೇಶಿಸಬಹುದು. ಆದರೆ, ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವುದು ಸರಿಯಲ್ಲ. ಹಾಗೆ ಮಾಡಿದರೆ ಕಲಾವಿದರಿಗೆ ಅವಮಾನವಾಗುತ್ತದೆ' ಎಂದರು.ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ನ್ಯಾ.ರೆಡ್ಡಿ, `ಸೂಪರ್ ಚಿತ್ರದ ಪೋಸ್ಟರ್‌ಗಳನ್ನು ನಾನು ನೋಡಿದ್ದೇನೆ. ಚಿತ್ರದ ನಾಯಕ ಹರಿದ ಪ್ಯಾಂಟ್ ಧರಿಸಿಕೊಂಡು ಕುಳಿತಿರುತ್ತಾನೆ. ಅದರಲ್ಲಿ ಸಮಾಜಕ್ಕೆ ನೀಡುತ್ತಿರುವ ಸಂದೇಶ ಏನಿದೆ? ಹಳೆಯ ಚಿತ್ರಗಳಲ್ಲಿ ನೀಡುತ್ತಿದ್ದ ಸಂದೇಶ ಈಗಿನ ಚಿತ್ರಗಳಲ್ಲಿ ಇದೆಯೇ?' ಎಂದು ಪ್ರಶ್ನಿಸಿದರು.ಚಲನಚಿತ್ರ ಮಾಧ್ಯಮದಂತೆಯೇ ಟೆಲಿವಿಷನ್ ವಾಹಿನಿಗಳೂ ಹಾದಿ ತಪ್ಪಿವೆ. ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ, 144 ಮಂದಿಯನ್ನು ಒತ್ತೆಯಾಗಿ ಇರಿಸಿಕೊಂಡಿದ್ದರು. ಟೆಲಿವಿಷನ್ ವಾಹಿನಿಯ ನಿರೂಪಕಿಯೊಬ್ಬರು ಒತ್ತೆಯಾಳುಗಳ ವಿವರವನ್ನು ಬಹಿರಂಗಪಡಿಸಿದ್ದರಿಂದ ಅವರೆಲ್ಲರೂ ಪ್ರಾಣ ತೆರಬೇಕಾಯಿತು. ಇದೇ ರೀತಿ ಚಲನಚಿತ್ರ ರಂಗದಲ್ಲೂ ಸಾಮಾನ್ಯ ಜ್ಞಾನದ ಕೊರತೆ ಇರುವವರು ಇದ್ದಾರೆ. ಒಳ್ಳೆಯ ಚಿತ್ರಗಳನ್ನು ನೀಡಬಲ್ಲ ನಟ, ನಿರ್ದೇಶಕರ ಕೊರತೆ ಚಿತ್ರರಂಗವನ್ನು ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ದೈತೋಟ ತಪ್ಪೆಸಗಿಲ್ಲ'

ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಪತ್ರಕರ್ತ ಈಶ್ವರ ದೈತೋಟ ಅವರು ತುಳು ಚಿತ್ರವೊಂದಕ್ಕೆ ಪ್ರಶಸ್ತಿ ನೀಡಲು ಕಾರಣರಾಗಿದ್ದಾರೆ ಎಂಬ ಆರೋಪ ನಿರಾಧಾರವಾದುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದೆ.`ತುಳು ಚಲನಚಿತ್ರ ಕಂಚಿಲ್ದ ಬಾಲೆಯಲ್ಲಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುವಾಗ ಈಶ್ವರ ದೈತೋಟ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ದೈತೋಟ ಅವರೇ ಸದಸ್ಯರಾಗಿದ್ದ ಆಯ್ಕೆ ಸಮಿತಿಯು ಇದೇ ಚಿತ್ರವನ್ನು ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇದರಲ್ಲಿ ಅವ್ಯವಹಾರ ನಡೆದಿದೆ' ಎಂದು ಅರ್ಜಿದಾರರು ದೂರಿದ್ದರು. ಸೆನ್ಸಾರ್ ಮಂಡಳಿಯಿಂದ `ಕಂಚಿಲ್ದ ಬಾಲೆ' ಚಿತ್ರದ ಪ್ರತಿಯನ್ನು ಪಡೆದು ವೀಕ್ಷಿಸಲಾಗಿದೆ. ಚಿತ್ರದಲ್ಲಿ ದೈತೋಟ ಅವರ ಹೆಸರನ್ನು ಪ್ರಕಟಿಸಿಲ್ಲ. ಆದ್ದರಿಂದ ಅವರಿಂದ ಯಾವುದೇ ಲೋಪ ಆಗಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. 

Post Comments (+)