ಶುಕ್ರವಾರ, ಮೇ 7, 2021
22 °C
ಸರ್ಕಾರ-ಪಕ್ಷದ ನಡುವೆ ಸಮನ್ವಯ

ಸಮಿತಿ ರಚಿಸಲು ಆಗ್ರಹಿಸಿ ಹೈಕಮಾಂಡ್‌ಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಪಕ್ಷದ ನಡುವಣ ಸಮನ್ವಯ ಕಾಯ್ದುಕೊಳ್ಳುವುದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರ್ ಅವರು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ.ಪಕ್ಷದ ಕಡೆಯಿಂದ ಎರಡು ಅಥವಾ ಮೂವರು ಸದಸ್ಯರು ಹಾಗೂ ಅಷ್ಟೇ ಸಂಖ್ಯೆಯ ಸಚಿವರು ಸಮಿತಿಯಲ್ಲಿ ಇರಬೇಕು. ಈ ಸಮಿತಿ ಆಗಾಗ ಸಭೆ ಸೇರಿ ಸರ್ಕಾರದ ನೀತಿಗಳು ಮತ್ತು ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಬೇಕು ಎಂಬುದಾಗಿ ರಾಜಶೇಖರನ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ರಾಜಶೇಖರನ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿರುವುದು ಮಹತ್ವ ಪಡೆದುಕೊಂಡಿದೆ. ಈ ಕುರಿತು ರಾಜಶೇಖರನ್ ಅವರನ್ನು ಸಂಪರ್ಕಿಸಿದಾಗ, `ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಜನರು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾದ ದೊಡ್ಡ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲಿದೆ. ಸರ್ಕಾರದ ಕಾರ್ಯನಿರ್ವಹಣೆಯು ನೇರವಾಗಿ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿಯವರು ಪಕ್ಷದ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರಬೇಕು. ಈ ದಿಸೆಯಲ್ಲಿ ಸಮನ್ವಯ ಸಮಿತಿ ರಚನೆ ಉತ್ತಮ ಮಾರ್ಗ' ಎಂದರು.ಬಿಜೆಪಿಯ ಶಾಸಕರ ಸಂಖ್ಯೆ 110ರಿಂದ 40ಕ್ಕೆ ಕುಸಿದಿದೆ. ಜನರು ಸರ್ಕಾರದ ಕಾರ್ಯನಿರ್ವಹಣೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ಎಲ್ಲರಿಗೂ ಇದೇ ಗತಿ ಆಗುತ್ತದೆ ಎಂಬ ಸಂದೇಶ ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ ಎಂದು ಹೇಳಿದರು.`ಕಾಂಗ್ರೆಸ್‌ನ ಒಬ್ಬ ಹಿರಿಯ ಕಾರ್ಯಕರ್ತನಾಗಿ ನಾನು ಪಕ್ಷದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದೇನೆ. ಸಿದ್ದರಾಮಯ್ಯ ಅವರು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಆಸೆ. ಅವರು ಮುಂದೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.