ಗುರುವಾರ , ಜೂನ್ 17, 2021
27 °C

ಸಮಿತಿ ವರಿದಿ ಸಲ್ಲಿಸಲು 20ರವರೆಗೆ ಕಾಲಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದನದಲ್ಲಿ ಶಾಸಕರು ಬ್ಲೂ ಫಿಲಂ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯ ಸಮಿತಿಗೆ ವರದಿ ನೀಡಲು ಇದೇ 20ರವರೆಗೂ ಕಾಲಾವಕಾಶ ನೀಡಲಾಗಿದೆ.ಬಿದರೂರು ಗುರುವಾರ ವಿಧಾನ ಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದು, ಇದಕ್ಕೆ ಸ್ಪೀಕರ್ ಸಮ್ಮತಿ ನೀಡಿದ್ದಾರೆ.ಸಮಿತಿಯು ಇದೇ 13ರ ಒಳಗೆ ವರದಿ ನೀಡಬೇಕಿತ್ತು. ಆದರೆ ವಿಚಾರಣೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅಂತಿಮ ಹಂತದ ವಿಚಾರಣೆಗೆ ಮತ್ತಷ್ಟು ಕಾಲಾವಕಾಶ ಬೇಕು ಎಂದು ಸ್ಪೀಕರ್‌ಗೆ ಮನವಿ ಮಾಡಿದೆ.

ಸ್ಪೀಕರ್ ರಚಿಸಿರುವ ಸಮಿತಿಯ ಕಾರ್ಯವ್ಯಾಪ್ತಿಯ ಪ್ರಕಾರ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೆಮಾರ್ ಅವರಿಗೆ ನೋಟಿಸ್ ನೀಡಲಾಗಿತ್ತು. ಈ ಮೂವರೂ ಗುರುವಾರ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು ಎಂದು ಬಿದರೂರು `ಪ್ರಜಾವಾಣಿ~ಗೆ ತಿಳಿಸಿದರು.ಇನ್ನೂ ಕೆಲ ಶಾಸಕರು ಸದನದಲ್ಲಿ ಮೊಬೈಲ್ ವೀಕ್ಷಿಸುತ್ತಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಆದರೆ ಅವರು ಏನು ನೋಡುತ್ತಿದ್ದರು ಎಂಬುದು ಗೊತ್ತಿಲ್ಲ. ಅವರಿಗೆ ನೋಟಿಸ್ ನೀಡಲು ಸಮಿತಿಯ ವ್ಯಾಪ್ತಿಯಲ್ಲಿ ಅವಕಾಶವಿಲ್ಲ. ಆದರೆ ಆ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.`ಮೂರು ಶಾಸಕರು ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾರೆ. ಅಗತ್ಯಬಿದ್ದರೆ ಮತ್ತೆ ಅವರನ್ನು ಕರೆಸುತ್ತೇವೆ. ಇದೇ 15ರಂದು ಮತ್ತೆ ಸಭೆ ನಡೆಯಲಿದ್ದು, ಕಾನೂನು ಇಲಾಖೆಯ ಕಾರ್ಯದರ್ಶಿಗಳು ಸದನದ ನೀತಿ ಸಂಹಿತೆ ಬಗ್ಗೆ ಸಮಿತಿಗೆ ವಿವರಣೆ ನೀಡಲಿದ್ದಾರೆ~ ಎಂದರು.ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂ ಫಿಲಂ ನೋಡಿದ್ದು ನಿಜ ಎಂದು ಸಮಿತಿಯ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ಪಾಟೀಲರು `ನನಗೆ ಕನ್ನಡಕ ಇಲ್ಲದಿದ್ದರೆ ಕಣ್ಣು ಕಾಣುವುದಿಲ್ಲ. ಆ ದಿನ ನಾನು ಸದನಕ್ಕೆ ಕನ್ನಡಕ ತೆಗೆದುಕೊಂಡು ಹೋಗಿರಲಿಲ್ಲ. ನನ್ನ ಪಕ್ಕದಲ್ಲಿ ಕುಳಿತಿದ್ದ ಸವದಿ ಅತ್ತ ದೃಷ್ಟಿಹರಿಸಿದೆ. ಆದರೆ ಅವರು ಏನು ನೋಡುತ್ತಿದ್ದರು ಎಂಬುದು ಗೊತ್ತಾಗಲಿಲ್ಲ~ ಎಂದಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಮಾಜಿ ಸಚಿವ ಪಾಲೆಮಾರ್ ಅವರು, `ನಾನು ಯಾವುದೇ ತಪ್ಪು ಮಾಡಿಲ್ಲ~ ಎಂದು ಸಮರ್ಥನೆ ನೀಡಿದ್ದಾಗಿ ಗೊತ್ತಾಗಿದೆ.ಇದೇ 20ರಿಂದ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಸಮಿತಿ ವರದಿ ನೀಡಲಿದೆ. ಆ ವರದಿಯನ್ನು ಆಧರಿಸಿ, ಆ ಮೂವರು ಶಾಸಕರಿಗೆ ಸದನಕ್ಕೆ ಬರಲು ಅವಕಾಶ ನೀಡುವ ಕುರಿತು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.