ಸಮುದಾಯದ ಉಲಿ-ಬಾನುಲಿ

ಬುಧವಾರ, ಮೇ 22, 2019
32 °C

ಸಮುದಾಯದ ಉಲಿ-ಬಾನುಲಿ

Published:
Updated:

ಟೀವಿ ಚಾನೆಲ್‌ಗಳು ಹೆಚ್ಚಾದಂತೆ ರೇಡಿಯೋ ಕೇಳುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ನಂಬಿಕೆ ಮೇಲ್ನೋಟಕ್ಕೆ ಸಹಜ. ಆದರೆ ರೇಡಿಯೋ ಕೇಳುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ವಾದವನ್ನು ರೇಡಿಯೋ ಕೇಳುಗರ ಸಮೀಕ್ಷೆ ವರದಿಗಳು ಸುಳ್ಳು ಮಾಡುತ್ತಿವೆ.ಸಮೀಕ್ಷೆಯೊಂದರ ಪ್ರಕಾರ ಇಂದು ಒಂದು ಸಾವಿರ ಮಂದಿಯಲ್ಲಿ ಶೇ 112 ಮಂದಿ ರೇಡಿಯೋ ಕೇಳುಗರಿದ್ದರೆ, ಟೀವಿ ವೀಕ್ಷಕರು ಒಂದು ಸಾವಿರಕ್ಕೆ ಶೇ 61.2 ಮಂದಿ ಇದ್ದಾರೆ. ಅಂದರೆ ರೇಡಿಯೋ ಕೇಳುಗರ ಸಂಖ್ಯೆಯೇ ಟಿವಿ ನೋಡುಗರ ಸಂಖ್ಯೆಗಿಂತ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ರೇಡಿಯೋ ಕೇಳುಗರು ವ್ಯಾಪಕವಾಗಿದ್ದಾರೆ. ನಗರಗಳಲ್ಲಿ ಕಮರ್ಷಿಯಲ್ ಎಫ್.ಎಂ ಚಾನೆಲ್‌ಗಳು ಬಂದ ಮೇಲಂತೂ ಮೊಬೈಲು ಸೆಟ್‌ಗಳ ಮೂಲಕ ರೇಡಿಯೋ ಕೇಳುಗರು ಹೆಚ್ಚುತ್ತಿದ್ದಾರೆ.ಆದರೆ ಈಗ ಸಮಸ್ಯೆ ಇರುವುದು ಸಮುದಾಯ ಬಾನುಲಿಗಳದ್ದು.

ಕೇಂದ್ರ ಸರ್ಕಾರ ಸ್ವಾಮ್ಯದ ಆಕಾಶವಾಣಿ ಬಿಟ್ಟರೆ 2004ರ ನಂತರ ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಸಮುದಾಯ ಬಾನುಲಿ (ಕಮ್ಯುನಿಟಿ ರೇಡಿಯೋ) ಕೇಂದ್ರಗಳು ತಲೆ ಎತ್ತಿವೆ. ಇವುಗಳೆಲ್ಲ ಬಹುತೇಕವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಬಾನುಲಿ ಕೇಂದ್ರಗಳು.

 

ಸಮುದಾಯ ಬಾನುಲಿ ವಿದೇಶಗಳಲ್ಲಿ ಬಹು ಹಿಂದೆಯೇ ಚಾಲ್ತಿಯಲ್ಲಿದ್ದರೂ, ಭಾರತಕ್ಕೆ ಕಾಲಿಟ್ಟಿದ್ದು 2004ರ ನಂತರ. ಇವುಗಳ ಮುಖ್ಯ ಉದ್ದೇಶ ಸ್ಥಳೀಯ ಜನರ, ಅರ್ಥಾತ್ ಸ್ಥಳೀಯ ನಿರ್ದಿಷ್ಟ ಸಮುದಾಯದ ಅಭಿವೃದ್ಧಿ ಹಾಗೂ ಅವರ ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ರಕ್ಷಿಸುವುದು.

 

ಸ್ಥಳೀಯರ ಪಾಲ್ಗೊಳ್ಳುವಿಕೆಯ ಮೂಲಕ ಅವರನ್ನು ಉತ್ತೇಜಿಸುವುದು,  ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ನಡೆಸುವುದು. ಈ ಮೂಲಕ ಸ್ಥಳೀಯ ಸಮುದಾಯದ ಪ್ರಗತಿಗೆ ಸಮುದಾಯ ಬಾನುಲಿ ಒತ್ತಾಸೆಯಾಗಿ ನಿಲ್ಲಬೇಕೆನ್ನುವುದು ಕೇಂದ್ರ ಸರ್ಕಾರದ ಆಶಯ.

ಬದಲಾವಣೆಯ ಗಾಳಿ

ಸುಪ್ರೀಂ ಕೋರ್ಟ್ ಇತ್ತೀಚಿನ ವರ್ಷಗಳಲ್ಲಿ ತರಂಗಾಂತರ ಬಳಕೆ ಬಗೆಗೆ ನೀಡಿದ ತೀರ್ಪು ರೇಡಿಯೋ ಸ್ಥಾಪನೆ ಮತ್ತು ಬಳಕೆಯ ಸಂಖ್ಯೆಯನ್ನು ಹೆಚ್ಚಿಸಿದೆ. ತರಂಗಾಂತರವು ಸಾರ್ವಜನಿಕ ಸ್ವತ್ತು. ಅದನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮತ್ತು ಜನಸಮುದಾಯದ ಒಳಿತಿಗೆ ಬಳಸುವಂತಾಗಬೇಕು.ಪ್ರಸಾರದ ಸ್ವಾಮ್ಯವು ಸರ್ಕಾರ ಇಲ್ಲವೇ ಯಾವುದೇ ಒಂದು ಸಂಸ್ಥೆಯ ಅಥವಾ ಒಬ್ಬ ವ್ಯಕ್ತಿಯದಾಗಿರುವುದು ಅಂಗೀಕಾರಾರ್ಹವಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಕೂಡ ಬಾನುಲಿ ಕೇಂದ್ರಗಳ ಮತ್ತು ಟೀವಿ ಚಾನೆಲ್ಲುಗಳ ಸಂಖ್ಯೆ ಹೆಚ್ಚಾಗಲು ಇರುವ ಹಲವು ಕಾರಣಗಳಲ್ಲೊಂದು.ಒಂದೂವರೆ ದಶಕದ ಹಿಂದೆ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯ ನಂತರ ಬಹುತೇಕ ಎಲ್ಲ ರಂಗಗಳಲ್ಲಿಯೂ ಸರ್ಕಾರಿ ಸ್ವಾಮ್ಯದ ಹಿಡಿತ ಕಡಿಮೆ ಆಗುತ್ತಾ ಬಂದಿದೆ. ಈ ಬದಲಾವಣೆಯ ಗಾಳಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆದು ಬಂದ ಟೀವಿ - ಬಾನುಲಿ ಕ್ಷೇತ್ರಗಳಲ್ಲಿಯೂ ಬೀಸಿದೆ.ಸರ್ಕಾರಿ ಸ್ವಾಮ್ಯದ ಆಕಾಶವಾಣಿಯೊಂದನ್ನು ಬಿಟ್ಟರೆ, ಈ ಹಿಂದೆ ಹ್ಯಾಂ ರೇಡಿಯೋ ಬಿಟ್ಟರೆ ಖಾಸಗಿ ಬಾನುಲಿ ಪ್ರಸಾರ ವ್ಯವಸ್ಥೆ ಎಂಬುದಿರಲಿಲ್ಲ. ಆದರೆ 2004ರಲ್ಲಿ ಜಾರಿಗೆ ಬಂದ `ಸಮುದಾಯ ಬಾನುಲಿ~ ವ್ಯವಸ್ಥೆಗೆ 2006ರಲ್ಲಿ ಕೇಂದ್ರ ಸರ್ಕಾರ ಕಠಿಣ ಕಾಯ್ದೆಗಳನ್ನು ರೂಪಿಸಿದೆ. ಈ ಮೂಲಕ ಖಾಸಗಿ ಸಮುದಾಯ ಬಾನುಲಿ ಕೇಂದ್ರಗಳ ಮೇಲೆ ಕಠಿಣ ನಿರ್ಬಂಧಗಳನ್ನೂ ಹೇರುವ ಮೂಲಕ ಅವುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿರುವುದು ಮುಕ್ತ ಆರ್ಥಿಕ ನೀತಿಯ ಸದ್ಯದ ಕಾಲಮಾನದಲ್ಲಿ ವಿವೇಚನೆಯ ಕ್ರಮ ಎನ್ನಲಾಗದು.ಸಮುದಾಯ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಲು ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸ್ವಾಯತ್ತ ಸಂಸ್ಥೆಗಳು, ನೋಂದಾಯಿತ ಟ್ರಸ್ಟ್‌ಗಳು ಹೆಚ್ಚಿನ ಆಸಕ್ತಿ ವಹಿಸಿವೆ. ಪ್ರಸ್ತುತ ದೇಶದಲ್ಲಿ 132 ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 600ಕ್ಕೂ ಹೆಚ್ಚು ಅರ್ಜಿಗಳು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮುಂದೆ  ಒಪ್ಪಿಗೆಗಾಗಿ ಕಾದಿವೆ.  ಸರ್ಕಾರದ ಕಟು ನಿಲುವು

ಸಮುದಾಯ ಬಾನುಲಿ ಕೇಂದ್ರಗಳ ಬಗೆಗಿನ ಕೇಂದ್ರ ಸರ್ಕಾರದ ಧೋರಣೆ ಕಟುವಾಗಿದೆ. ಸ್ಥಳೀಯ ಸಮುದಾಯದ ಅಭಿವೃದ್ಧಿಯನ್ನೇ ಗುರಿಯಾಗಿಟ್ಟುಕೊಂಡಿರುವ ಲಾಭದಾಯಕ ಸಂಪನ್ಮೂಲಗಳಿಲ್ಲದ ಈ ಬಾನುಲಿ ಕೇಂದ್ರಗಳಿಗೆ ಇದುವರೆಗೆ ಇದ್ದ ವಾರ್ಷಿಕ ಸ್ಪೆಕ್ಟ್ರಂ ಶುಲ್ಕವನ್ನು 19,700 ರೂಪಾಯಿಯಿಂದ 91 ಸಾವಿರ ರೂಪಾಯಿಗೆ ಹೆಚ್ಚಿಸಿರುವುದು ಸಮುದಾಯ ಬಾನುಲಿಯ ಬೆಳವಣಿಗೆಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ. ಸಮುದಾಯ ಬಾನುಲಿ ಕೇಂದ್ರಗಳ ಸಂಘವು ಈ ಶುಲ್ಕ ಹೆಚ್ಚಳದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟಕ್ಕಿಳಿದಿದೆ.ಕಮರ್ಷಿಯಲ್ ಎಫ್.ಎಂ. ರೇಡಿಯೋಗಳು ದೊಡ್ಡ ದೊಡ್ಡ ನಗರಗಳಲ್ಲಿರುವ ಕಾರಣ ಅವುಗಳು ಸಾಕಷ್ಟು ಜಾಹೀರಾತುಗಳಿಂದ ಲಾಭಗಳಿಸುತ್ತಿವೆ. ಇವುಗಳು ಸ್ವಂತ ಕಾರ್ಯಕ್ರಮ ರೂಪಿಸುವ ತಂಟೆಗೂ ಹೋಗುತ್ತಿಲ್ಲ. ಇವುಗಳದ್ದೇನಿದ್ದರೂ ಹಾಡು, ಹರಟೆ ಮತ್ತು  ಜಾಹೀರಾತುಗಳಿಗಷ್ಟೇ ಸೀಮಿತ.ಒತ್ತಡ ಜೀವನದಲ್ಲಿರುವ ನಗರದ ಜನರನ್ನು ಖುಷಿಪಡಿಸುವ ಕಾರ್ಯಕ್ರಮಗಳು ಅವಶ್ಯವಾಗಿರುವುದರಿಂದ ಕಮರ್ಷಿಯಲ್ ಎಫ್.ಎಂ. ಬಾನುಲಿಗಳಿಗೆ ಬೇಡಿಕೆ ಹೆಚ್ಚಿದ್ದು ಅವುಗಳ ಕೇಳುಗರೂ ಹೆಚ್ಚಾಗುತ್ತಿದ್ದಾರೆ. ಹೆಚ್ಚು ಚಾಲ್ತಿಗೆ ಬಂದ ಟೀವಿ ಚಾನೆಲ್‌ಗಳಿಂದಾಗಿ, ಮರೆತುಹೋಗಿದ್ದ ರೇಡಿಯೋ ಕೇಳುವ ಸಂಸ್ಕೃತಿಯನ್ನು ಮರು ಹುಟ್ಟುಹಾಕಿದ ಕೀರ್ತಿ ಇವುಗಳಿಗೆ ಸಲ್ಲಲೇಬೇಕು.ಆದರೆ ಸಮುದಾಯ ಬಾನುಲಿಯ ಕಲ್ಪನೆ ಮಾತ್ರ ಇದಕ್ಕೆ ತದ್ವಿರುದ್ಧ. ಸಮುದಾಯದ ಹಿತಕ್ಕೆ ಇಲ್ಲಿ ಅಗ್ರಸ್ಥಾನ. ಸ್ಥಳೀಯ ಜನರ ಬದುಕಿಗೆ ಆಸರೆಯಾಗಿ ನಿಂತು ಅವರ ದನಿಗೆ ದನಿಯಾಗುವುದರ ಜೊತೆಗೆ, ಇವುಗಳು ಸರ್ಕಾರ ಹಾಕಿರುವ ನಿಯಮ ಮತ್ತು ಕಟ್ಟುಪಾಡುಗಳನ್ನು ಮೀರಿ ಹೋಗುವಂತಿಲ್ಲ.ತನ್ನ ಮೇಲಿರುವ ನಿರ್ಬಂಧಗಳನ್ನು ಉಲ್ಲಂಘಿಸುವ ಧೈರ್ಯವನ್ನು ಯಾವುದೇ ಸಮುದಾಯ ಬಾನುಲಿ ಕೇಂದ್ರ ಮಾಡಿ ತನಗೆ ದೊರೆತಿರುವ ಪರವಾನಗಿಯನ್ನು ಕಳೆದುಕೊಂಡಿರುವ ಉದಾಹರಣೆಗಳಿಲ್ಲ. ಈ ದಿಶೆಯಲ್ಲಿ ಇವುಗಳು ಪಾಲಿಸಿಕೊಂಡು ಬಂದಿರುವ ಸ್ವಯಂ ಶಿಸ್ತುಪಾಲನೆಯನ್ನು ಮೆಚ್ಚಲೇಬೇಕು.ಸ್ಪೆಕ್ಟ್ರಂ ಶುಲ್ಕ ಹೆಚ್ಚಳದ ನಂತರ ಸಮುದಾಯ ಬಾನುಲಿ ಕೇಂದ್ರಗಳನ್ನು ಹೇಗೆ ನಿರ್ವಹಿಸಬೇಕೆಂದು ಅವುಗಳನ್ನು ನಡೆಸುತ್ತಿರುವ ಸಂಸ್ಥೆಗಳು ತಲೆಕೆಡಿಸಿಕೊಂಡಿವೆ. ಸರ್ಕಾರ ವಿಧಿಸಿರುವ ಹಲವು ಷರತ್ತುಗಳಲ್ಲಿ ಪ್ರತಿ ಗಂಟೆಗೆ 5 ನಿಮಿಷಗಳ ಜಾಹೀರಾತು ಹಾಕುವ ಅವಕಾಶ ನೀಡಲಾಗಿದೆ.ಆದರೆ ವಾಸ್ತವವಾಗಿ ಇಡೀ ದಿನದಲ್ಲೇ ಐದು ನಿಮಿಷದ ಜಾಹೀರಾತು ಸಹ ಈ ಕೇಂದ್ರಗಳಿಗೆ ಸಿಗುವುದಿಲ್ಲ. ಕಾರಣ ಇವುಗಳ ಪ್ರಸಾರದ ಅವಧಿ ಮತ್ತು ವಿಸ್ತಾರದ ವ್ಯಾಪ್ತಿ ಕಡಿಮೆ ಇರುವುದು. ಹಾಗಾಗಿ ಖಾಸಗಿಯವರು ಜಾಹೀರಾತು ನೀಡಲು ಮೂಗುಮುರಿಯುತ್ತಾರೆ. ಇನ್ನು ಕೇಂದ್ರ ಸರ್ಕಾರದ ಡಿಎವಿಪಿ ಜಾಹೀರಾತು ಪ್ರತಿ ಸೆಕೆಂಡ್‌ಗೆ 4 ರೂಪಾಯಿ ಇದೆ.ಸರ್ಕಾರದ ಮಾಹಿತಿಯಂತೆ ಕಳೆದ ಮಾರ್ಚ್ 31ರ ಹೊತ್ತಿಗೆ ಕೇವಲ ಒಂಬತ್ತು ಸಮುದಾಯ ಬಾನುಲಿ ಕೇಂದ್ರಗಳು ಮಾತ್ರ ಈ ಡಿಎವಿಪಿ ಪಟ್ಟಿಯಲ್ಲಿವೆ. ಕರ್ನಾಟಕದ ಒಂದು ಕೇಂದ್ರವೂ ಫಲಾನುಭವಿಗಳ ಪಟ್ಟಿಯಲ್ಲಿಲ್ಲ.ನಿಯಮಬದ್ಧವಾಗಿ ಕಾರ್ಯನಿರ್ವಹಿಸಿಕೊಂಡು ಬರುವ ಎಲ್ಲ ಸಮುದಾಯ ಬಾನುಲಿ ಕೇಂದ್ರಗಳಿಗೆ ಡಿಎವಿಪಿಯಿಂದ ಜಾಹೀರಾತು ಸಿಗುವಂತೆ ಮಾಡಿದರೆ ಈ ಬಾನುಲಿ ಕೇಂದ್ರಗಳು ಉಳಿದಾವು. ಇಲ್ಲವಾದರೆ ಇವುಗಳು ಮುಚ್ಚುವ ಸ್ಥಿತಿ ತಲುಪುವ ಸಂಭವವೇ ಹೆಚ್ಚು. ಈಗಿರುವ 132 ಸಮುದಾಯ ಬಾನುಲಿ ಕೇಂದ್ರಗಳ ಪೈಕಿ ಹತ್ತು ಮಾತ್ರ ಲಾಭದಾಯಕವಾಗಿ ನಡೆಯುತ್ತಿವೆ. ಉಳಿದವು ನಷ್ಟ ಅನುಭವಿಸುತ್ತಿವೆ.

ಸ್ಥಳೀಯ ಆಡಳಿತದ ನಿರ್ಲಕ್ಷ್ಯ

ಸ್ಥಳೀಯ ಜನಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವ ಸಮುದಾಯ ಬಾನುಲಿ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಯಾದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳು ಪ್ರಾಯೋಜಿತ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಈ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.ಆದರೆ ಕರ್ನಾಟಕದಲ್ಲಿರುವ ಬಾನುಲಿ ಕೇಂದ್ರಗಳ ದಿನ ನಿತ್ಯದ ಕಾರ್ಯಕ್ರಮಗಳನ್ನು ಅವಲೋಕಿಸಿದರೆ ಸ್ಥಳೀಯ ಆಡಳಿತದ ಪಾಲ್ಗೊಳ್ಳುವಿಕೆ ಅಷ್ಟಾಗಿ ಕಾಣುತ್ತಿಲ್ಲ. ಜನಸಾಮಾನ್ಯರಿಗೆ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗೆ ಅರಿವು ಮೂಡಿಸಲು ಸರ್ಕಾರಕ್ಕೆ ಇದಕ್ಕಿಂತ ಮತ್ತೊಂದು ಮುಕ್ತ ವೇದಿಕೆ ಸಿಗಲಾರದು.ಕರ್ನಾಟಕದಲ್ಲಿ ಈಗ ಇರುವ ಹತ್ತು ಬಾನುಲಿಗಳ ಪೈಕಿ ಮಂಗಳೂರಿನ ಸೇಂಟ್ ಅಲೋಸಿಸ್ ಕಾಲೇಜಿನ `ರೇಡಿಯೋ ಸಾರಂಗ~ ದಿನದ 24 ಗಂಟೆಯೂ ಕಾರ್ಯಕ್ರಮ ನಡೆಸುತ್ತಿದೆ. ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ನಡೆಸುವ `ರೇಡಿಯೋ ಸಿದ್ಧಾರ್ಥ~ ದಿನದಲ್ಲಿ ಮೂರು ಬಾರಿ ಒಟ್ಟು ಒಂಬತ್ತು ಗಂಟೆಗಳ ಅವಧಿಯಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದೆ.ಉಳಿದ ಕೇಂದ್ರಗಳೆಲ್ಲ ದಿನದಲ್ಲಿ ನಾಲ್ಕು ಗಂಟೆ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿವೆ. ಬಹುತೇಕ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನ ಜೊತೆಗೆ ಕಾರ್ಯಕ್ರಮಗಳಿಗೆ ಬೇಕಾದ ಸಂಪನ್ಮೂಲ ವ್ಯಕ್ತಿಗಳ ಕೊರತೆಯನ್ನೂ ಎದುರಿಸುತ್ತಿವೆ.ಕೇಂದ್ರ ಸರ್ಕಾರ ನೀಡಿರುವ ಸ್ಪೆಕ್ಟ್ರಂ ಅನ್ನು ಪೂರ್ಣವಾಗಿ ಜನ ಹಿತಕ್ಕೆ ಬಳಸಿಕೊಳ್ಳುವ ಬಗೆಗೆ ಸಮುದಾಯ ಬಾನುಲಿ ಕೇಂದ್ರಗಳು ಗಂಭೀರವಾಗಿ ಚಿಂತಿಸಬೇಕು. ಆಗ ಮಾತ್ರ ಸಮುದಾಯ ಬಾನುಲಿಗಳು ತಮ್ಮ ಉದ್ದೇಶ ಮತ್ತು ಗುರಿಯನ್ನು ಮುಟ್ಟಲು ಸಾಧ್ಯ.ರಾಜ್ಯದಲ್ಲಿರುವ ಸಮುದಾಯ ಬಾನುಲಿ ಕೇಂದ್ರಗಳು

ರೇಡಿಯೋ ಸಿದ್ಧಾರ್ಥ (90.8 ಮೆಗಾಹರ್ಟ್ಸ್) -ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು.ದಿವ್ಯವಾಣಿ ನೆಲದನಿ (90.8) -ದಿವ್ಯಜ್ಯೋತಿ ವಿದ್ಯಾಕೇಂದ್ರ, ನೆಲಮಂಗಲ.ಕೆ.ಸಿ.ಎಸ್.ಆರ್. ಧಾರವಾಡ (90.4) - ಧಾರವಾಡ ಕೃಷಿ ವಿವಿ.ಅಂತರವಾಣಿ (90.8) -ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ, ಗುಲ್ಬರ್ಗ.ನಮ್ಮ ಧ್ವನಿ (90.4) -ನಮ್ಮ ಧ್ವನಿ ಸಂಪನ್ಮೂಲ ಸಂಸ್ಥೆ, ಬೂದಿಕೋಟೆ, ಬಂಗಾರಪೇಟೆ ತಾಲ್ಲೂಕು.ರೇಡಿಯೋ ಆಯಕ್ಟಿವ್ (90.4) -ಭಗವಾನ್ ಮಹಾವೀರ ಜೈನ್ ಕಾಲೇಜು, ಬೆಂಗಳೂರು.ಕಮ್ಯುನಿಟಿ ರೇಡಿಯೋ ಮಣಿಪಾಲ್ (90.4) - ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್, ಮಣಿಪಾಲ್.ಕಮ್ಯುನಿಟಿ ರೇಡಿಯೋ ಸಾರಂಗ್ (107.8) -ಸೇಂಟ್ ಅಲೋಷಿಯಸ್ ಕಾಲೇಜು, ಮಂಗಳೂರು.ರೇಡಿಯೋ ಯೂನಿವರ್ಸಲ್ (106.8) -ಯೂನಿವರ್ಸಲ್ ಕಾಲೇಜು, ಬೆಂಗಳೂರು.ರಮಣ ಧ್ವನಿ (90.4) -ರಮಣಶ್ರೀ ಅಕಾಡೆಮಿ ಫಾರ್ ದ ಬ್ಲೈಂಡ್, ಬೆಂಗಳೂರು

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry