ಸಮುದಾಯ ಆರೋಗ್ಯ ಕೇಂದ್ರ ಎತ್ತಂಗಡಿ ?

ಭಾನುವಾರ, ಜೂಲೈ 21, 2019
23 °C

ಸಮುದಾಯ ಆರೋಗ್ಯ ಕೇಂದ್ರ ಎತ್ತಂಗಡಿ ?

Published:
Updated:

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ 2.15ಕೋಟಿ ವೆಚ್ಚದಲ್ಲಿ ಕೆಎಚ್‌ಎಸ್‌ಡಿಆರ್‌ಪಿ ಯೋಜನೆ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿಗೆ ಇಲಾಖೆಯ ಎಂಜಿನಿಯರ್ ಕಂಟಕರಾಗಿದ್ದಾರೆ. ಮಂಜೂರಾಗಿರುವ ಆರೋಗ್ಯ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವ ಹುನ್ನಾರ ನಡೆದ ಅಂಶ ಬೆಳಕಿಗೆ ಬಂದಿದೆ.ದೋರನಹಳ್ಳಿ ಗ್ರಾಮ ಪಂಚಾಯಿತಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 30 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದ ಕೇಂದ್ರವೆಂಬ ಹೆಗ್ಗಳಿಕೆಯಿದೆ. ಹೋಬಳಿ ಕೇಂದ್ರವು ಹೌದು. ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಕೇಂದ್ರಸ್ಥಾನವು ಇದಾಗಿದೆ.ಮೂರು ವರ್ಷಗಳ ಹಿಂದೆ ಗ್ರಾಮಸ್ಥರ ನಿರಂತರ ಹೋರಾಟದ ಮೂಲಕ 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆಯಿತು. ನಂತರ ಜಾಗದ ಸಮಸ್ಯೆಯಿಂದ ನಲುಗುತ್ತಿರುವಾಗ ಸರ್ಕಾರದ ಅಧೀನದಲ್ಲಿರುವ ನಾಲ್ಕು ಎಕರೆ ಜಮೀನು ನೀಡಲಾಗಿದೆ.ಟೆಂಡರ್ ಪ್ರಕ್ರಿಯೆಗಳು ಮುಗಿದು ಕಾಮಗಾರಿ ನಿರ್ಮಿಸಲು ಅವಶ್ಯಕ ಕಚ್ಚಾ ಸಾಮಗ್ರ್ರಿಗಳನ್ನು ಸಂಗ್ರಹಿಸಲಾಗಿದೆ. ಬೊರ್‌ವೆಲ್ ಕೊರೆಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಆರೋಗ್ಯ ಇಲಾಖೆಯ ಎಂಜಿನಿಯರ್  ಹೊಸ ರಾಗ ಶುರು ಮಾಡಿದ್ದಾರೆ. ಅಲ್ಲಿನ ಪ್ರದೇಶ ಸವಳಾಗಿದ್ದು ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಅಲ್ಲದೆ ಗ್ರಾಮದಿಂದ ಹೊರಗಡೆಯಿದ್ದು ಜನತೆ ಆಸ್ಪತ್ರೆಗೆ ಬರುವುದು ಅನುಮಾನ ಎಂಬ ಕೊಕ್ಕೆ ಹಾಕಿ ಕೆಲಸ ನಿರ್ವಹಿಸಲು ಅಡ್ಡಿಯಾಗಿದ್ದಾರೆ. ಕಾಮಗಾರಿ ಮಂಜೂರಾಗುವಾಗ ಇದೇ ಎಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಿರುವಾಗ ಈಗ ಇಲ್ಲದ ನೆಪ ಹೇಳಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಮಲ್ಲಯ್ಯ ಪೊಲ್ಲಂಪಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯಾವುದೇ ಕಾರಣಕ್ಕೂ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಕಟ್ಟಡ ನಿರ್ಮಾಣದ ತೊಂದರೆಯ ಬಗ್ಗೆ ಎಂಜಿನಿಯರ ಜೊತೆ ಸಮಾಲೋಚಿಸಿ ತ್ವರಿತವಾಗಿ ಕೆಲಸವನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗುವುದು ಇದರ ಬಗ್ಗೆ ಜಿಲ್ಲಾ ಪಂಚಾಯಿತಿ ಕೆಡಿಬಿ ಸಭೆಯಲ್ಲಿನ ಅಧಿಕಾರಿಗಳ ಜೊತೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗುವುದೆಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನಮೇಗೌಡ ಮರಕಲ್ ಸ್ಪಷ್ಟಪಡಿಸಿದ್ದಾರೆ.ಒಂದು ಮೂಲದ ಪ್ರಕಾರ ಯಾದಗಿರಿ ಮತಕ್ಷೇತ್ರದ ದೋರನಹಳ್ಳಿ ಗ್ರಾಮದಿಂದ ಶಹಾಪುರ ಕ್ಷೇತ್ರದ ಸಗರ ಗ್ರಾಮಕ್ಕೆ ಕಟ್ಟಡವನ್ನು ಸ್ಥಳಾಂತರಿಸುವ ಹುನ್ನಾರ ನಡೆದ ಬಗ್ಗೆ ಗುಮಾನಿಗಳಿವೆ.ಕೆಲ ರಾಜಕೀಯ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ  ಸ್ಥಳಾಂತರದ ಸಂಚು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೇ ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry