ಸಮುದಾಯ ಆಸ್ಪತ್ರೆಗೆ ‘ಬಾಲಗ್ರಹ’

7
ಸಿಬ್ಬಂದಿ, ಸೌಲಭ್ಯಗಳ ಕೊರತೆ

ಸಮುದಾಯ ಆಸ್ಪತ್ರೆಗೆ ‘ಬಾಲಗ್ರಹ’

Published:
Updated:

ನ್ಯಾಮತಿ: ಅದು ಸುತ್ತಮುತ್ತಲಿನ ಪ್ರದೇಶದ ಸಾವಿರಾರು ಬಡವರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕಾದ ಮೂವತ್ತು ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ. ಆದರೆ, ‘ಬಾಲಗ್ರಹ’ಕ್ಕೆ ತುತ್ತಾಗಿ ಸಂಕಷ್ಟಕ್ಕೀಡಾಗಿದೆ.ಇಲ್ಲಿನ ಆರು ಹಾಸಿಗೆಯ ಪ್ರಾಥಮಿಕ ಆರೋಗ್ಯ ಆಸ್ಪತ್ರೆಯನು್ನ ಮೇಲ್ದರ್ಜೆಗೆ ಏರಿಸಿ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಉದ್ಘಾಟಿಸಿದ್ದರು.ಆಸ್ಪತ್ರೆಯಲ್ಲಿ ಒಟ್ಟು 34 ಸಿಬ್ಬಂದಿ ಇರಬೇಕು. ಆದರೆ, ಎಂಟು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಂತ ಮತ್ತು ಆಯುಷ್‌ ವೈದ್ಯರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.‘ಮರಣೋತ್ತರ   ಮತ್ತು ವೈದ್ಯಕೀಯ ವರದಿ ನೀಡಲು ನಮಗೆ ಅಧಿಕಾರವಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉತ್ತರ ಕೊಡಲು ತುಂಬಾ ತೊಂದರೆ ಆಗುತ್ತದೆ’ ಎಂದು ಡಾ.ಪ್ರತಿಮಾ ಮತ್ತು ಡಾ.ಮಂಜನಾಯ್ಕ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಸಮುದಾಯ ಆಸ್ಪತ್ರೆಗೆ ವೈದ್ಯಾಧಿಕಾರಿಗಳು (4), ದಂತ ವೈದ್ಯರು (1), ಶುಶ್ರೂಷಕರು (6), ಪ್ರಯೋಗಶಾಲಾ (1), ಎಕ್ಸ್‌ರೇ ತಂತ್ರಜ್ಞರು(1), ಫಾರ್ಮಸಿಸ್ಟ್‌ (2), ನೇತ್ರ ಸಹಾಯಕರು (1), ಕಚೇರಿ ಅಧೀಕ್ಷಕರು  (1), ಪ್ರಥಮ ದರ್ಜೆ ಸಹಾಯಕ(1), ದ್ವಿತೀಯ ದರ್ಜೆ ಸಹಾಯಕ(1), ಕ್ಲರ್ಕ್‌ ಕಂ ಟೈಪಿಸ್ಟ್ (1), ವಾಹನ ಚಾಲಕರು(2), ಗ್ರೂಪ್‌–ಡಿ (12) ಹುದ್ದೆಗಳು ಸೇರಿದಂತೆ ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಆದರೆ, ಎಂಟು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 26 ಹುದ್ದೆಗಳು ಖಾಲಿ ಇವೆ.ಮುಖ್ಯವಾಗಿ ವೈದ್ಯಾಧಿಕಾರಿ ಹುದ್ದೆಯೇ ಖಾಲಿ ಇದೆ. ಎಕ್ಸ್‌ರೇ ಯಂತ್ರೋಪಕರಣಗಳು ಬಂದಿಲ್ಲ. ಹಾಸಿಗೆಗಳು ಸರಬರಾಜು ಆಗಿವೆ. ಆದರೆ, ಮಂಚಗಳು ಬಂದಿಲ್ಲ. ಮೂರಕ್ಕೂ ಹೆಚ್ಚು ಹೆರಿಗೆ ಕೇಸುಗಳು ಬಂದರೆ ನೆಲದ ಮೇಲೆ ಮಲಗಿಸುವ ಪರಿಸ್ಥಿತಿ ಇದೆ. ಅಪಘಾತದಿಂದ ಮೃತಪಟ್ಟ ಪ್ರಕರಣಗಳು ಬಂದರೆ ಶವವನು್ನ ಶವಾಗಾರಕ್ಕೆ ಸಾಗಿಸಲು ಸಿಬ್ಬಂದಿ ಇಲ್ಲ. ವೈದ್ಯರ ಮತ್ತು ದಾದಿಯರ ವಸತಿ ನಿಲಯಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಜನರೇಟರ್‌ ಬಿಸಿಲಿನಲ್ಲೇ ಇದೆ.ಉದ್ಘಾಟನೆಗೆ ತೋರಿಸಿದ ಆತುರವನ್ನು ಆಸ್ಪತ್ರೆ ನಿರ್ವಹಣೆಯಲ್ಲೂ ತೋರಿಸಬೇಕು. ಮುಂದೆ ರೋಗಿಗಳಿಗೆ ತೊಂದರೆ ಆಗದಂತೆ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು ವಿಶೇಷ ಕಾಳಜಿ ವಹಿಸಿ ಜನರಿಗೆ ಆರೋಗ್ಯ ಭಾಗ್ಯ ಒದಗಿಸಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry